2,000 ರೂ.ನೋಟುಗಳ ಸಂಖ್ಯೆ ಕಡಿಮೆಯಾಗುತ್ತಲೇ ಇದೆ:‌ ಆರ್‌ಬಿಐ ವಾರ್ಷಿಕ ವರದಿ

Update: 2022-05-27 16:12 GMT
Photo: PTI

ಮುಂಬೈ,ನ.27: ಎರಡು ಸಾವಿರ ರೂ.ಮುಖಬೆಲೆಯ ನೋಟುಗಳ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ಕ್ರಮೇಣ ಕಡಿಮೆಯಾಗುತ್ತಿದೆ. ಈ ವರ್ಷದ ಮಾರ್ಚ್ ಅಂತ್ಯದಲ್ಲಿ ಚಲಾವಣೆಯಲ್ಲಿದ್ದ 2,000 ನೋಟುಗಳ ಸಂಖ್ಯೆ 214 ಕೋ.ಅಥವಾ ಒಟ್ಟು ನೋಟುಗಳ ಶೇ.1.6ರಷ್ಟಿತ್ತು ಎಂದು ಆರ್‌ಬಿಐನ ವಾರ್ಷಿಕ ವರದಿಯಲ್ಲಿ ತಿಳಿಸಲಾಗಿದೆ.

ಈ ವರ್ಷದ ಮಾರ್ಚ್‌ನಲ್ಲಿ ಚಲಾವಣೆಯಲ್ಲಿದ್ದ ಎಲ್ಲ ಮುಖಬೆಲೆಗಳ ನೋಟುಗಳ ಒಟ್ಟು ಸಂಖ್ಯೆ 13,053 ಕೋ.ಆಗಿತ್ತು. ಕಳೆದ ವರ್ಷದ ಮಾರ್ಚ್‌ನಲ್ಲಿ ಈ ಸಂಖ್ಯೆ 12,437 ಕೋ.ಆಗಿತ್ತು.

2020 ಮಾರ್ಚ್ ಅಂತ್ಯದಲ್ಲಿ 274 ಕೋ.ಯಷ್ಟು  2,000ರೂ. ನೋಟುಗಳು ಚಲಾವಣೆಯಲ್ಲಿದ್ದು,ಇದು ಚಲಾವಣೆಯಲ್ಲಿದ್ದ ಒಟ್ಟು ನೋಟುಗಳ ಶೇ.2.4ರಷ್ಟಿತ್ತು. ಮಾರ್ಚ್ 2021ರಲ್ಲಿ 245 ಕೋ.ಗೆ (ಶೇ.2) ಇಳಿದಿದ್ದ ಇದು 2022,ಮಾರ್ಚ್ ಅಂತ್ಯಕ್ಕೆ 214 ಕೋ.ಗೆ (ಶೇ.1.6)ಗೆ ಇಳಿದಿದೆ.

ಅದೇ ರೀತಿ,2020 ಮಾರ್ಚ್‌ನಲ್ಲಿ ಚಲಾವಣೆಯಲ್ಲಿದ್ದ ಒಟ್ಟು ನೋಟುಗಳ ವೌಲ್ಯದ ಶೇ.22.6ರಷ್ಟಿದ್ದ 2000 ರೂ.ಗಳ ಮೌಲ್ಯವು 2021 ಮಾರ್ಚ್‌ನಲ್ಲಿ ಶೇ.17.3ಕ್ಕೆ ಮತ್ತು 2022 ಮಾರ್ಚ್ ಅಂತ್ಯದಲ್ಲಿ ಶೆ.13.8ಕ್ಕೆ ಇಳಿದಿದೆ. ವರದಿಯಂತೆ ಕಳೆದ ವರ್ಷದ ಮಾರ್ಚ್ನಲ್ಲಿ 3,867.90 ಕೋ.ಇದ್ದ 500 ರೂ.ನೋಟುಗಳ ಸಂಖ್ಯೆ ಈ ವರ್ಷದ ಮಾರ್ಚ್ ಅಂತ್ಯದಲ್ಲಿ 4,554.68 ಕೋ.ಗೆ ಏರಿಕೆಯಾಗಿದೆ.

