ಸಾಂಪ್ರದಾಯಿಕ ಸಮೂಹ ಮಾಧ್ಯಮಗಳಲ್ಲಿ ಭಾರತೀಯರ ಆಸಕ್ತಿ ಕಡಿಮೆಯಾಗಿದೆಯೇ?

Update: 2022-05-26 18:35 GMT

 
ವೃತ್ತಪತ್ರಿಕೆಗಳು, ನಿಯತಕಾಲಿಕಗಳು, ರೇಡಿಯೊ ಮತ್ತು ಟಿವಿಗಳಂತಹ ಸಾಂಪ್ರದಾಯಿಕ ಸಮೂಹ ಮಾಧ್ಯಮಗಳು ಸುದ್ದಿ ಮತ್ತು ಮನೋರಂಜನೆಯನ್ನು ಒದಗಿಸುತ್ತಿವೆಯಾದರೂ ಭಾರತೀಯರು ಆ ಬಗ್ಗೆ ಆಸಕ್ತಿಯನ್ನು ಕಳೆದುಕೊಂಡಿರುವಂತೆ ಕಂಡು ಬರುತ್ತಿದೆ.
ಇತ್ತೀಚೆಗೆ ಬಿಡುಗಡೆಗೊಂಡ 2019-21ರ ಅವಧಿಯಲ್ಲಿ ನಡೆಸಲಾದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್‌ಎಫ್‌ಎಚ್‌ಎಸ್)-5ರ ದತ್ತಾಂಶಗಳಂತೆ 2015-16ರ ಎನ್‌ಎಫ್‌ಎಚ್‌ಎಸ್-4ಕ್ಕೆ ಹೋಲಿಸಿದರೆ ಕನಿಷ್ಠ ವಾರಕ್ಕೊಮ್ಮೆಯಾದರೂ ವೃತ್ತಪತ್ರಿಕೆಗಳು ಮತ್ತು ನಿಯತಕಾಲಿಕಗಳನ್ನು ಓದುವ, ಟಿವಿಯನ್ನು ವೀಕ್ಷಿಸುವ ಮತ್ತು ರೇಡಿಯೊ ಆಲಿಸುವವರ ಸಂಖ್ಯೆಯಲ್ಲಿ ಎರಡಂಕಿಯ ಶೇಕಡಾವಾರು ಕುಸಿತ ಕಂಡುಬಂದಿದೆ. ಸಮೀಕ್ಷೆಯು ಸಮೂಹ ಮಾಧ್ಯಮ ಬಳಕೆಗಾಗಿ ಇದನ್ನು ತನ್ನ ಮಾನದಂಡವಾಗಿಸಿತ್ತು. ಸಿನೆಮಾದ ಮಟ್ಟಿಗೆ ವಾರಕ್ಕೊಮ್ಮೆ ಚಿತ್ರಮಂದಿರಕ್ಕೆ ಭೇಟಿಯನ್ನು ನಿಯಮಿತ ಎಂದು ಪರಿಗಣಿಸಲಾಗಿತ್ತು.
2015-16ರ ಅವಧಿಯಲ್ಲಿ ಶೇ.25ರಷ್ಟು ಮಹಿಳೆಯರು ಮತ್ತು ಶೇ.14ರಷ್ಟು ಪುರುಷರು ತಾವು ಸಿನೆಮಾ ಸೇರಿದಂತೆ ಸಮೂಹ ಮಾಧ್ಯಮಗಳಿಗೆ ನಿಯಮಿತವಾಗಿ ಒಡ್ಡಿಕೊಳ್ಳುತ್ತಿಲ್ಲ ಎಂದು ಹೇಳಿದ್ದರು. ಆದರೆ 2019-21ರ ಅವಧಿಯಲ್ಲಿ ಈ ಪ್ರಮಾಣ ಅನುಕ್ರಮವಾಗಿ ಶೇ.41 ಮತ್ತು ಶೇ.32ಕ್ಕೆ ಏರಿಕೆಯಾಗಿದೆ.
ಆದಾಗ್ಯೂ ಎನ್‌ಎಫ್‌ಎಚ್‌ಎಸ್ ದತ್ತಾಂಶಗಳು ಸಮಗ್ರವಾಗಿಲ್ಲ ಮತ್ತು ಜನರು ಬಳಸುವ ಡಿಜಿಟಲ್ ಮಾಧ್ಯಮಗಳ ವಿಧಗಳನ್ನು ಉಲ್ಲೇಖಿಸಿಲ್ಲ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಎನ್‌ಎಫ್‌ಎಚ್‌ಎಸ್ ದತ್ತಾಂಶಗಳು ಉದ್ಯಮವು ಗಮನಿಸಿರುವ ಪ್ರವೃತ್ತಿಗೆ ಅನುಗುಣವಾಗಿಲ್ಲ ಎಂದು ಹೇಳಿದ ಇಂಡಿಯನ್ ನ್ಯೂಸ್‌ಪೇಪರ್ ಸೊಸೈಟಿಯ ಅಧ್ಯಕ್ಷ ಮೋಹಿತ್ ಜೈನ್ ಅವರು, ಸುದ್ದಿಗಳು ಡಿಜಿಟಲ್ ವೇದಿಕೆಗಳಲ್ಲಿ ಲಭ್ಯವಿರುವುದರಿಂದ ಅವುಗಳ ಓದುವಿಕೆ ಹೆಚ್ಚಿದೆ ಎಂದರು.
ಸುದ್ದಿ ಮಾಧ್ಯಮಗಳು, ವಿಶೇಷವಾಗಿ ವೃತ್ತಪತ್ರಿಕೆ ಉದ್ಯಮವು ವ್ಯಾಪಕ ಪರಿವರ್ತನೆಗಳನ್ನು ಕಂಡಿದೆ ಮತ್ತು ಭೌತಿಕ ವೃತ್ತಪತ್ರಿಕೆಗಳ ಅಂಕಿ-ಸಂಖ್ಯೆಗಳನ್ನಷ್ಟೇ ನೋಡುವುದು ನಮ್ಮ ದಾರಿ ತಪ್ಪಿಸುತ್ತದೆ ಎಂದು ಜೈನ್ ಹೇಳಿದರು.
ಆದಾಗ್ಯೂ ದಿಲ್ಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದಲ್ಲಿ ಮಾಧ್ಯಮ ನೀತಿಯನ್ನು ಬೋಧಿಸುತ್ತಿರುವ ಸಹಾಯಕ ಪ್ರೊಫೆಸರ್ ವಿಬೋಧ ಪಾರ್ಥಸಾರಥಿ ಅವರು, ಎನ್‌ಎಫ್‌ಎಚ್‌ಎಸ್-5ರ ದತ್ತಾಂಶಗಳು ಉದ್ಯಮದ ಪ್ರತಿಪಾದನೆಗೆ ವಿರುದ್ಧವಾಗಿರುವಂತೆ ಕಂಡು ಬರುತ್ತಿದ್ದರೂ ಅದು ಕಳವಳಕಾರಿಯೂ ಆಗಿದೆ ಎಂದು ಬೆಟ್ಟು ಮಾಡಿದರು.
 ಮುದ್ರಣ ಮತ್ತು ಟಿವಿ ಸುದ್ದಿ ಮಾಧ್ಯಮಗಳಿಗೆ ತೆರೆದುಕೊಳ್ಳುವುದರಲ್ಲಿ ತೀವ್ರ ಇಳಿಕೆಯನ್ನು ಅವು ಜನರ ಕೈಗೆಟುಕದಷ್ಟು ದುಬಾರಿಯಾಗಿವೆ ಮತ್ತು/ಅಥವಾ ಜನರು ಸ್ವಯಂ ಇಚ್ಛೆಯಿಂದ ಅವುಗಳಿಂದ ಹಿಂದೆ ಸರಿದಿದ್ದಾರೆ ಎನ್ನುವುದನ್ನು ಸೂಚಿಸುತ್ತದೆ ಎಂದು ವ್ಯಾಖ್ಯಾನಿಸಬಹುದು ಎಂದರು.

