ಪೋರ್ಟಲ್ನಲ್ಲಿ 27 ಕೋಟಿಗೂ ಅಧಿಕ ಅಸಂಘಟಿತ, ವಲಸೆ ಕಾರ್ಮಿಕರು ನೋಂದಣಿ

Update: 2022-05-27 18:23 GMT

ಹೊಸದಿಲ್ಲಿ, ಮೇ 27: ರಾಜ್ಯಗಳು ನೀಡಿದ ಮಾಹಿತಿಯ ಆಧಾರದಲ್ಲಿ ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್ಐಸಿ)ದೊಂದಿಗೆ ಸಮಾಲೋಚನೆ ನಡೆಸಿ ಅಭಿವೃದ್ಧಿಗೊಳಿಸಲಾದ ಪೋರ್ಟಲ್ನಲ್ಲಿ ಸರಿಸುಮಾರು 27.45 ಕೋಟಿ ಅಸಂಘಟಿತ ಕಾರ್ಮಿಕರು ಅಥವಾ ವಲಸೆ ಕಾರ್ಮಿಕರು ನೋಂದಾಯಿಸಿದ್ದಾರೆ ಎಂದು ಕೇಂದ್ರ ಸರಕಾರ ಸುಪ್ರೀಂ ಕೋರ್ಟ್ಗೆ ತಿಳಿಸಿದೆ.

ಕೇಂದ್ರ ಸರಕಾರದ ಪರವಾಗಿ ನ್ಯಾಯಾಲಯದ ಮುಂದೆ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ, ಕಾರ್ಮಿಕರ ದಾಖಲಾತಿಗಾಗಿ ಎನ್ಐಸಿಯೊಂದಿಗೆ ಸಮಾಲೋಚನೆ ನಡೆಸಿ ಈ ಪೋರ್ಟಲ್ ಅಭಿವೃದ್ಧಿಗೊಳಿಸಲಾಗಿತ್ತು ಎಂದು ನ್ಯಾಯಮೂರ್ತಿಗಳಾದ ಎಂ.ಆರ್. ಶಾ ಹಾಗೂ ಬಿ.ವಿ. ನಾಗರತ್ನಾ ಅವರನ್ನು ಒಳಗೊಂಡ ಪೀಠಕ್ಕೆ ತಿಳಿಸಿದರು. 

‘‘ಈ ನೋಂದಣಿಯ ಉದ್ದೇಶ ಸರಕಾರಗಳು ಘೋಷಿಸುವ ಹಿತಚಿಂತನೆಯ ಯೋಜನೆಗಳು ಸಂಬಂಧಪಟ್ಟ ಅಸಂಘಟಿತ ಕಾರ್ಮಿಕರು ಅಥವಾ ವಲಸೆ ಕಾರ್ಮಿಕರಿಗೆ ತಲುಪುವುದನ್ನು ಖಚಿತಪಡಿಸಿಕೊಳ್ಳುವುದು’’ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಿಸಿದೆ. ಅನುಸರಣಾ ವರದಿ ಸಲ್ಲಿಸಲು ಕಾಲಾವಕಾಶ ನೀಡುವಂತೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಅವರು ಕೋರಿದರು. ರಾಜ್ಯಗಳಿಂದ ಅಗತ್ಯವಿರುವ ಎಲ್ಲ ಮಾಹಿತಿಗಳನ್ನು ಪಡೆಯಿರಿ. ಇದರಿಂದ ಅಸಂಘಟಿತ ಕಾರ್ಮಿಕರು ಅಥವಾ ವಲಸೆ ಕಾರ್ಮಿಕರ ಹಿತಾಸಕ್ತಿಯನ್ನು ರಕ್ಷಿಸಲು ಮುಂದಿನ ಆದೇಶ ನೀಡಲು ಸಾಧ್ಯವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News