2022 ಮಾರ್ಚ್ 31ಕ್ಕೆ ಇದ್ದಂತೆ ಒಟ್ಟು ಚಲಾವಣೆಯಲ್ಲಿದ್ದ ನೋಟುಗಳ ಪೈಕಿ 500 ರೂ.ನೋಟುಗಳು ಶೇ.34.9ರಷ್ಟು ಗರಿಷ್ಠ ಪ್ರಮಾಣದಲ್ಲಿದ್ದರೆ,10 ರೂ.ನೋಟುಗಳು ಶೇ.21.3ರಷ್ಟಿದ್ದವು ಎಂದು ಶುಕ್ರವಾರ ಬಿಡುಗಡೆಗೊಂಡ ಆರ್ಬಿಐನ 2021-2022ರ ವರದಿಯು ತಿಳಿಸಿದೆ.

500 ರೂ.ನೋಟುಗಳ ಸಂಖ್ಯೆ 2020 ಮಾರ್ಚ್ನಲ್ಲಿ ಶೇ.25.4ರಷ್ಟಿದ್ದು,2021 ಮಾರ್ಚ್ನಲ್ಲಿ ಶೇ.31.1ಕ್ಕೆ ಏರಿತ್ತು. ಇವುಗಳ ವೌಲ್ಯ 2020 ಮಾರ್ಚ್‌ನಲ್ಲಿ ಒಟ್ಟು ನೋಟುಗಳ ಮೌಲ್ಯದ ಶೇ.60.8ರಷ್ಟಿದ್ದುದು 2022 ಮಾರ್ಚ್ನಲ್ಲಿ ಶೇ.73.3ಕ್ಕೆ ಏರಿದೆ. ಚಲಾವಣೆಯಲ್ಲಿದ್ದ ಎಲ್ಲ ಮುಖಬೆಲೆಗಳ ನೋಟುಗಳ ಒಟ್ಟು ಮೌಲ್ಯ 2021 ಮಾರ್ಚ್ನಲ್ಲಿ 28.27 ಲ.ಕೋ.ರೂ.ಇದ್ದುದು ಈ ವರ್ಷದ ಮಾರ್ಚ್ನಲ್ಲಿ 31.05 ಲ.ಕೋ.ರೂಗೆ ಏರಿಕೆಯಾಗಿದೆ.

2022 ಮಾರ್ಚ್‌ನಲ್ಲಿ 500 ರೂ. ಮತ್ತು 2,000 ರೂ.ನೋಟುಗಳ ಒಟ್ಟು ಮೌಲ್ಯ ಚಲಾವಣೆಯಲ್ಲಿದ್ದ ಎಲ್ಲ ನೋಟುಗಳ ಒಟ್ಟು ಮೌಲ್ಯದ ಶೆ.87.1ರಷ್ಟಿದ್ದು,2021 ಮಾರ್ಚ್ ಅಂತ್ಯದಲ್ಲಿ ಇದು ಶೇ.85.7 ಆಗಿತ್ತು ಎಂದು ವರದಿಯು ತಿಳಿಸಿದೆ.

2020-21ರಲ್ಲಿ ಅನುಕ್ರಮವಾಗಿ ಶೇ.16.8 ಮತ್ತು ಶೇ.7.2ರಷ್ಟು ಏರಿಕೆಯನ್ನು ಕಂಡಿದ್ದ ಚಲಾವಣೆಯಲ್ಲಿದ್ದ ನೋಟುಗಳ ಮೌಲ್ಯ ಮತ್ತು ಪ್ರಮಾಣ 2021-22ರಲ್ಲಿ ಶೇ.9.9 ಮತ್ತು ಶೇ.56ರಷ್ಟು ಏರಿಕೆಯನ್ನು ಕಂಡಿವೆ ಎಂದೂ ವರದಿಯು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News