ಏರಿಕೆಯ ನಂತರ ತೀವ್ರ ಕುಸಿತ
ಎನ್‌ಎಫ್‌ಎಚ್‌ಎಸ್ ದತ್ತಾಂಶಗಳಂತೆ 2005-06 ಮತ್ತು 2015-16ರ ನಡುವೆ ಪುರುಷರು ಮತ್ತು ಮಹಿಳೆಯರಿಂದ ಟಿವಿ, ನಿಯತಕಾಲಿಕಗಳು ಮತ್ತು ವೃತ್ತಪತ್ರಿಕೆಗಳ ಬಳಕೆಯಲ್ಲಿ ಏರಿಕೆಯಾಗಿತ್ತು. ಆದರೆ 2019-21ರ ವೇಳೆಗೆ ಈ ಪ್ರವೃತ್ತಿಯು ವ್ಯತಿರಿಕ್ತವಾಗಿದೆ.
 ಕಳೆದ ಐದು ವರ್ಷಗಳಲ್ಲಿ ಸಮೂಹ ಮಾಧ್ಯಮಗಳನ್ನು ನಿಯಮಿತವಾಗಿ ಬಳಸದ ಜನರ ಸಂಖ್ಯೆ ಹೆಚ್ಚುಕಡಿಮೆ ದುಪ್ಪಟ್ಟಾಗಿದೆ ಎನ್ನುವುದನ್ನು ದತ್ತಾಂಶಗಳು ತೋರಿಸಿವೆ.
         
