ಕೇವಲ ಶೇ.8ರಷ್ಟು ಭಾರತೀಯ ಕುಟುಂಬಗಳು ಮಾತ್ರ ಕಾರುಗಳನ್ನು ಹೊಂದಿವೆ: ಎನ್ಎಫ್ಎಚ್ಎಸ್ ಸಮೀಕ್ಷೆ

Update: 2022-05-28 07:22 GMT

ಹೊಸದಿಲ್ಲಿ,ಮೇ 27: ದಿಲ್ಲಿ,ಮುಂಬೈ,ಬೆಂಗಳೂರುಗಳಂತಹ ಹಲವಾರು ನಗರಗಳಲ್ಲಿಯ ವಾಹನ ಸಂಚಾರಗಳನ್ನು ನೋಡಿದಾಗ ಕಾರುಗಳ ಮಹಾಪೂರವೇ ಭಾರತದ ರಸ್ತೆಗಳಲ್ಲಿ ಹರಿಯುತ್ತಿದೆ ಎಂದು ನೀವು ಭಾವಿಸಬಹುದು. ಆದರೆ ಕೇವಲ ಶೇ.8ರಷ್ಟು ಭಾರತೀಯ ಕುಟುಂಬಗಳು,ಅಂದರೆ ಪ್ರತಿ 12 ಕುಟುಂಬಗಳ ಪೈಕಿ ಒಂದು ಮಾತ್ರ ಕಾರುಗಳನ್ನು ಹೊಂದಿವೆ ಎನ್ನುವುದನ್ನು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5 (ಎನ್ಎಫ್ಎಚ್ಎಸ್-5) ತೋರಿಸಿದೆ.

ಶೇ.55ರಷ್ಟು ಭಾರತೀಯ ಕುಟುಂಬಗಳು ಈಗಲೂ ಬೈಸೈಕಲ್ ಗಳನ್ನು ಅವಲಂಬಿಸಿದ್ದರೆ ಶೇ.54ರಷ್ಟು ಕುಟುಂಬಗಳು ಸ್ಕೂಟರ್ ಗಳು ಮತ್ತು ಬೈಕ್ ಗಳನ್ನು ಬಳಸುತ್ತಿವೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ನಡೆಸಿರುವ ಎನ್ಎಫ್ಎಚ್ಎಸ್-5ರಲ್ಲಿ 6,64,972 ಕುಟುಂಬಗಳು ಒಳಗೊಂಡಿದ್ದು,ಈ ತಿಂಗಳ ಪೂರ್ವಾರ್ಧದಲ್ಲಿ ಸಮೀಕ್ಷೆಯ ವರದಿಯು ಬಿಡುಗಡೆಗೊಂಡಿದೆ. ಸುಮಾರು ಶೇ.3.7ರಷ್ಟು ಕುಟುಂಬಗಳು ಪ್ರಾಣಿಗಳು ಎಳೆಯುವ ಬಂಡಿಗಳನ್ನು ಹೊಂದಿದ್ದರೆ ಸುಮಾರು ಶೇ.20ರಷ್ಟು ಕುಟುಂಬಗಳು ಸ್ವಂತ ಸಾರಿಗೆ ಸೌಲಭ್ಯಗಳನ್ನು ಹೊಂದಿಲ್ಲ.

ಕಾರುಗಳನ್ನು ಹೊಂದಿರುವ ಕುಟುಂಬಗಳಲ್ಲಿ ಪ್ರಾದೇಶಿಕ ಅಸಮಾನತೆ ಇರುವುದನ್ನೂ ಸಮೀಕ್ಷೆಯು ಬಹಿರಂಗಗೊಳಿಸಿದೆ. ಕುಟುಂಬಗಳ ಬಳಿ ಕಾರು ಇಲ್ಲದಿರುವುದಕ್ಕೆ ಸಾಮಾನ್ಯವಾಗಿ ಕಡಿಮೆ ಆದಾಯವನ್ನು ತಳುಕು ಹಾಕಲಾಗುತ್ತದೆಯಾದರೂ,ಕಾರನ್ನು ಸಮೃದ್ಧಿಯ ಸಂಕೇತವನ್ನಾಗಿ ಪರಿಗಣಿಸಬಾರದು ಎನ್ನುತ್ತಾರೆ ತಜ್ಞರು. ರಸ್ತೆ ಮೂಲಸೌಕರ್ಯವು ವಾಯುಮಾಲಿನ್ಯವನ್ನು ತಗ್ಗಿಸಲು ನೆರವಾಗುವ ಸೈಕಲ್ ಸವಾರರ ಅಗತ್ಯಗಳನ್ನೂ ಗಮನಕ್ಕೆ ತೆಗೆದುಕೊಳ್ಳಬೇಕು ಎನ್ನುತ್ತಾರೆ ಅವರು. 1998-99 ರಲ್ಲಿ ಶೇ.1.6ರಷ್ಟುಭಾರತೀಯ ಕುಟುಂಬಗಳುಕಾರುಗಳನ್ನು ಹೊಂದಿದ್ದರೆ ಅದು ಈಗ ಶೇ.8ಕ್ಕೆ ಏರಿಕೆಯಾಗಿದೆ.

