ಚೀನಾದಿಂದ 50,000 ಪಿಪಿಇ ಕಿಟ್ ಖರೀದಿಸಿದ ಬಗ್ಗೆ ಬೆನ್ನು ತಟ್ಟಿಕೊಂಡಿದ್ದ ಹಿಮಂತ ಬಿಸ್ವಾ ಶರ್ಮಾ

Update: 2022-05-26 12:41 GMT
Photo: Twitter/@himantabiswa

ಗುವಾಹಟಿ: ಎಪ್ರಿಲ್ 2020ರಲ್ಲಿ ಅಸ್ಸಾಂನ ಆಗಿನ ಆರೋಗ್ಯ ಸಚಿವ ಹಾಗೂ ಈಗಿನ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿಕೆಯೊಂದನ್ನು ನೀಡಿ ರಾಜ್ಯದ ಆರೋಗ್ಯ ಇಲಾಖೆಯು ಕೋವಿಡ್ ಸಾಂಕ್ರಾಮಿಕವನ್ನು ನಿಭಾಯಿಸಲು ಚೀನಾದಿಂದ 50,000 ಪಿಪಿಇ ಕಿಟ್‍ಗಳನ್ನು ಖರೀದಿಸಿದೆ, ರಾಜ್ಯವೊಂದು ತಾನಾಗಿಯೇ ಇಂತಹ ಕ್ರಮ ಮೊದಲ ಬಾರಿಗೆ ಕೈಗೊಂಡಿದೆ ಎಂದು ಹಿಮಂತ ಬಿಸ್ವಾ ಶರ್ಮಾ ಹೇಳಿಕೊಂಡಿದ್ದರು ಎಂದು thewire.in ವರದಿ ಮಾಡಿದೆ.

ರಾಜ್ಯವು ಇಂತಹ ಒಂದು ಖರೀದಿಯನ್ನು ಮಾಡಿಯೇ ಇಲ್ಲವೆಂದು ರಾಷ್ಟ್ರೀಯ ಆರೋಗ್ಯ ಮಿಷನ್‍ನ ರಾಜ್ಯ ಘಟಕ ನೀಡಿದ ಆರ್ ಟಿ ಐ ಉತ್ತರವೊಂದು ಈಗ ತಿಳಿಸಿದೆ.

ಶರ್ಮಾ ಅವರು ಚೀನಾದಿಂದ ಪಿಪಿಇ ಕಿಟ್ ಹೊತ್ತು ತಂದಿತ್ತೆನ್ನಲಾದ ಕಾರ್ಗೋ ವಿಮಾನದ ಎದುರು ಫೋಟೋಗಳನ್ನೂ ಕ್ಲಿಕ್ಕಿಸಿ ಸಾಕಷ್ಟು ಪ್ರಚಾರ ಗಿಟ್ಟಿಸಿದ್ದರಲ್ಲದೆ ಹಲವು ಮಾಧ್ಯಮಗಳೂ ಇದಕ್ಕೆ ಬಹಳಷ್ಟು ಪ್ರಚಾರ ನೀಡಿತ್ತು.

"ಭಾರತ ಸರಕಾರ ಚೀನಾದಿಂದ 1.70 ಲಕ್ಷ ಪಿಪಿಇ ಕಿಟ್ ಖರೀದಿಸಿದ್ದರೆ, ನಾವು 50,000 ಪಿಪಿಇ ಕಿಟ್‍ಗಳನ್ನು ಚೀನಾದ ಗುವಾಂಗ್‍ಝೌನಿಂದ ಖರೀದಿಸಿದ್ದೇವೆ ರಾಜ್ಯವೊಂದು ತಾನಾಗಿಯೇ ಇಷ್ಟೊಂದು ದೊಡ್ಡ ಪ್ರಮಾಣದ ಖರೀದಿ ಮಾಡಿರುವುದು ಪ್ರಾಯಶಃ ಇದೇ ಮೊದಲ ಬಾರಿ,'' ಎಂದಿದ್ದರು.

ಆದರೆ ಈ ವರ್ಷದ ಮಾರ್ಚ್ 10ರಂದು ದಿ ಕ್ರಾಸ್ ಕರೆಂಟ್‍ಗೆ ನೀಡಿದ ಆರ್ ಟಿ ಐ ಉತ್ತರದಲ್ಲಿ ರಾಷ್ಟ್ರೀಯ ಆರೋಗ್ಯ ಮಿಷನ್‍ನ ರಾಜ್ಯ ಘಟಕವು ನೀಡಿದ ಮಾಹಿತಿಯಂತೆ ಚೀನಾದಿಂದ ಅಸ್ಸಾಂ ಯಾವತ್ತೂ ಪಿಪಿಇ ಕಿಟ್ ಖರೀದಿಸಿಲ್ಲ.

ಈ ಬೆಳವಣಿಗೆ ಕುರಿತು ಅಸ್ಸಾಂ ಸರಕಾರ ಇನ್ನೂ ಪ್ರತಿಕ್ರಿಯಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News