ಪಠ್ಯ ಪುಸ್ತಕ ತುಂಬಾ ಕೇಸರಿ ಲಂಗೋಟಿಗಳು ನೇತಾಡುತ್ತಿವೆಯಲ್ಲ...!?

Update: 2022-05-29 03:29 GMT

ಪತ್ರಕರ್ತ ಎಂಜಲು ಕಾಸಿಗೆ ತನ್ನ ಮಗ ಎಸ್ಸೆಸೆಲ್ಸಿ ಕಲಿಯುತ್ತಿರುವ ಸಂಭ್ರಮ. ಸರಕಾರ ಪಠ್ಯ ಪುಸ್ತಕ ಬಿಡುಗಡೆ ಮಾಡಿದ್ದೇ ತಡ, ಕಾಸಿ ಅದನ್ನು ಕೊಂಡುಕೊಂಡು ಪರೀಕ್ಷೆಗೆ ತಯಾರಿ ನಡೆಸತೊಡಗಿದ. ಯಾಕೆಂದರೆ ಪೋಷಕರು ಪರೀಕ್ಷೆಯಲ್ಲಿ ಪಾಸಾದರೆ ಮಾತ್ರ, ಎಸೆಸೆಲ್ಸಿಗೆ ಮಕ್ಕಳನ್ನು ತರಗತಿಗೆ ಸೇರಿಸಲಾಗುವುದು ಎಂದು ಸ್ಥಳೀಯ ಖಾಸಗಿ ಶಾಲೆಯ ಮುಖ್ಯಸ್ಥರು ಆದೇಶ ಹೊರಡಿಸಿದ್ದರು. ಕಾಸಿ ಪಠ್ಯ ಪುಸ್ತಕದ ಒಂದೊಂದೇ ಪುಟಗಳನ್ನು ಬಿಡಿಸತೊಡಗಿದ.

*****

ಪಾಠ-1

ಬುಲೆಟ್ ಟ್ರೈನ್
ಲೇಖಕರು: ಸುಳ್ಳಿನ ಬೇಲಿಯ ಚಕ್ರವರ್ತಿ
ಬುಲ್ಲೆಟ್ ಟ್ರೈನ್ ಅಂದರೆ ಏನು ಗೊತ್ತೇನು? ಗಂಟೆಗೆ 200 ಕಿಲೋಮೀಟರ್ ಹೋಗುವಂತಹದ್ದು. ಮಂಗಳೂರಿಂದ ಬೆಂಗಳೂರಿಗೆ ಒಂದು ಬುಲೆಟ್ ಟ್ರೇನ್ ಬಿಟ್ಟಿದ್ದಾರೆ ಅಂದ್ಕೊಳ್ಳಿ. ಉಡುಪಿಯ ಒಂದು ಹುಡುಗ ಬೆಳಗ್ಗೆ 6 ಗಂಟೆಗೆ ಎದ್ದ. ಜನಿವಾರವನ್ನು ಕಿವಿಗೆ ತೂಗು ಹಾಕಿ ಶೌಚಾಲಯದ ಒಳಹೊಕ್ಕ. ಸ್ನಾನ ಮುಗಿಸಿ, ಐಟಿ ಬ್ಯಾಗ್ ಏರಿಸಿಕೊಂಡು ಬುಲೆಟ್ ಟ್ರೇನ್ ಹತ್ತಿದ ಅಂದ್ಕೊಳ್ಳಿ. ಹತ್ತು...ಹತ್ತು ಕಾಲಿಗೆಲ್ಲ ಬೆಂಗಳೂರಿಗೆ ಬರ್ಬೋದು. ಆಫೀಸಲ್ಲಿ ಕುಳಿತು ಫೇಸ್‌ಬುಕ್, ವಾಟ್ಸಾಪ್‌ಗೆ ಎರಡು ರೂಪಾಯಿ ಬೆಲೆಬಾಳುವ ಮೆಸೇಜುಗಳನ್ನು ಹಾಕಿ, ಜನರನ್ನು ಮಂಕು ಮರುಳು ಮಾಡಿ, 6 ಗಂಟೆಗೆ ಅಲ್ಲಿಂದ ಬುಲ್ಲೆಟ್ ಟ್ರೇನ್ ಹಿಡಿದ ಅಂದ್ಕೊಳ್ಳಿ. 8 ಗಂಟೆಗೆ ಮಂಗಳೂರಿಗೆ ಬೆಂಕಿ ಹಚ್ಚಿ, ಅಲ್ಲಿಂದ ಒಂಭತ್ತು ಗಂಟೆಗೆ ಉಡುಪಿ ತಲುಪಿ ಅಲ್ಲಿಗೂ ಬೆಂಕಿ ಹಚ್ಚಿ, ಮನೆಗೆ ಹೋಗಿ ಆರಾಮ ಮಲ್ಕೋಬಹುದುರೀ...ಇದು ನಮ್ಮ ಮೋದಿಯವರ ಪ್ಲಾನು... ಊಹಿಸೋಕು ಸಾಧ್ಯವಿಲ್ಲ....