1990ರ ದಶಕಕ್ಕೆ ಮುನ್ನ ಕಾರುಗಳ ಮಾಲಿಕರಾಗುವುದು ಸುಲಭವಾಗಿರಲಿಲ್ಲ. ಸಾಲ ಸೌಲಭ್ಯ ತೀರ ಕಡಿಮೆಯಿತ್ತು ಮತ್ತು ಆಟೊಮೊಬೈಲ್ ಬ್ರಾಂಡ್ ಗಳು ಸೀಮಿತವಾಗಿದ್ದವು. 1990ರ ದಶಕದಲ್ಲಿ ಸಾಕಾರಗೊಂಡಿದ್ದ ಆರ್ಥಿಕ ಸುಧಾರಣೆಗಳ ಹಿನ್ನೆಲೆಯಲ್ಲಿ ಕಾರು ಖರೀದಿಯು ತುಲನಾತ್ಮವಾಗಿ ಸುಲಭವಾಗಿದ್ದರೂ ದೇಶದಲ್ಲಿ ಕಾರು ಮಾಲಿಕರ ಸಂಖ್ಯೆಯಲ್ಲಿ ಏರಿಕೆ ನಿಧಾನಗತಿಯಲ್ಲಿದೆ.
 
ನಗರ ಪ್ರದೇಶಗಳಲ್ಲಿಯ ಸುಮಾರು ಶೇ.14ರಷ್ಟು ಕುಟುಂಬಗಳು ಕಾರುಗಳನ್ನು ಹೊಂದಿದ್ದರೆ ಗ್ರಾಮೀಣ ಭಾರತದಲ್ಲಿಯ ಶೇ.4ರಷ್ಟು ಕುಟುಂಬಗಳು ಈ ಭಾಗ್ಯವನ್ನು ಹೊಂದಿವೆ. ಭಾರತದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಕಾರುಗಳ ಸಂಖ್ಯೆ ಹಲವಾರು ಶ್ರೀಮಂತ ದೇಶಗಳಿಗಿಂತ ಕಡಿಮೆಯಿದೆ ಎಂದು ನೀತಿ ಆಯೋಗದ ಸಿಇಒ ಅಮಿತಾಭ ಕಾಂತ್ ಅವರೂ ಒಪ್ಪಿಕೊಂಡಿದ್ದಾರೆ. ಭಾರತದಲ್ಲಿ ಪ್ರತಿ ಒಂದು ಸಾವಿರ ಜನಸಂಖ್ಯೆಯಲ್ಲಿ 22 ಜನರು ಕಾರುಗಳನ್ನು ಹೊಂದಿದ್ದರೆ ಈ ಸಂಖ್ಯೆ ಜಪಾನ,ಕೆನಡಾ ಮತ್ತು ಬ್ರಿಟನ್ ನಲ್ಲಿ 500ಕ್ಕೂ ಅಧಿಕವಿದೆ ಎಂದು ಕಾಂತ್ 2018ರಲ್ಲಿ ಹೇಳಿದ್ದರು. ಭಾರತೀಯರ ಕಡಿಮೆ ತಲಾದಾಯವನ್ನು ಇದಕ್ಕೆ ಒಂದು ಕಾರಣವನ್ನಾಗಿ ಉಲ್ಲೇಖಿಸಲಾಗಿದೆ.

