ಇಂಧನ ಬೆಲೆ ಇಳಿಕೆ: ‘ಉಪಯುಕ್ತ ಅಂಶ’ಗಳನ್ನು ಹಂಚಿಕೊಂಡ ವಿತ್ತಸಚಿವೆ ನಿರ್ಮಲಾ ಸೀತಾರಾಮನ್

Update: 2022-05-22 18:24 GMT

ಹೊಸದಿಲ್ಲಿ,ಮೇ 22: ಇಂಧನಗಳ ಮೇಲಿನ ಅಬಕಾರಿ ಸುಂಕ ಕಡಿತದ ಕೇಂದ್ರದ ನಿರ್ಧಾರದ ವಿರುದ್ಧ ಪ್ರತಿಪಕ್ಷಗಳ ಎಡೆಬಿಡದ ಟೀಕೆಗಳ ಹಿನ್ನೆಲೆಯಲ್ಲಿ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ರವಿವಾರ ಸರಣಿ ಟ್ವೀಟ್‌ಗಳಲ್ಲಿ ವಿವರಗಳ ನೀಲನಕ್ಷೆಯನ್ನು ಹಂಚಿಕೊಂಡಿದ್ದು, ಅವುಗಳನ್ನು ‘ಉಪಯುಕ್ತ ಅಂಶಗಳು’ಎಂದು ಬಣ್ಣಿಸಿದ್ದಾರೆ. ಇಂಧನ ಬೆಲೆ ಕಡಿತದ ಸಂಪೂರ್ಣ ಹೊರೆಯನ್ನು ಕೇಂದ್ರ ಸರಕಾರವೇ ಸಂಪೂರ್ಣವಾಗಿ ಭರಿಸಿದೆ ಎಂದು ಅವರು ಹೇಳಿದ್ದಾರೆ.

ಇಂಧನ ಬೆಲೆಗಳ ಇಳಿಕೆಯನ್ನು ಸಂಪೂರ್ಣವಾಗಿ ರಸ್ತೆ ಮತ್ತು ಮೂಲಸೌಕರ್ಯ ಸೆಸ್‌ನಿಂದ ಮಾಡಲಾಗಿದೆ ಮತ್ತು ಕಡಿತಗಳನ್ನು ಪ್ರಕಟಿಸಿದ ಕಳೆದ ನವಂಬರ್‌ನಲ್ಲಿ ಅಥವಾ ಶನಿವಾರ ರಾಜ್ಯಗಳೊಂದಿಗೆ ಹಂಚಿಕೊಳ್ಳಲಾಗುವ ಮೂಲ ಅಬಕಾರಿ ಸುಂಕಕ್ಕೆ ಕೈಹಚ್ಚಲಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

2014-22ರ ಅವಧಿಯಲ್ಲಿ ಮೋದಿ ಸರಕಾರವು ಒಟ್ಟು 90.9 ಲ.ಕೋ.ರೂ.ಗಳ ಅಭಿವೃದ್ಧಿ ವೆಚ್ಚವನ್ನು ಮಾಡಿದೆ ಎಂದು  ಆರ್‌ಬಿಐ  ದತ್ತಾಂಶಗಳು ತೋರಿಸಿವೆ. ಇದಕ್ಕೆ ವಿರುದ್ಧವಾಗಿ 2004-2014 ಅವಧಿಯಲ್ಲಿ ಕೇವಲ 49.2 ಲ.ಕೋ.ರೂ.ಗಳ ಅಭಿವೃದ್ಧಿ ವೆಚ್ಚವನ್ನು ಮಾಡಲಾಗಿತ್ತು ಎಂದೂ ಅವರು ಹೇಳಿದ್ದಾರೆ.

ಕೇಂದ್ರ ಸರಕಾರವು ಇಂಧನ ಬೆಲೆಗಳನ್ನು ತಗ್ಗಿಸಿರುವುದು ಕಣ್ಣೊರೆಸುವ ತಂತ್ರವಾಗಿದೆ ಎಂದು ರವಿವಾರ ಬೆಳಿಗ್ಗೆ ಟ್ವೀಟಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು, ಈಗ ಮತ್ತೆ 80 ಪೈಸೆ ಹಾಗೂ 30 ಪೈಸೆಗಳ ದೈನಂದಿನ ಡೋಸ್‌ಗಳಲ್ಲಿ  ಪೆಟ್ರೋಲ್ ‘ವಿಕಾಸ’ ಹೊಂದುವುದನ್ನು ನಿರೀಕ್ಷಿಸಿ ಎಂದು ಹೇಳಿದ್ದಾರೆ. ಜನರನ್ನು ಮೂರ್ಖರನ್ನಾಗಿಸುವುದನ್ನು ನಿಲ್ಲಿಸಿ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಅವರು ಟ್ವೀಟ್‌ನಲ್ಲಿ  ಸೀತಾರಾಮನ್ರನ್ನು ಆಗ್ರಹಿಸಿದ್ದಾರೆ.
                
ನಾನು ಸರಿಪಡಿಸಿದ್ದೇನೆ:ಚಿದಂಬರಂ

ಕೇಂದ್ರ ಸರಕಾರವು ಹೆಚ್ಚಿನ ಹಣವನ್ನು ವಿನಿಯೋಗಿಸದಿದ್ದರೆ ಅಥವಾ ಹೆಚ್ಚಿನ ಅನುದಾನವನ್ನು ನೀಡದಿದ್ದರೆ ರಾಜ್ಯಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಅನ್ನು ತಗ್ಗಿಸಲು ಸಾಧ್ಯವೇ ಎಂದು ರವಿವಾರ ಪ್ರಶ್ನಿಸಿರುವ ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರು,ರಾಜ್ಯಗಳ ಸ್ಥಿತಿ ಈಗ ‘ಅತ್ತ ದರಿ ಇತ್ತ ಪುಲಿ ’ಎಂಬಂತಾಗಿದೆ ಎಂದು ಹೇಳಿದ್ದಾರೆ.‘ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತದ ಅಧಿಸೂಚನೆ ಈಗ ಲಭ್ಯವಾಗಿದೆ. ವಿತ್ತಸಚಿವೆ ‘ಅಬಕಾರಿ ಸುಂಕ’ಎಂಬ ಶಬ್ದಗಳನ್ನು ಬಳಸಿದ್ದಾರೆ,ಆದರೆ ಕಡಿತವನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳದಿರುವ ಹೆಚ್ಚುವರಿ ಅಬಕಾರಿ ಸುಂಕದಿಂದ ಮಾಡಲಾಗಿದೆ. ಹೀಗಾಗಿ ನಾನು ಶನಿವಾರ ಹೇಳಿದ್ದಕ್ಕೆ ವ್ಯತಿರಿಕ್ತವಾಗಿ ಕೇಂದ್ರದ ಮೇಲೆ ಸಂಪೂರ್ಣ ಹೊರೆ ಬೀಳುತ್ತದೆ. ಅಷ್ಟರ ಮಟ್ಟಿಗೆ ನಾನು ಸರಿಪಡಿಸಿದ್ದೇನೆ ’ ಎಂದು ಚಿದಂಬರಂ ಸರಣಿ ಟ್ವೀಟ್‌ಗಳಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News