***

ಲೇಖಕರ ಪರಿಚಯ: ಸುಳ್ಳಿನ ಬೇಲಿಯ ಚಕ್ರವರ್ತಿಯವರು ಈಗಾಗಲೇ ತನ್ನ ಪ್ರಖರ ಸುಳ್ಳಿನ ವಾಕ್ಚಾತುರ್ಯಕ್ಕಾಗಿ ದೇಶಾದ್ಯಂತ ತಮ್ಮ ಮಾನಮಾರ್ಯದೆಗಳನ್ನು ಬಿಕರಿಗಿಟ್ಟು ನಾಡಿನ ಖ್ಯಾತಿಯನ್ನು ಉತ್ತುಂಗಕ್ಕೇರಿಸಿದವರು. ‘ಹೆಂಗ್ ಪುಂಗ್ಲಿ’ ವಿಶ್ವವಿದ್ಯಾಲಯದ ಕುಲಪತಿಯಾಗಿ ಕಾರ್ಯನಿರ್ವಹಿಸುತ್ತಿರುವ ಇವರು ಡ್ರೋನ್ ಪ್ರತಾಪ, ಕಿರಿಕ್ ಕಿರೀಟಿ, ವಕ್ರ ತೀರ್ಥ, ಹುಚ್ಚ ಪ್ರಥಮ ಮೊದಲಾದ ವಿಜ್ಞಾನಿಗಳು, ರಾಜ್ಯಶಾಸ್ತ್ರಜ್ಞರು ಮತ್ತು ಪ್ರೊಫೆಸರ್‌ಗಳನ್ನು ನಾಡಿಗೆ ಕಾಣಿಕೆಯಾಗಿ ನೀಡಿದವರು. ಬರೇ ಲಂಗೋಟಿಯ ಜೊತೆಗೆ ಬ್ರಿಗೇಡ್‌ನ್ನು ಆರಂಭಿಸಿರುವ ಇವರು ಈಗ ಅತ್ಯಮೂಲ್ಯ ಕಾರುಗಳ ಜೊತೆಗೆ ಓಡಾಡುತ್ತಿರುವುದು ಇವರ ಸಾಧನೆಗಳಲ್ಲಿ ಒಂದು. ತಮ್ಮೆಲ್ಲ ಲಜ್ಜೆಗಳನ್ನು ಬ್ರಿಗೇಡ್‌ಗಾಗಿ ತ್ಯಾಗ ಮಾಡಿ, ಇದೀಗ ಮೂರು ಬಿಟ್ಟು ತಿರುಗಾಡುತ್ತಿದ್ದು ಮೂರು ಬಿಟ್ಟವರಿಗೆ ಸರ್ವ ಮಾರ್ಗದರ್ಶಿಯಾಗಿದ್ದಾರೆ.

***

ಪಾಠ-2

ಲಂಗೋಟಿ ಕಾವ್ಯ
ಕವಿ- ಪು-ರೋಹಿತ ವಕ್ರತೀರ್ಥ
ಬೇಲಿ ಮೇಲೆ ಹಾರುತಿಹುದು ನನ್ನ ಲಂಗೋಟಿ
ಅದರ ಮೂಲಕ ನನ್ನ ಅಭಿಮಾನಿಗಳು ಕೋಟಿ ಕೋಟಿ
ಪಠ್ಯದ ಪುಟಪುಟಗಳಲ್ಲಿ ನನ್ನ ಲಂಗೋಟಿ
ಹಿಂದಿಯ ಬಾವುಟ ನನ್ನಯ ಪಾಲಿಗೆ ನಾಟಿ...ನಾಟಿ...(ಇಂಗ್ಲಿಷ್ ನಾಟಿ)
ಆರೆಸ್ಸೆಸ್-ಶಿಕ್ಷಣ ಸಚಿವರ ಭೇಟಿ ಬೇಟಿ
ಪಾಠ ಕಲಿವ ಬಾಲರಿಗೆ ನನ್ನ ಚಾಟಿ
ಪಠ್ಯ ಪುಸ್ತಕವೀಗ ನನ್ನ ಮನೆಯ ಲಂಗೋಟಿ