ವಿಶ್ವಬ್ಯಾಂಕಿನ ದತ್ತಾಂಶಗಳಂತೆ ಭಾರತೀಯರ ಸರಾಸರಿ ವಾರ್ಷಿಕ ಆದಾಯವು 2000 ಡಾ.(ಸುಮಾರು 1.55 ಲ.ರೂ.) ಗಳಾಗಿವೆ. ಇದೇ ವೇಳೆ ಮಾರುತಿ ಅಲ್ಟೋದಂತಹ ಹ್ಯಾಚ್ಬ್ಯಾಕ್ ಕಾರಿನ ಕನಿಷ್ಠ ಬೆಲೆ ಸುಮಾರು 5,000-6,000 ಡಾ.ಆಗಿದೆ. ಇದರ ಜೊತೆಗೆ ನಿರ್ವಹಣೆ ಮತ್ತು ಇಂಧನ ವೆಚ್ಚಗಳೂ ಇವೆ. ಇದಕ್ಕಾಗಿ ದ್ವಿಚಕ್ರ ವಾಹನಗಳಿಗೆ ಹೋಲಿಸಿದರೆ ಚತುಷ್ಚಕ್ರಗಳಿಗೆ ಹೆಚ್ಚು ಹಣವನ್ನು ವ್ಯಯಿಸಬೇಕಾಗುತ್ತದೆ. ಎನ್ಎಫ್ಎಚ್ಸ್ ದತ್ತಾಂಶಗಳಂತೆ 1998-99ರಲ್ಲಿ ಸುಮಾರು ಶೇ.11ರಷ್ಟು ಭಾರತೀಯ ಕುಟುಂಬಗಳು ದ್ವಿಚಕ್ರ ವಾಹನಗಳನ್ನು ಹೊಂದಿದ್ದರೆ,ಇದು 2005-06ರಲ್ಲಿ ಶೇ.19ಕ್ಕೆ ಮತ್ತು 2015-16ರಲ್ಲಿ ಶೇ.40.6ಕ್ಕೆ ಏರಿತ್ತು.
                             
ಪ್ರಾದೇಶಿಕ ಅಸಮಾನತೆ

ಭಾರತದಲ್ಲಿ ಸ್ವಂತ ಕಾರುಗಳನ್ನು ಹೊಂದಿರುವ ಕುಟುಂಬಗಳ ನಡುವೆ ಭಾರೀ ಪ್ರಾದೇಶಿಕ ಅಸಮಾನತೆ ಇರುವುದನ್ನೂ ಎನ್ಎಫ್ಎಚ್ಎಸ್-5 ತೋರಿಸಿದೆ. ಕಾರುಗಳನ್ನು ಹೊಂದಿರುವ ಕುಟುಂಬಗಳ ಶೇಕಡಾವಾರು ಪ್ರಮಾಣದಲ್ಲಿ ಗೋವಾ (ಶೇ.46) ಮತ್ತು ಕೇರಳ (ಶೇ.26) ಅಗ್ರಸ್ಥಾನದಲ್ಲಿವೆ. ಗುಡ್ಡಗಾಡು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿಯೂ ಕಾರುಗಳನ್ನು ಹೊಂದಿರುವ ಕುಟುಂಬಗಳ ಶೇಕಡಾವಾರು ಪ್ರಮಾಣ ಹೆಚ್ಚಿದೆ. ಈ ಸ್ಥಳಗಳು ಕಾರು ಮಾಲಿಕತ್ವದಲ್ಲಿ ಅತ್ಯಂತ ಹೆಚ್ಚಿನ ನಗರ-ಗ್ರಾಮೀಣ ಅಂತರವನ್ನೂ ಹೊಂದಿವೆ.

ಜಮ್ಮು-ಕಾಶ್ಮೀರದಲ್ಲಿ ಶೇ.24,ಹಿಮಾಚಲ ಪ್ರದೇಶದಲ್ಲಿ ಶೇ.23.5,ಪಂಜಾಬಿನಲ್ಲಿ ಶೇ.23,ನಾಗಾಲ್ಯಾಂಡ್,ಸಿಕ್ಕಿಂ,ಅರುಣಾಚಲ ಪ್ರದೇಶ ಮತ್ತು ದಿಲ್ಲಿಗಳಲ್ಲಿ ಶೇ.20ಕ್ಕೂ ಹೆಚ್ಚು,ಪ.ಬಂಗಾಳದಲ್ಲಿ ಶೇ.2.8,ಆಂಧ್ರಪ್ರದೇಶದಲ್ಲಿ ಶೇ.2.7 ಮತ್ತು ಬಿಹಾರದಲ್ಲಿ ಶೇ.2ರಷ್ಟು ಕುಟುಂಬಗಳು ಕಾರುಗಳನ್ನು ಹೊಂದಿವೆ. ಪ.ಬಂಗಾಳದಲ್ಲಿ ಅತ್ಯಂತ ಹೆಚ್ಚಿನ ಅಂದರೆ ಶೇ.83ರಷ್ಟು ಕುಟುಂಬಗಳು ಸೈಕಲ್ಗಳನ್ನು ಹೊಂದಿದ್ದರೆ ನಂತರದ ಸ್ಥಾನದಲ್ಲಿ ಬಿಹಾರ (ಶೇ.69)ಇದೆ. ಸೈಕಲ್ ಗಳನ್ನು ಹೊಂದಿರುವ ಕುಟುಂಬಗಳ ಅತ್ಯಂತ ಕಡಿಮೆ ಶೇಕಡಾವಾರು ಪ್ರಮಾಣವಿರುವುದು ಆಂಧ್ರಪ್ರದೇಶದಲ್ಲಿ,ಆದರೆ ಅಲ್ಲಿ ಶೇ.52ಕ್ಕೂ ಹೆಚ್ಚಿನ ಕುಟುಂಬಗಳು ದ್ವಿಚಕ್ರವಾಹನಗಳನ್ನು ಹೊಂದಿವೆ.

