ಯಾಸೀನ್ ಮಲಿಕ್‍ಗೆ ಶಿಕ್ಷೆ ಖಂಡಿಸಿದ ಇಸ್ಲಾಮಿಕ್ ಸಹಕಾರ ಸಂಘಟನೆ: "ಉಗ್ರವಾದವನ್ನು ಬೆಂಬಲಿಸಬೇಡಿ" ಎಂದ ಭಾರತ

Update: 2022-05-28 07:16 GMT

 ಹೊಸದಿಲ್ಲಿ: ಉಗ್ರವಾದ ಚಟುವಟಿಕೆಗಳಿಗೆ ಹಣ ಪೂರೈಕೆ ಪ್ರಕರಣದಲ್ಲಿ ಜಮ್ಮು ಮತ್ತು ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಯಾಸೀನ್ ಮಲಿಕ್‍ಗೆ ಬುಧವಾರ ವಿಶೇಷ ಎನ್‍ಐಎ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆ ಘೋಷಿಸಿರುವುದನ್ನು ಇಸ್ಲಾಮಿಕ್ ಸಹಕಾರ ಸಂಘಟನೆ ಖಂಡಿಸಿದ ಬೆನ್ನಲ್ಲೇ ಪ್ರತಿಕ್ರಿಯಿಸಿದ ಭಾರತ ಸರಕಾರ, ಉಗ್ರವಾದವನ್ನು ಬೆಂಬಲಿಸಬೇಡಿ ಎಂದು  ಸಂಘಕ್ಕೆ ಸಲಹೆ ನೀಡಿದೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯ ಈ ಕುರಿತು ಹೇಳಿಕೆ ನೀಡಿ "ಯಾಸೀನ್ ಮಲಿಕ್ ಪ್ರಕರಣದ ತೀರ್ಪನ್ನು ಖಂಡಿಸಿ ಇಸ್ಲಾಮಿಕ್ ಸಹಕಾರ ಸಂಘಟನೆ-ಸ್ವತಂತ್ರ ಖಾಯಂ ಮಾನವ ಹಕ್ಕುಗಳ ಆಯೋಗ (ಒಐಸಿ-ಐಪಿಎಚ್‍ಆರ್‍ಸಿ) ನೀಡಿದ ಹೇಳಿಕೆ ಅಸ್ವೀಕಾರಾರ್ಹ, ಇಂತಹ ಹೇಳಿಕೆಗಳ ಮೂಲಕ ಸಂಘಟನೆಯು ಬಹಿರಂಗವಾಗಿ ಯಾಸೀನ್ ಮಲಿಕ್ ಅವರ ಉಗ್ರ ಚಟುವಟಿಕೆಗಳನ್ನುಬೆಂಬಲಿಸಿದೆ" ಎಂದು ಹೇಳಿದೆ.

"ಉಗ್ರವಾದದ ವಿರುದ್ಧ ಶೂನ್ಯ ಸಹಿಷ್ಣುತೆಯನ್ನು ಜಗತ್ತು ಬಯಸುತ್ತಿದೆ ಮತ್ತು  ಉಗ್ರವಾದವನ್ನು ಇಸ್ಲಾಮಿಕ್ ಸಹಕಾರ ಸಂಘಟನೆಯು ಯಾವತ್ತೂ ಬೆಂಬಲಿಸಬಾರದು" ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.

ಶುಕ್ರವಾರ ಹೇಳಿಕೆ ನೀಡಿದ್ದ ಇಸ್ಲಾಮಿಕ್ ಸಹಕಾರ ಸಂಘಟನೆ, ಯಾಸೀನ್ ಮಲಿಕ್ ಪ್ರಕರಣದ ವಿಚಾರಣೆ ಒಂದು ಕಪಟ ನಾಟಕವಾಗಿದೆ ಎಂದಿತ್ತಲ್ಲದೆ ಆತನನ್ನು ಅಮಾನವೀಯ ಪರಿಸ್ಥಿತಿಗಳಲ್ಲಿ ಜೈಲಿನಲ್ಲಿ ಇರಿಸಲಾಗಿದೆ ಎಂದು ಆರೋಪಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News