ಮೀನುಗಾರಿಗೆ ಎಸ್‌ಸಿ ಮೊಗೇರ ಪ್ರಮಾಣಪತ್ರಕ್ಕೆ ವಿರೋಧ: ಜೂ.6ರಂದು ದಸಂಸ- ಮುಗೇರ ಸಂಘಗಳಿಂದ ಪ್ರತಿಭಟನೆ

Update: 2022-05-28 16:05 GMT

ಉಡುಪಿ, ಮೇ 28: ಅಸ್ಪೃಶ್ಯರಲ್ಲದ ಮೀನುಗಾರ ಸಮುದಾಯಕ್ಕೆ ನೀಡಿರುವ ಪರಿಶಿಷ್ಟ ಜಾತಿಯ ಮೊಗೇರ ಪ್ರಮಾಣಪತ್ರಗಳನ್ನು ಕೂಡಲೇ ತಡೆಹಿಡಿಯಬೇಕು ಒತ್ತಾಯಿಸಿ ದಸಂಸ ಹಾಗೂ ಮುಗೇರ ಸಂಘ ಜಂಟಿಯಾಗಿ ಬೃಹತ್ ಪ್ರತಿಭಟನೆ ಹಾಗೂ ಬಹಿರಂಗ ಸಭೆಯನ್ನು ಜೂ.6ರಂದು ಉಡುಪಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡದ ಕರಾವಳಿ ಭಾಗದ ಮೀನುಗಾರ ಸಮುದಾಯದವರು ಪರಿಶಿಷ್ಟ ಜಾತಿಯ ಮೊಗೇರ ಜನಾಂಗದ ಜಾತಿ ಪ್ರಮಾಣಪತ್ರ ನೀಡುವಂತೆ ಒತ್ತಾಯಿಸುತ್ತಿರುವುದು ಖಂಡನೀಯ. ಪರಿಶಿಷ್ಟ ಜಾತಿಯ 101 ಜಾತಿಪಟ್ಟಿಯಲ್ಲಿ ಮೊಗೇರ ಎಂಬ ಹೆಸರೇ ಇಲ್ಲ. ಹಾಗಿದ್ದರೂ ಅಧಿಕಾರಿಗಳು ಸುಳ್ಳು ಜಾತಿ ಪ್ರಮಾಣಪತ್ರ ನೀಡುತ್ತಿದ್ದಾರೆ ಎಂದು ದೂರಿದರು.

ಅಸ್ಪೃಶ್ಯ ಜಾತಿಯಲ್ಲದ ಮೀನುಗಾರರು ಹಾಗೂ ಬೋವಿ ಜನಾಂಗದವರು ಈಗಾಗಲೇ ನಕಲಿ ಜಾತಿ ಪ್ರಮಾಣಪತ್ರ ಪಡೆದು ಸರಕಾರಿ ಸೌಲಭ್ಯಗಳನ್ನು ಪಡೆದಿರುವ ಬಗ್ಗೆ ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ನೀಡಲಾಗಿದೆ. ಆದರೂ ಸರಕಾರ ಈ ಬಗ್ಗೆ ನಿರ್ಲಕ್ಷ ಧೋರಣೆ ತಾಳುತ್ತಿದೆ. ಅಸ್ಪಶ್ಯರಲ್ಲದ ಜನಾಂಗಕ್ಕೆ ಪರಿಶಿಷ್ಟ ಜಾತಿಯ ಮೀಸಲಾತಿ ನೀಡಿರುವುದರಿಂದ ಈ ವರ್ಗಕ್ಕೆ ತೀವ್ರ ಅನ್ಯಾಯವಾಗಿದೆ ಎಂದು ಅವರು ಆರೋಪಿಸಿದರು.

ಆದುದರಿಂದ ಈಗಾಗಲೇ ನಕಲು ಜಾತಿ ಪ್ರಮಾಣಪತ್ರ ಪಡೆದು ಮೀನು ಗಾರ ಮತ್ತು ಬೋವಿ ಜನಾಂಗದವರಿಗೆ ನೀಡಿರುವ ಸರಕಾರಿ ಸೌಲಭ್ಯಗಳನ್ನು ಕೂಡಲೇ ಹಿಂಪಡೆಯಬೇಕು ಮತ್ತು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ದಸಂಸ ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ಯಾಮ್ ರಾಜ್ ಬಿರ್ತಿ, ಪರಮೇಶ್ವರ ಉಪ್ಪೂರು, ಅಣ್ಣಪ್ಪ ನಕ್ರೆ, ಮುಗೇರ ಸಂಘದ ಜಿಲ್ಲಾಧ್ಯಕ್ಷ ಅಪ್ಪು ಮರ್ಣೆ, ಗುರುಚರಣ್ ಮುಗೇರ ಕಾಪು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News