ಪುರುಷರು ವೃತ್ತಪತ್ರಿಕೆಗಳಿಂದ, ಮಹಿಳೆಯರು ಟಿವಿಗಳಿಂದ ದೂರವಾಗುತ್ತಿದ್ದಾರೆ
ವೃತ್ತಪತ್ರಿಕೆಗಳು ಅಥವಾ ನಿಯಕಾಲಿಕಗಳನ್ನು ಓದುವ ಪುರುಷರ ಸಂಖ್ಯೆ ಗಣನೀಯವಾಗಿ ಕುಸಿದಿದೆ ಮತ್ತು ಮಹಿಳೆಯರು ಟಿವಿಗಳಿಂದ ದೂರವಾಗುತ್ತಿದ್ದಾರೆ ಎನ್ನುವುದನ್ನು ಸಮೀಕ್ಷೆಯು ತೋರಿಸಿದೆ.
2015-16ರಲ್ಲಿ ಸುಮಾರು ಶೇ.54.5ರಷ್ಟು ಪುರುಷರು ಕನಿಷ್ಠ ವಾರಕ್ಕೊಮ್ಮೆಯಾದರೂ ವೃತ್ತಪತ್ರಿಕೆಗಳು ಮತ್ತು ನಿಯತಕಾಲಿಕಗಳನ್ನು ಓದುತ್ತಿದ್ದರು. 2019-21ರ ವೇಳೆಗೆ ಇದು ಕೇವಲ ಶೇ.32ಕ್ಕೆ ಇಳಿದಿದೆ. ಕನಿಷ್ಠ ವಾರಕ್ಕೊಮ್ಮೆ ಟಿವಿ ವೀಕ್ಷಿಸುವ 15ರಿಂದ 49 ವರ್ಷ ವಯೋಮಾನದವರ ಸಂಖ್ಯೆಯು 2015-16ರಲ್ಲಿ ಶೇ.77.6 ಇದ್ದುದು 2019-21ರಲ್ಲಿ ಶೇ.55.7ಕ್ಕೆ ಗಣನೀಯವಾಗಿ ಕುಸಿದಿದೆ. 2015-16ರಲ್ಲಿ ಕನಿಷ್ಠ ಶೇ.71.1ರಷ್ಟು ಮಹಿಳೆಯರು ವಾರಕ್ಕೆ ಕನಿಷ್ಠ ಒಂದು ಸಲವಾದರೂ ಟಿವಿಯನ್ನು ವೀಕ್ಷಿಸುತ್ತಿದ್ದರು. 2019-21ರ ವೇಳೆಗೆ ಅವರ ಸಂಖ್ಯೆ ಶೇ.53ಕ್ಕೆ ಇಳಿದಿದೆ.
2015-16ರಲ್ಲಿ ಶೇ.25ರಷ್ಟು ಮಹಿಳೆಯರು ಕನಿಷ್ಠ ವಾರಕ್ಕೊಂದು ಸಲ ವೃತ್ತಪತ್ರಿಕೆಗಳನ್ನು ಓದುತ್ತಿದ್ದರು, 2019-21ರ ಸಮೀಕ್ಷೆಯ ವೇಳೆಗೆ ಅಂತಹವರ ಸಂಖ್ಯೆ 14.4ಕ್ಕೆ ಕುಸಿದಿದೆ.
ಎನ್‌ಎಫ್‌ಎಚ್‌ಎಸ್-4 ಮತ್ತು ಎನ್‌ಎಫ್‌ಎಚ್‌ಎಸ್-5ರ ನಡುವೆ ರೇಡಿಯೊ ಆಲಿಸುವ ಪುರುಷರು ಮತ್ತು ಮಹಿಳೆಯರ ಸಂಖ್ಯೆ ಅನುಕ್ರಮವಾಗಿ ಶೇ.20.7ರಿಂದ ಶೇ.10.5ಕ್ಕೆ ಮತ್ತು ಶೇ.7.7ರಿಂದ ಶೇ.4.2ಕ್ಕೆ ಇಳಿದಿದೆ.
                           
