×
Ad

ಜ್ಞಾನವಾಪಿ ಪ್ರಕರಣ: ಹಿಂದೂ ವಾದಿಗಳ ಅರ್ಜಿ ತಿರಸ್ಕರಿಸುವಂತೆ ಕೋರುವ ಅರ್ಜಿಯ ವಿಚಾರಣೆ ಮೇ 30ಕ್ಕೆ ಮುಂದೂಡಿಕೆ

Update: 2022-05-26 23:48 IST

ವಾರಾಣಸಿ, ಮೇ 26: ವಾರಾಣಸಿಯ ಜ್ಞಾನವಾಪಿ ಮಸೀದಿಯ ಆವರಣದಲ್ಲಿ ತಡೆರಹಿತ ಪೂಜೆ ಮಾಡಲು ಅವಕಾಶ ಕೋರುವ ಅರ್ಜಿಯ ವಿಚಾರಣಾರ್ಹತೆಯನ್ನು ಪ್ರಶ್ನಿಸಿ ಅಂಜುಮಾನ್ ಇಂತಿಝಾಮಿಯ ಮಸ್ಜೀದ್ ಸಮಿತಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ವಾರಾಣಸಿ ಜಿಲ್ಲಾ ನ್ಯಾಯಾಲಯವು ಗುರುವಾರ ಮೇ 30ಕ್ಕೆ ಮುಂದೂಡಿದೆ.

ಈ ಸಮಿತಿಯು ಮಸೀದಿಯ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದೆ.

ಕಾಶಿ ವಿಶ್ವನಾಥ-ಜ್ಞಾನವಾಪಿ ಮಸೀದಿ ಸಂಕೀರ್ಣದ ಒಳಗೆ ಇರುವ ಶೃಂಗಾರ ಗೌರಿ ಸ್ಥಳದಲ್ಲಿ ತಡೆಯಿಲ್ಲದೆ ಪೂಜೆ ಮಾಡುವ ಹಕ್ಕಿಗಾಗಿ ಹಿಂದೂ ದೂರುದಾರರು ಸಲ್ಲಿಸಿರುವ ಅರ್ಜಿಯನ್ನು ರದ್ದುಗೊಳಿಸಬೇಕೆಂದು ಸಮಿತಿಯು ತನ್ನ ಅರ್ಜಿಯಲ್ಲಿ ಕೋರಿದೆ.

ಜ್ಞಾನವಾಪಿ ಮಸೀದಿಯ ಆವರಣದಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂಬ ಊಹಾಪೋಹಗಳ ಹಿನ್ನೆಲೆಯಲ್ಲಿ ಈ ಬೆಳವಣಿಗೆಗಳು ನಡೆದಿವೆ. ವಿಚಾರಣೆಯ ವೇಳೆ, ಅರ್ಜಿದಾರರು, ವಕೀಲರು ಮತ್ತು ಪ್ರತಿವಾದಿಗಳನ್ನು ಮಾತ್ರ ನ್ಯಾಯಾಲಯದ ಒಳಗೆ ಬಿಡಲಾಯಿತು. ಮಧ್ಯಾಹ್ನ 2 ಗಂಟೆಗೆ ಆರಂಭಗೊಂಡ ವಿಚಾರಣೆಯು ಎರಡು ಗಂಟೆಗಳ ಕಾಲ ನಡೆಯಿತು.

ಹಿಂದೂ ಬಣವು ಸಲ್ಲಿಸಿದ ಮೊಕದ್ದಮೆಯು ವಿಚಾರಣಾರ್ಹವಲ್ಲ ಹಾಗೂ ಕೋಡ್ ಆಫ್ ಸಿವಿಲ್ ಪ್ರೊಸೀಜರ್ಸ್ (ಸಿಪಿಸಿ)ನ ಆದೇಶ 7 ನಿಯಮ 11ರಡಿ ತಿರಸ್ಕರಿಸಬೇಕು ಎಂಬುದಾಗಿ ಮಸೀದಿ ಸಮಿತಿಯು ವಾದಿಸಿತು. ಜನರ ಭಾವನೆಗಳನ್ನು ಪ್ರಚೋದಿಸುವುದಕ್ಕಾಗಿ ‘ಶಿವಲಿಂಗ’ ಬಗ್ಗೆ ಊಹಾಪೋಹಗಳನ್ನು ಹರಡಲಾಗುತ್ತಿದೆ ಎಂದು ಅದು ಹೇಳಿತು.

ಮುಸ್ಲಿಮ್ ಬಣದ ಪರವಾಗಿ ವಾದಿಸುತ್ತಿರುವ ವಕೀಲರ ಪೈಕಿ ಓರ್ವರಾಗಿರುವ ಅಭಯ್‌ನಾಥ್ ಯಾದವ್, ದಾವೆಯನ್ನು ರದ್ದುಗೊಳಿಸಬೇಕೆಂದು ಕೋರಿ ಹಲವು ವಾದಗಳನ್ನು ಮಂಡಿಸಿದರು.

ಹಿಂದೂ ಮಹಿಳೆಯರ ಪರವಾಗಿ ವಾದಿಸಿದ ವಕೀಲ ವಿಷ್ಣು ಜೈನ್, ‘‘ಇಂದು, ಮುಸ್ಲಿಮ್ ಬಣವು ನಮ್ಮ ಅರ್ಜಿಯಲ್ಲಿನ ಪ್ಯಾರಾಗ್ರಾಫ್‌ಗಳನ್ನು ಓದಿ ಹೇಳಿತು ಹಾಗೂ ಅರ್ಜಿಯು ವಿಚಾರಣಾ ಯೋಗ್ಯವಲ್ಲ ಎಂದು ಹೇಳಲು ಪ್ರಯತ್ನಿಸಿತು. ನಾವು ಮಧ್ಯಪ್ರವೇಶಿಸಿ, ನಮಗೆ ನಿರ್ದಿಷ್ಟ ಹಕ್ಕುಗಳಿವೆ ಹಾಗೂ ಅದರ ಪ್ರಕಾರವಾಗಿಯೇ ಎಲ್ಲ ಮನವಿಗಳನ್ನು ಸಲ್ಲಿಸಲಾಗಿದೆ ಎನ್ನುವುದನ್ನು ನ್ಯಾಯಾಧೀಶರ ಗಮನಕ್ಕೆ ತಂದೆವು’’ ಎಂದು ಹೇಳಿದರು.

ಸುಪ್ರೀಂ ಕೋರ್ಟ್‌ನ ಸೂಚನೆಗಳಂತೆ ಜಿಲ್ಲಾ ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಮಾಡುತ್ತಿದೆ. ಹೆಚ್ಚು ಪ್ರಬುದ್ಧ ಮತ್ತು ಅನುಭವಿ ನ್ಯಾಯಾಧೀಶರೊಬ್ಬರು ಈ ಪ್ರಕರಣದ ವಿಚಾರಣೆಯನ್ನು ನಡೆಸುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.

ಹಿಂದೂ ಮಹಿಳೆಯರು ಸಲ್ಲಿಸಿದ ಅರ್ಜಿಯ ವಿಚಾರಣಾರ್ಹತೆ ಬಗ್ಗೆ ಮುಸ್ಲಿಮ್ ಸಮಿತಿ ಸಲ್ಲಿಸಿರುವ ಅರ್ಜಿಯ ಬಗ್ಗೆ ಆದ್ಯತೆಯ ನೆಲೆಯಲ್ಲಿ ನಿರ್ಧಾರ ತೆಗೆದುಕೊಳ್ಳುವಂತೆಯೂ ಸುಪ್ರೀಂ ಕೋರ್ಟ್ ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News