ಜಿಲ್ಲೆಗೆ ಅಂಬೇಡ್ಕರ್‌ ಹೆಸರಿಡುವುದನ್ನು ವಿರೋಧಿಸಿ ಪ್ರತಿಭಟನೆ: ಆಂಧ್ರ ಸಚಿವರ ಮನೆಗೆ ಬೆಂಕಿ

Update: 2022-05-24 18:04 GMT

ಹೈದರಾಬಾದ್, ಮೇ 24: ನೂತನವಾಗಿ ರೂಪಿಸಲಾದ ಕೋನಸೀಮಾ ಜಿಲ್ಲೆಗೆ ಬಿ.ಆರ್. ಅಂಬೇಡ್ಕರ್ ಕೋನಸೀಮಾ ಜಿಲ್ಲೆ ಎಂದು ಮರು ನಾಮಕರಣ ಪ್ರಸ್ತಾವ ಕುರಿತಂತೆ ಉದ್ರಿಕ್ತ ಪ್ರತಿಭಟನಕಾರರ ಗುಂಪೊಂದು ಆಂಧ್ರಪ್ರದೇಶದ ಅಮಲಾಪುರಂ ಪಟ್ಟಣದಲ್ಲಿ ರಾಜ್ಯ ಸಾರಿಗೆ ಸಚಿವ ಪಿ.ವಿಶ್ವರೂಪ ಅವರ ನಿವಾಸಕ್ಕೆ ಮಂಗಳವಾರ ಬೆಂಕಿ ಹಚ್ಚಿದೆ.

ಸಚಿವರು ಹಾಗೂ ಅವರ ಕುಟುಂಬವನ್ನು ಪೊಲೀಸರು ಸುರಕ್ಷಿತವಾಗಿ ಕರೆದೊಯ್ದಿದ್ದಾರೆ.

ಪೊಲೀಸ್ ವಾಹನ ಹಾಗೂ ಶಿಕ್ಷಣ ಸಂಸ್ಥೆಗಳ ಬಸ್‌ಗಳಿಗೆ ಕೂಡ ಪ್ರತಿಭಟನಕಾರರು ಬೆಂಕಿ ಹಚ್ಚಿದ್ದಾರೆ. ಪ್ರತಿಭಟನಕಾರರು ಕಲ್ಲು ತೂರಾಟ ನಡೆಸಿದ ಪರಿಣಾಮ ಹಲವು ಪೊಲೀಸರು ಗಾಯಗೊಂಡಿದ್ದಾರೆ. ‘ಈ ಘಟನೆಯಲ್ಲಿ 20 ಪೊಲೀಸ್ ಸಿಬ್ಬಂದಿ ಗಾಯಗೊಂಡಿರುವುದು ದುರಾದೃಷ್ಟಕರ. ನಾವು ಈ ಘಟನೆಯ ಬಗ್ಗೆ ಕೂಲಂಕುಷ ತನಿಖೆ ನಡೆಸಲಿದ್ದೇವೆ ಹಾಗೂ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಿದ್ದೇವೆ’’ ಎಂದು ರಾಜ್ಯ ಗೃಹ ಸಚಿವೆ ತನೇತಿ ವನಿತಾ ಅವರು ಹೇಳಿದ್ದಾರೆ.

ಬೆಂಕಿ ಹಚ್ಚಲು ಪ್ರತಿಭಟನಕಾರರಿಗೆ ಕೆಲವು ರಾಜಕೀಯ ಪಕ್ಷಗಳು ಹಾಗೂ ಸಮಾಜ ವಿರೋಧಿ ಶಕ್ತಿಗಳು ಉತ್ತೇಜನ ನೀಡಿವೆ ಎಂದು ವನಿತಾ ಆರೋಪಿಸಿದ್ದಾರೆ.

ಎಪ್ರಿಲ್ 4ರಂದು ಈ ಹಿಂದಿನ ಪೂರ್ವ ಗೋದಾವರಿ ಜಿಲ್ಲೆಯಿಂದ ನೂತನ ಕೋನಸೀಮಾ ಜಿಲ್ಲೆಯನ್ನು ರೂಪಿಸಲಾಗಿತ್ತು. ಕಳೆದ ವಾರ ಸರಕಾರ ಅಧಿಸೂಚನೆ ಹೊರಡಿಸಿ ಕೋನಸೀಮಾವನ್ನು ಬಿ.ಆರ್. ಅಂಬೇಡ್ಕರ್ ಕೋನಸೀಮಾ ಜಿಲ್ಲೆಯೆಂದು ಮರು ನಾಮಕರಣ ಮಾಡಲಾಗುವುದು ಎಂದು ಹೇಳಿತ್ತು. ಅಲ್ಲದೆ, ಜನರಿಂದ ಆಕ್ಷೇಪವನ್ನು ಆಹ್ವಾನಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News