ಜೌಹಾರ್ ವಿ.ವಿ. ಭೂಮಿ ಪ್ರಕರಣ: ಅಝಂ ಖಾನ್ ಗೆ ಹೈಕೋರ್ಟ್ ನೀಡಿದ್ದ ಜಾಮೀನು ಷರತ್ತಿಗೆ ಸುಪ್ರೀಂ ತಡೆ

Update: 2022-05-27 18:10 GMT

ಹೊಸದಿಲ್ಲಿ, ಮೇ 27: ಆಸ್ತಿ ಕಬಳಿಕೆ ಪ್ರಕರಣದಲ್ಲಿ ಜೌಹಾರ್ ವಿಶ್ವವಿದ್ಯಾನಿಲಯದ ಕ್ಯಾಂಪಸ್ಗೆ ಹೊಂದಿಕೊಂಡರುವ ಭೂಮಿಯನ್ನು ವಶಕ್ಕೆ ತೆಗೆದುಕೊಳ್ಳುವಂತೆ ರಾಮ್ಪುರದ ಜಿಲ್ಲಾ ದಂಡಾಧಿಕಾರಿಗೆ ನಿರ್ದೇಶಿಸಿದ ಸಮಾಜವಾದಿ ಪಕ್ಷದ ಶಾಸಕ ಅಝಂ ಖಾನ್ ಮೇಲೆ ಅಲಹಾಬಾದ್ ಉಚ್ಚ ನ್ಯಾಯಾಲಯ ವಿಧಿಸಿದ್ದ ಜಾಮೀನು ಷರತ್ತಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆ ನೀಡಿದೆ. 

ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್ ಹಾಗೂ ಬೇಲಾ ಎಂ. ತ್ರಿವೇದಿ ಅವರನ್ನೊಳಗೊಂಡ ರಜಕಾಲದ ಪೀಠ, ಮೇಲ್ನೋಟಕ್ಕೆ ಅಲಹಾಬಾದ್ ಉಚ್ಚ ನ್ಯಾಯಾಲಯ ಖಾನ್ ಅವರ ಮೇಲೆ ಹೇರಿದ ಜಾಮೀನು ಷರತ್ತು ಅಸಮಾನವಾಗಿದೆ ಹಾಗೂ ಸಿವಿಲ್ ನ್ಯಾಯಾಲಯದ ತೀರ್ಪಿನಂತೆ ಕಾಣುತ್ತದೆ ಎಂದು ಹೇಳಿದೆ.

ಜೌಹರ್ ವಿಶ್ವವಿದ್ಯಾನಿಲಯಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಉಚ್ಚ ನ್ಯಾಯಾಲಯ ವಿಧಿಸಿರುವ ಜಾಮೀನು ಷರತ್ತನ್ನು ಪ್ರಶ್ನಿಸಿ ಅಝಂ ಖಾನ್ ಸಲ್ಲಿಸಿರುವ ಮನವಿಯ ಕುರಿತು ಸುಪ್ರೀಂ ಕೋರ್ಟ್ ಉತ್ತರಪ್ರದೇಶ ಸರಕಾರದಿಂದ ಪ್ರತಿಕ್ರಿಯೆ ಕೋರಿದೆ. ಖಾನ್ ಪರ ಹಾಜರಾಗಿದ್ದ ಹಿರಿಯ ವಕೀಲ ಕಪಿಲ್ ಸಿಬಲ್, ರಾಂಪುರದ ಜಿಲ್ಲಾ ಮ್ಯಾಜಿಸ್ಟ್ರೇಟ್ ವಿಶ್ವವಿದ್ಯಾನಿಲಯದ ಕಟ್ಟಡಗಳನ್ನು ತೆರವುಗೊಳಿಸುವಂತೆ ಕೋರಿ ನೋಟಿಸು ನೀಡಿದ್ದು, ಅವುಗಳನ್ನು ಕೆಡವಲು ಪ್ರಯತ್ನಿಸುತ್ತಿದ್ದಾರೆ ಎಂದರು. ಉಚ್ಚ ನ್ಯಾಯಾಲಯ ವಿಧಿಸಿದ ಷರತ್ತಿಗೆ ತಡೆ ನೀಡುತ್ತೇವೆ ಹಾಗೂ ಪ್ರಕರಣದ ವಿಚಾರಣೆಯನ್ನು ರಜಾ ಕಾಲದ ಬಳಿಕ ನಡೆಸಲಾಗುವುದು ಎಂದು ಪೀಠ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News