ಒಡಿಶಾ: ಬಸ್ ಅಪಘಾತ ; 6 ಪ್ರವಾಸಿಗರು ಸಾವು, 40 ಮಂದಿಗೆ ಗಾಯ

Update: 2022-05-25 18:04 GMT
 (Photo | EPS)

ಬೆರ್ಹಾಮ್ಪುರ, ಮೇ 25: ಒಡಿಶಾದ ಕಂಧಮಲ್ ಹಾಗೂ ಗಂಜಾಮ್ ಜಿಲ್ಲೆಗಳ ಗಡಿಯ ಕಳಿಂಗಾ ಘಾಟ್ನ ರಸ್ತೆಯಲ್ಲಿ ಬಸ್ಸೊಂದು ಮಂಗಳವಾರ ರಾತ್ರಿ ಕೆಳಗೆ ಉರುಳಿ ಬಿದ್ದ ಪರಿಣಾಮ ನಾಲ್ವರು ಮಹಿಳೆಯರು ಸೇರಿದಂತೆ ಪಶ್ಚಿಮಬಂಗಾಳದ ಕನಿಷ್ಠ 6 ಮಂದಿ ಪ್ರವಾಸಿಗರು ಸಾವನ್ನಪ್ಪಿದ್ದಾರೆ. ಅಲ್ಲದೆ, 40 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಂಜಾಂನ ದುರ್ಗಾಪ್ರಸಾದ್ ಗ್ರಾಮದ ಸಮೀಪ ಮಧ್ಯರಾತ್ರಿ ಈ ಘಟನೆ ನಡೆದಿದೆ. ಗಾಯಗೊಂಡವರಲ್ಲಿ 15 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಸ್ಸು 77 ಮಂದಿಯನ್ನು ಕರೆದೊಯ್ಯುತ್ತಿತ್ತು. ಇವರಲ್ಲಿ 65 ಮಂದಿ ಪಶ್ಚಿಮಬಂಗಾಳದ ಹೌರಹ್ ಹಾಗೂ ಹೂಗ್ಲಿ ಜಿಲ್ಲೆಯವರು. ಇವರು ಕಂಧಮಲ್ ಜಿಲ್ಲೆಯ ದಾರಿಂಗಿಬಂದಿಯಿಂದ ಆಂಧ್ರಪ್ರದೇಶದ ವಿಶಾಖಪಟ್ಟಣದತ್ತ ತೆರಳುತ್ತಿದ್ದರು. ಈ ಸಂದರ್ಭ ಅಪಘಾತ ಸಂಭವಿಸಿದೆ ಎಂದು ಗಂಜಾಮ್ನ ಪೊಲೀಸ್ ಅಧೀಕ್ಷಕ ಬ್ರಿಜೇಶ್ ರಾಯ್ ಅವರು ತಿಳಿಸಿದ್ದಾರೆ. ಸಮೀಪದ ಭಂಜನಗರದಿಂದ ಪೊಲೀಸರು ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ ಹಾಗೂ ಪ್ರಯಾಣಿಕರನ್ನು ರಕ್ಷಿಸಿದ್ದಾರೆ.

40 ಮಂದಿಗೆ ಗಂಭೀರ ಗಾಯಗಳಾಗಿವೆ. ಇತರರಿಗೆ ಅಲ್ಪಸ್ವಲ್ಪ ಗಾಯಗಳಾಗಿವೆ. ಬೆಟ್ಟ ಪ್ರದೇಶದ ತಿರುವಿನಲ್ಲಿ ಬಸ್ನ ಚಾಲಕನಿಗೆ ನಿಯಂತ್ರಣ ತಪ್ಪಿ ಈ ದುರಂತ ಸಂಭವಿಸಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News