300 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಬಾಲಕ ನೀರಿನಲ್ಲಿ ಮುಳುಗಿ ಸಾವು: ಮರಣೋತ್ತರ ಪರೀಕ್ಷೆ ವರದಿ
Update: 2022-05-23 23:53 IST
ಹೋಶಿಯಾರ್ಪುರ, ಮೇ 22: ಮುನ್ನೂರು ಅಡಿ ಆಳದ ಕೊಳವೆ ಬಾವಿಗೆ ಬಿದ್ದ 6 ವರ್ಷದ ಬಾಲಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ ಎಂದು ಮರಣೋತ್ತರ ಪರೀಕ್ಷೆಯ ವರದಿ ತಿಳಿಸಿದೆ.
ಬಾಲಕ ಋತಿಕ್ ರೋಷನ್ ಬಿದ್ದು ಮೃತಪಟ್ಟ ಕೊಳವೆ ಬಾವಿ ಇರುವ ಹೊಲದ ಮಾಲಕ ಸಾತ್ವಿರ್ ಸಿಂಗ್ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬೈರಾಮ್ಪುರ ಸಮೀಪದ ಖಿಯಾಲಾ ಬುಲಂದಾ ಗ್ರಾಮದಲ್ಲಿರುವ ಹೊಲದಲ್ಲಿ ಋತಿಕ್ ರವಿವಾರ ಆಟವಾಡುತಿದ್ದ. ಈ ಸಂದರ್ಭ ಕೆಲವು ಬೀದಿ ನಾಯಿಗಳು ಅಟಿಸಿಕೊಂಡು ಬಂದ ಹಿನ್ನೆಲೆಯಲ್ಲಿ ಕೊಳವೆ ಬಾವಿಯ ಹಿಡಿಕೆ ಮೇಲೆ ಹತ್ತಿದ್ದ. ಈ ಸಂದರ್ಭ ದುರ್ಘಟನೆ ಸಂಭವಿಸಿದೆ.
‘‘ಋತಿಕ್ನ ಮರಣೋತ್ತರ ಪರೀಕ್ಷೆಯಲ್ಲಿ ಶ್ವಾಸಕೋಸದಲ್ಲಿ ಹೆಚ್ಚುವರಿ ನೀರು ಕಂಡು ಬಂದಿದೆ. ಆದುದರಿಂದ ಬಾಲಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ’’ ಎಂದು ಸ್ಥಳೀಯ ಸರಕಾರಿ ಆಸ್ಪತ್ರೆಯ ಹಿರಿಯ ವೈದ್ಯಕೀಯ ಅಧಿಕಾರಿ ಡಾ. ಸುನೀಲ್ ಭಗತ್ ಅವರು ಸೋಮವಾರ ಹೇಳಿದ್ದಾರೆ.