ಆದಾಯದ ಪಾತ್ರ
 ಎನ್‌ಎಫ್‌ಎಚ್‌ಎಸ್‌ನ ಹಿಂದಿನ ಸಮೀಕ್ಷೆಗಳ ಆಧಾರದಲ್ಲಿ ಜನರ ಆದಾಯ ಮಟ್ಟ ಮತ್ತು ಅವರ ಸಮೂಹ ಮಾಧ್ಯಮ ಬಳಕೆ ಪರಸ್ಪರ ಸಂಬಂಧವನ್ನು ಹೊಂದಿವೆ. ಸಾಮಾನ್ಯವಾಗಿ ಕಡಿಮೆ ಆದಾಯದವರಿಗೆ ಹೋಲಿಸಿದರೆ ಶ್ರೀಮಂತ ಜನರು ಸಮೂಹ ಮಾಧ್ಯಮಗಳನ್ನು ಹೆಚ್ಚು ಬಳಸುತ್ತಾರೆ. ಈ ಪ್ರವೃತ್ತಿ ಹಾಗೆಯೇ ಉಳಿದುಕೊಂಡಿದೆ. ಆದಾಗ್ಯೂ,ಒಟ್ಟಾರೆ ಸಮೂಹ ಮಾಧ್ಯಮ ಬಳಕೆಯಲ್ಲಿ ಅವರ ಪಾಲು ಹೆಚ್ಚಿನ ಮಟ್ಟದಲ್ಲಿಯೇ ಇದೆಯಾದರೂ ಟಿವಿ,ಮುದ್ರಣ ಮಾಧ್ಯಮ ಮತ್ತು ರೇಡಿಯೊ ಬಳಕೆಯಲ್ಲಿ ಈ ಗುಂಪುಗಳಲ್ಲಿ ಕೆಲವು ತೀವ್ರ ಇಳಿಕೆ ಕಂಡು ಬಂದಿದೆ. ಅಧಿಕ ಆದಾಯ ವರ್ಗದ ಮಹಿಳೆಯರಿಂದ ವೃತ್ತಪತ್ರಿಕೆಗಳು ಮತ್ತು ನಿಯತಕಾಲಿಕಗಳ ಓದುವಿಕೆಯಲ್ಲಿ ಕುಸಿತ ಕಂಡುಬಂದಿದೆ. 2015-16ರ ಸಮೀಕ್ಷೆಯಲ್ಲಿ ಈ ವರ್ಗದ ಶೇ.60ಕ್ಕೂ ಅಧಿಕ ಮಹಿಳೆಯರು ಕನಿಷ್ಠ ವಾರಕ್ಕೊಮ್ಮೆ ವೃತ್ತಪತ್ರಿಕೆ ಮತ್ತು ನಿಯತಕಾಲಿಕಗಳನ್ನು ಓದುತ್ತಿದ್ದರೆ 2019-21ರ ವೇಳೆಗೆ ಅವರ ಸಂಖ್ಯೆ ಶೇ.34ಕ್ಕೆ ಇಳಿದಿದೆ. ಈ ಪ್ರವೃತ್ತಿ ಈ ವರ್ಗದ ಪುರುಷರಲ್ಲೂ ಕಂಡು ಬಂದಿದೆ.
                        
ಪ್ರಾದೇಶಿಕ ವ್ಯತ್ಯಾಸಗಳು
 ಭಾರತದ ಸರಾಸರಿ ಆದಾಯಕ್ಕಿಂತ ಹಿಂದುಳಿದವರೇ ಹೆಚ್ಚಾಗಿರುವ ಕೆಲವು ಪೂರ್ವ (ಉದಾ:ಜಾರ್ಖಂಡ್, ಬಿಹಾರ) ಮತ್ತು ಈಶಾನ್ಯ ರಾಜ್ಯಗಳಲ್ಲಿ ಸಮೂಹ ಮಾಧ್ಯಮಗಳ ಬಳಕೆ ಕನಿಷ್ಠವಾಗಿದೆ. ಆದರೆ ದಕ್ಷಿಣ ಭಾರತದ ಕೆಲವು ಶ್ರೀಮಂತ ರಾಜ್ಯಗಳಲ್ಲಿ ಚಿತ್ರಣವು ಸಂಪೂರ್ಣ ಭಿನ್ನವಾಗಿದೆ. ಗೋವಾದಲ್ಲಿ ಕೇವಲ ಶೇ.8ರಷ್ಟು ಮಹಿಳೆಯರು ಮತ್ತು 2.3ರಷ್ಟು ಪುರುಷರು ತಾವು ನಿಯಮಿತವಾಗಿ ಸಮೂಹ ಮಾಧ್ಯಮಗಳನ್ನು ಬಳಸುತ್ತಿಲ್ಲ ಎಂದು ಹೇಳಿದರೆ,ಕೇರಳದಲ್ಲಿ ಇಂತಹವರ ಸಂಖ್ಯೆ ಅನುಕ್ರಮವಾಗಿ ಶೇ.13.3 ಮತ್ತು ಶೇ.7.1 ಆಗಿದೆ. ತಮಿಳುನಾಡು,ತೆಲಂಗಾಣ,ಕರ್ನಾಟಕ ಮತ್ತು ಆಂಧ್ರಪ್ರದೇಶಗಳಲ್ಲಿ ಸಮೂಹ ಮಾಧ್ಯಮವನ್ನು ನಿಯಮಿತವಾಗಿ ಬಳಸದವರ ಸಂಖ್ಯೆ ಶೇ.20ಕ್ಕೂ ಕಡಿಮೆಯಿದ್ದರೆ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಇಂತಹವರ ಸಂಖ್ಯೆ ಕೇವಲ 17ರಷ್ಟಿದೆ.
             
