ಮುಂದಿನ 2-3 ದಿನಗಳಲ್ಲಿ ಮುಂಗಾರು ಮಳೆ ಆಗಮನ ಸಾಧ್ಯತೆ: ಐಎಂಡಿ

Update: 2022-05-28 18:01 GMT

ಹೊಸದಿಲ್ಲಿ, ಮೇ 28: ಮುಂದಿನ ಎರಡರಿಂದ ಮೂರು ದಿನಗಳಲ್ಲಿ ಭಾರತದ ದಕ್ಷಿಣ ಕೇರಳದ ಕರಾವಳಿಗೆ ಮುಂಗಾರು ಮಳೆ ಆಗಮಿಸಲಿದೆ ಎಂದು ಭಾರತದ ಹವಾಮಾನ ಇಲಾಖೆ ಶುಕ್ರವಾರ ತಿಳಿಸಿದೆ. ‘‘ಮುಂದಿನ 2ರಿಂದ 3 ದಿನಗಳಲ್ಲಿ ಕೇರಳಕ್ಕೆ ನೈಋತ್ಯ ಮುಂಗಾರು ಮಳೆ ಆಗಮಿಸಲು ಪರಿಸ್ಥಿತಿ ಅನುಕೂಲಕರವಾಗಿದೆ’’ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮುಂಗಾರು ಮಳೆ ಎಂದಿಗಿಂತ 5 ದಿನ ಮುಂಚಿತವಾಗಿ ಮೇ 27ರಂದು ಕೇರಳ ತಲುಪುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮೇ 13ರಂದು ಹೇಳಿತ್ತು. ಉಷ್ಣ ಮಾರುತದಿಂದ ತಲ್ಲಣಗೊಂಡ ಕೇರಳದಂತಹ ಭಾರತದ ಇತರ ಭಾಗಗಳಲ್ಲಿ ಈ ಮುಂಗಾರು ಮಳೆ ಸ್ವಲ್ಪ ಮಟ್ಟಿನ ನಿರಾಳತೆಯನ್ನು ನೀಡಲಿದೆ.

ಕೃಷಿ ಉತ್ಪನ್ನಗಳನ್ನು ಉತ್ಪಾದಿಸುವ ಹಾಗೂ ಬಳಸುವ ಜಗತ್ತಿನ ಅತಿ ದೊಡ್ಡ ದೇಶಗಳಲ್ಲಿ ಭಾರತ ಕೂಡ ಒಂದು. ಇಲ್ಲಿ ಕೃಷಿ ಭೂಮಿಗೆ ನೀರಾವರಿಗಾಗಿ ಸುಮಾರು ಶೇ. 50ರಷ್ಟು ಮುಂಗಾರು ಮಳೆಯನ್ನು ಅವಲಂಭಿಸಲಾಗಿದೆ. 2022ರಲ್ಲಿ ಭಾರತದಲ್ಲಿ ಸರಾಸರಿ ಮುಂಗಾರು ಮಳೆ ಬೀಳಲಿದೆ ಎಂದು ಕಳೆದ ತಿಂಗಳು ಹವಾಮಾನ ಇಲಾಖೆ ತಿಳಿಸಿತ್ತು. ಇದು ಏಷ್ಯಾದ ಮೂರನೇ ಅತಿ ದೊಡ್ಡ ಆರ್ಥಿಕತೆಯಾದ ಭಾರತದಲ್ಲಿ ಅತ್ಯಧಿಕ ಕೃಷಿ ಉತ್ಪನ್ನ ಹಾಗೂ ಸಮಗ್ರ ಆರ್ಥಿಕ ಪ್ರಗತಿಯನ್ನು ನಿರೀಕ್ಷೆಯನ್ನು ಹೆಚ್ಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News