ಆ ಲಂಗೋಟಿಯ ವಾಸನೆಗೆ ಮಕ್ಕಳೆಲ್ಲ ಮೂಗು ಮುಚ್ಚಿ ಛೀ...ಛೀ...ಛೀ...
*****

ಲೇಖಕರ ಪರಿಚಯ: ಕುವೆಂಪು ಫೋಬಿಯಾದಿಂದ ನರಳುತ್ತಿದ್ದರೂ, ಅದಕ್ಕೆ ಆರೆಸ್ಸೆಸ್‌ನ ಸೂಕ್ತ ಮೂಲ ವ್ಯಾಧಿ ಚಿಕಿತ್ಸೆಯ ಜೊತೆಗೆ ಸಾಧನೆ ತೋರಿಸಿದವರು ಕವಿ ಪು ರೋಹಿತ ವಕ್ರತೀರ್ಥರವರು. ಹೆಂಗ್‌ಪುಂಗ್ಲಿ ವಿಶ್ವವಿದ್ಯಾಲಯದಿಂದ ಹೊರಬಿದ್ದಿರುವ ಇನ್ನೊಂದು ಭಾರೀ ಪ್ರತಿಭೆಯಾಗಿದ್ದಾರೆ. ಇಂಟರ್‌ನೆಟ್‌ಗಳಿಂದ ವಸ್ತುಗಳನ್ನು ಅಪಾರ ಶ್ರಮದಿಂದ ಕದ್ದು, ವಿಷ ಭಟ್ಟರ ಪ್ರೋತ್ಸಾಹದಿಂದ ಕವಿಗಳಾಗಿ, ಲೇಖಕರಾಗಿ ಗುರುತಿಸಲ್ಪಟ್ಟವರು. ಇವರನ್ನು ಐಐಟಿ, ಸಿಇಟಿ ಪ್ರೊಫೆಸರ್ ಆಗಿ ಸ್ವತಃ ಶಿಕ್ಷಣ ಸಚಿವರೇ ನೇಮಕ ಮಾಡಿದ್ದರೂ ಅವುಗಳನ್ನು ನಿರಾಕರಿಸಿ ತ್ಯಾಗಿಯಾಗಿ ಗುರುತಿಸಿಕೊಂಡವರು. ನವಕರ್ನಾಟಕಾದ್ಯಂತ ಇವರ ಪುಸ್ತಕಗಳನ್ನು ಪರಿಚಯಿಸಿ ಈತನನ್ನು ಎಡ ಪಂಥೀಯ ಚಿಂತನೆಗಳಿಗೂ ಪ್ರೊಫೆಸರನ್ನಾಗಿ ಮಾಡುವ ಯೋಜನೆಯೊಂದು ರಶ್ಯದಲ್ಲಿ ರೂಪುಗೊಳ್ಳುತ್ತಿದೆ ಎನ್ನುವ ಮಾಹಿತಿಯಿದೆ. ಪುತ್ತೂರು ಸಮೀಪದ ಬೊಳುವಾರರ ಕೈಯಿಂದ ಮುನ್ನುಡಿಯ ಸನ್ಮಾನವನ್ನು ಪಡೆದು, ಸರ್ವರ ಪಾಲಿಗೆ ಮಾನ್ಯರಾಗಿ ಬಳಿಕ, ತಮ್ಮ ಗುರುಗಳಿಗೂ ಪ್ರತಿ ಸನ್ಮಾನ ಮಾಡಿದ ಹೆಗ್ಗಳಿಕೆ ಇವರದು.

***

ಪತ್ರಕರ್ತ ಕಾಸಿಗೆ ತನ್ನ ಕೈಯಲ್ಲಿರುವುದೇನು ಎನ್ನುವುದು ಒಮ್ಮೆಗೆ ಅರ್ಥವಾಗಲಿಲ್ಲ. ನಿಧಾನಕ್ಕೆ ಒಂದೊಂದೇ ಪುರೋಹಿತ ಪಾಠಗಳನ್ನು ಬಿಡಿಸುತ್ತಿದ್ದಂತೆಯೇ ಕುಳಿತಲ್ಲೇ ಚಳಿಜ್ವರ ಬಂದಂತೆ ಆಡತೊಡಗಿದ.