ಮಹತ್ವದ ತುಣುಕು ತಪ್ಪಿಹೋಗಿದೆ
ಭಾರತೀಯರು ಸುದ್ದಿ ಮತ್ತು ಮನೋರಂಜನೆಯನ್ನು ಬಳಸುವುದರಲ್ಲಿ ಬದಲಾಗುತ್ತಿರುವ ಮಾದರಿಗಳನ್ನು ಗಮನಿಸಲು ಎನ್‌ಎಫ್‌ಎಚ್‌ಎಸ್-5 ವಿಫಲವಾಗಿದೆ.
'ನಾವು ಸಂಯೋಜಿತ ಅಂಕಿಅಂಶಗಳನ್ನು ನೋಡುವ ಅಗತ್ಯವಿದೆ. ವೃತ್ತಪತ್ರಿಕೆಗಳು ಮತ್ತು ಅವುಗಳಲ್ಲಿಯ ವಿಷಯಗಳು ಭೌತಿಕ ಮತ್ತು ಅಂತರ್ಜಾಲ,ಹೀಗೆ ಎರಡೂ ರೂಪಗಳಲ್ಲಿ ಲಭ್ಯವಿವೆ. ಲಾಕ್‌ಡೌನ್ ಸಂದರ್ಭದಲ್ಲಿ ಭಾರತೀಯರ ಓದುವ ಪ್ರವೃತ್ತಿ ಸುಧಾರಿಸಿತ್ತು ಎನ್ನುವುದನ್ನು ನಾವು ಗಮನಿಸಿದ್ದೇವೆ. ಜನರು ಆನ್‌ಲೈನ್‌ನಲ್ಲಿ ವೃತ್ತಪತ್ರಿಕೆಗಳನ್ನು ಓದುವುದಕ್ಕೆ ಹೆಚ್ಚು ಸಮಯವನ್ನು ವ್ಯಯಿಸುತ್ತಿದ್ದಾರೆ 'ಎಂದು ಜೈನ್ ಹೇಳಿದರು.
ಸುದ್ದಿಗಳು ಸೇರಿದಂತೆ ಡಿಜಿಟಲ್ ಮಾಧ್ಯಮಗಳು ಹೆಚ್ಚು ಜನಪ್ರಿಯವಾಗುತ್ತಿವೆ ಎನ್ನುವುದನ್ನು ಹಲವಾರು ಅಧ್ಯಯನಗಳು ತೋರಿಸಿವೆ.
ವೃತ್ರಪತ್ರಿಕೆಗಳ ಬಳಕೆಯಲ್ಲಿ ಶೇ.2ರಷ್ಟು ಇಳಿಕೆಯಾಗಿದ್ದರೆ,ಟಿವಿ ವೀಕ್ಷಣೆ ಶೇ.7ರಷ್ಟು ಮತ್ತು ಡಿಜಿಟಲ್ ಮಾಧ್ಯಮಗಳ ಬಳಕೆ ಶೇ.123ರಷ್ಟು ಹೆಚ್ಚಿವೆ ಎಂದು ಮೀಡಿಯಾ ರೀಸರ್ಚ್ ಯೂಸರ್ಸ್ ಕೌನ್ಸಿಲ್ ಆಫ್ ಇಂಡಿಯಾ ನಡೆಸಿದ ಸಮೀಕ್ಷೆಯು ತಿಳಿಸಿದೆ.

 ಕೃಪೆ: theprint.in

Writer - ನಿಖಿಲ್ ರಾಮಪಾಲ್

contributor

Editor - ನಿಖಿಲ್ ರಾಮಪಾಲ್

contributor

Similar News