ಮುಸ್ಲಿಂ ಸಹಪಾಠಿಗೆ ಕಿರುಕುಳ ಆರೋಪ: ವಿದ್ಯಾರ್ಥಿಯನ್ನು ಅಮಾನತುಗೊಳಿಸಿದ ವಿಶ್ವವಿದ್ಯಾಲಯ

Update: 2022-05-26 06:22 GMT

ಹೊಸದಿಲ್ಲಿ:   ಸಹ-ಮುಸ್ಲಿಂ ವಿದ್ಯಾರ್ಥಿಗೆ ಮೌಖಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡಿದ ಆರೋಪದ ಮೇಲೆ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ವಿದ್ಯಾರ್ಥಿಯನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

ಅಮಾನತುಗೊಂಡ ಯುವಕನನ್ನು ಎಂಎ  ಸ್ನಾತಕೋತ್ತರ ವಿದ್ಯಾರ್ಥಿ ರಿಷಿ ತಿವಾರಿ ಎಂದು ಗುರುತಿಸಲಾಗಿದೆ. ಮುಸ್ಲಿಂ ವಿದ್ಯಾರ್ಥಿಯೊಬ್ಬರು ದ್ವೇಷದ ಅಪರಾಧದ ಬಗ್ಗೆ ದೂರು ನೀಡಿದ ನಂತರ,‌ ಶಿಕ್ಷೆಗೆ ಒತ್ತಾಯಿಸಿ ವಿದ್ಯಾರ್ಥಿಗಳ ಗುಂಪು ಪ್ರತಿಭಟನೆಗಳನ್ನು ನಡೆಸಿದೆ. ಇದರ ಬಳಿಕ ರಿಷಿ ತಿವಾರಿಯನ್ನು ಅಮಾನತುಗೊಳಿಸಲಾಗಿದೆ ಎಂದು maktoobmedia ವರದಿ ಮಾಡಿದೆ.

 ತಿವಾರಿ  ಬಲಪಂಥೀಯ ಸಂಘಟನೆ ಆರ್‌ಎಸ್‌ಎಸ್‌ನ ವಿದ್ಯಾರ್ಥಿ ವಿಭಾಗವಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ವಿದ್ಯಾರ್ಥಿಗಳು ಮಕ್ತೂಬ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

 ಮೇ 1 ರಂದು ಈ ಘಟನೆ ನಡೆದಿದೆ.  ಮೇ 1 ರಂದು, ಮುಸ್ಲಿಂ ವಿದ್ಯಾರ್ಥಿ ಕೆಜಿಎ ಹಾಸ್ಟೆಲ್ ಬಳಿ ತನ್ನ ಉಪವಾಸ (ರೋಜಾ) ಮುರಿಯಲು ಬಂದಿದ್ದಾಗ ತಿವಾರಿ ಅವರನ್ನು ನಿಂದಿಸಲು ಪ್ರಾರಂಭಿಸಿದ್ದಾನೆ, ಹಾಗೂ ಅವರ ಆಹಾರವನ್ನು ಎಸೆದು, ಮುಖದ ಮೇಲೆ ಉಗುಳಿದ್ದಾನೆ ಎಂದು ವರದಿಯಾಗಿದೆ.

 ಅಮಾನತಿನ ನಂತರವೂ, ವಿದ್ಯಾರ್ಥಿಗಳ ಗುಂಪು ವಿಶ್ವವಿದ್ಯಾಲಯದ ನಿರ್ಧಾರದಿಂದ ತೃಪ್ತರಾಗಿಲ್ಲ.  "ಇದು ದ್ವೇಷದ ಅಪರಾಧ ಮತ್ತು ಇದನ್ನು ಅತ್ಯಂತ ಗಂಭೀರ ರೀತಿಯಲ್ಲಿ ತೆಗೆದುಕೊಳ್ಳಬೇಕು" ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.


 "ಅಪರಾಧಿಯನ್ನು ಹೊರಹಾಕುವ ಅಗತ್ಯವಿದೆ ಅಥವಾ ಕನಿಷ್ಠ ಒಂದು ವರ್ಷದ ಪೂರ್ಣ ಅಮಾನತು ಅಗತ್ಯವಿದೆ," ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. 

 ವಿದ್ಯಾರ್ಥಿಗಳ ಗುಂಪು, ತಿವಾರಿ ಕೃತ್ಯವನ್ನು "ಇಸ್ಲಾಮೋಫೋಬಿಕ್" ಎಂದು ಕರೆದಿದೆ.

 "ಆ್ಯಂಟಿ ರ್ಯಾಗಿಂಗ್ ಸೆಲ್ ಈ ಸಮಸ್ಯೆಯನ್ನು ರ್ಯಾಗಿಂಗ್ ಕ್ರಿಯೆಯಾಗಿ ಪರಿಗಣಿಸಬೇಕು ಮತ್ತು ನಾವು ವಿಶ್ವವಿದ್ಯಾನಿಲಯಕ್ಕೆ ಸೇರುವ ಮೊದಲು ರ್ಯಾಗಿಂಗ್ ವಿರೋಧಿ ಅಫಿಡವಿಟ್‌ಗಳಿಗೆ ಸಹಿ ಮಾಡಿದಂತೆ, ಶಿಕ್ಷೆಯನ್ನು ವಿಧಿಸಬೇಕು" ಎಂದು ವಿದ್ಯಾರ್ಥಿಗಳ ಗುಂಪು ನೀಡಿದ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News