 ಸೈಕ್ಲಿಸ್ಟ್ ಗಳಿಗೆ ನ್ಯಾಯ ಸಿಗಲಿ

ನಗರ ಪ್ರದೇಶಗಳಲ್ಲಿ ಕೇವಲ ಶೇ.14ರಷ್ಟು ಕುಟುಂಬಗಳು ಕಾರುಗಳನ್ನು ಹೊಂದಿವೆಯಾದರೂ ನಗರಗಳು ಭಾರೀ ಸಂಚಾರ ದಟ್ಟಣೆಯಿಂದಾಗಿ ಆಗಾಗ್ಗೆ ಸುದ್ದಿಯಲ್ಲಿರುತ್ತವೆ. 2020ನೇ ಸಾಲಿನ ಟಾಮ್ಟಾಮ್ ಟ್ರಾಫಿಕ್ ಇಂಡೆಕ್ಸ್ ನ ಪಟ್ಟಿಯಲ್ಲಿಯ ವಿಶ್ವದ 21 ಅತ್ಯಂತ ಹೆಚ್ಚಿನ ವಾಹನ ದಟ್ಟಣೆ ನಗರಗಳಲ್ಲಿ ಭಾರತದ ನಾಲ್ಕು ನಗರಗಳು ಸ್ಥಾನಗಳನ್ನು ಪಡೆದಿದ್ದವು. ಈ ಪಟ್ಟಿಗಾಗಿ 58 ದೇಶಗಳ 404 ನಗರಗಳನ್ನು ಮೌಲ್ಯಮಾಪನಕ್ಕೆ ಒಳಪಡಿಸಲಾಗಿತ್ತು.

ಭಾರತದ ರಸ್ತೆ ವಿಸ್ತರಣೆ ನೀತಿಯು ಕಾರು ಮಾಲಿಕರ ಪರವಾಗಿದೆ ಮತ್ತು ಪರಿಸರ ಮಾಲಿನ್ಯವನ್ನು ತಗ್ಗಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುವ ಮೂಲಕ ಭಾರತವು ತನ್ನ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ನೆರವಾಗುವಲ್ಲಿ ಮುಂಚೂಣಿಯಲ್ಲಿರುವ ಸೈಕಲ್ ಸವಾರರಿಗೆ ಅರ್ಹ ಗೌರವವನ್ನು ದೇಶವು ನೀಡಬೇಕಿದೆ ಎನ್ನುತ್ತಾರೆ ಟಿಇಆರ್ಇನಲ್ಲಿ ಸಾರಿಗೆ ಮತ್ತು ನಗರಾಡಳಿತ ಪ್ರದೇಶ ಸಂಚಾಲಕರಾಗಿರುವ ಶರೀಫ್ ಕಮರ್.

ಕಾರು ಒಡೆತನವನ್ನು ಸಮೃದ್ಧಿಯ ಸಂಕೇತವನ್ನಾಗಿ ಪರಿಗಣಿಸುವ ಬದಲು ಭಾರತವು ಸೈಕಲ್ ಸವಾರರು ಮತ್ತು ಪಾದಚಾರಿಗಳಿಗಾಗಿ ಮೂಲಸೌಕರ್ಯಗಳ ಅಭಿವೃದ್ಧಿಗೆ ವೆಚ್ಚ ಮಾಡಬೇಕು ಎಂದು ಹೇಳಿದ ಕಮರ್,ಸೈಕಲ್ ಸವಾರಿಯು ಆರೋಗ್ಯಕ್ಕೆ ಒಳ್ಳೆಯದು, ಮಿತವ್ಯಯಕರವಾಗಿದೆ ಮತ್ತು ಪರಿಸರಕ್ಕೂ ಒಳ್ಳೆಯದು ಎಂದರು.

Writer - ನಿಖಿಲ್ ರಾಮಪಾಲ್(theprint.in)

contributor

Editor - ನಿಖಿಲ್ ರಾಮಪಾಲ್(theprint.in)

contributor

Similar News