ಕೆಲವು ಪುಟಗಳಲ್ಲಿ ಅಂಬೇಡ್ಕರ್ ತಲೆಯನ್ನು ಕತ್ತರಿಸಲಾಗಿತ್ತು. ಇನ್ನು ಕೆಲವು ಪುಟಗಳಲ್ಲಿ ಕುವೆಂಪು ಅವರ ಕಣ್ಣನ್ನೇ ಕುಕ್ಕಲಾಗಿತ್ತು. ಕೆಲವು ಪುಟಗಳಲ್ಲಿ ಕೆಲವು ಪುರೋಹಿತರು ಸಾಲಾಗಿ ಎಲೆ ಹಾಕಿ ಊಟಕ್ಕೆ ಕುಳಿತಿದ್ದರು. ಇನ್ನೊಂದು ಪುಟವನ್ನು ಹರಿದು ತೆಗೆಯಲಾಗಿತ್ತು. ಆ ಪುಟದ ಹರಿದ ಚೂರಿನಲ್ಲಿ ಲಂಕೇಶರ ಕನ್ನಡಕವಿತ್ತು. ಪುಣ್ಯಕ್ಕೆ ಈ ಕೃತಿಯಲ್ಲಿ ಅವರೇನಾದರೂ ಇದ್ದಿದ್ದರೆ ಅವರಿಗೆ ಅತಿ ದೊಡ್ಡ ಅನ್ಯಾಯವಾಗಿ ಬಿಡುತ್ತಿತ್ತು ಅನ್ನಿಸಿತು ಕಾಸಿಗೆ. ಪ್ರತಿ ಪುಟಗಳಲ್ಲೂ ಪು-ರೋಹಿತನ ಕೇಸರಿ ಲಂಗೋಟಿಗಳನ್ನು ನೇತಾಡಿಸಲಾಗಿತ್ತು.

ಮೂಗಿಗೆ ದುರ್ವಾಸನೆ ಬಡಿಯುತ್ತಿತ್ತು. ಉಸಿರಾಡಲು ಕಷ್ಟವಾಗತೊಡಗಿತು. ಅದೇನಾಯಿತೋ ಕೈಯಲ್ಲಿದ್ದ ಪುಸ್ತಕವನ್ನು ಕಿಟಕಿಯಿಂದ ಹೊರಗೆ ಎಸೆದು ನಿರಾಳವಾಗಿ ಉಸಿರಾಡ ತೊಡಗಿದ. ನೇರವಾಗಿ ಶಿಕ್ಷಣ ಸಚಿವರಿಗೆ ಫೋನ್ ಮಾಡಿದವನೇ ‘‘ಸಾರ್...ಇದೇನಿದು...ಪಠ್ಯ ಪುಸ್ತಕ ತುಂಬಾ ಕೇಸರಿ ಲಂಗೋಟಿಗಳು ನೇತಾಡುತ್ತಿವೆಯಲ್ಲ...?’’ ಎಂದು ಪೋನ್ ಮಾಡಿದ.

ಆ ಕಡೆಯಿಂದ ಶಿಕ್ಷಣ ಸಚಿವರು ಅಬ್ಬರಿಸಿದರು ‘‘ಅವೆಲ್ಲ ಎಡಪಂಥೀಯರ ಆರೋಪಗಳು. ಸರಿಯಾಗಿ ನೋಡಿ. ಅವು ಲಂಗೋಟಿಗಳಲ್ಲ, ಕನ್ನಡದ ಬಾವುಟಗಳು...ಐಐಟಿ ಪ್ರೊಫೆಸರ್ ವಿರುದ್ಧ ಈ ರೀತಿ ಆರೋಪ ಮಾಡಿದ್ದಕ್ಕೆ ನಿಮ್ಮ ಅಕ್ರೆಡಿಶನ್ ಕಾರ್ಡ್‌ನ್ನು ಮುಟ್ಟುಗೋಲು ಹಾಕಲಾಗುವುದು’’

Writer - ಚೇಳಯ್ಯ

contributor

Editor - ಚೇಳಯ್ಯ

contributor

Similar News