'ಸ್ವತಂತ್ರ ವೀರ್‌ ಸಾವರ್ಕರ್' ಸಿನಿಮಾದ ಫಸ್ಟ್ ಲುಕ್ ಬಿಡುಗಡೆ, ತಯಾರಿ ಹಂತದಲ್ಲಿ 'ಗೋಡ್ಸೆ' ಸಿನಿಮಾ

Update: 2022-05-29 13:48 GMT
Photo:twitter/RandeepHooda

ಮುಂಬೈ: ವಿವಾದಾತ್ಮಕ ಬಲಪಂಥೀಯ ನಾಯಕ ವಿ.ಡಿ ಸಾವರ್ಕರ್ ಅವರ 139ನೇ ಜನ್ಮದಿನದಂದು ಅವರ ಜೀವನಾಧಾರಿತ 'ಸ್ವತಂತ್ರ ವೀರ್ ಸಾವರ್ಕರ್' ಚಿತ್ರದ ಫಸ್ಟ್ ಲುಕ್ ಹೊರಬಿದ್ದಿದೆ. ಈ ಚಿತ್ರದಲ್ಲಿ ಸಾವರ್ಕರ್ ಪಾತ್ರದಲ್ಲಿ ಬಾಲಿವುಡ್ ನಟ ರಣದೀಪ್ ಹೂಡಾ ನಟಿಸುತ್ತಿದ್ದಾರೆ.  

ನಿರ್ಮಾಪಕ ಸಂದೀಪ್ ಸಿಂಗ್ ಮತ್ತು ಆನಂದ್ ಪಂಡಿತ್ ಅವರು ಸಾವರ್ಕರ್ ಚಿತ್ರವನ್ನು ನಿರ್ಮಿಸುತ್ತಿದ್ದು, ಇದನ್ನು ಮಹೇಶ್ ಮಂಜ್ರೇಕರ್ ನಿರ್ದೇಶಿಸುತ್ತಿದ್ದಾರೆ. ಚಿತ್ರದ ಶೂಟಿಂಗ್ ಆಗಸ್ಟ್ 2022 ರಿಂದ ಪ್ರಾರಂಭವಾಗಲಿದೆ.

ರಣದೀಪ್ ಹೂಡಾ-ಸಂದೀಪ್ ಸಿಂಗ್ ಈ ಹಿಂದೆ 'ಸರಬ್ಜಿತ್' ಸಿನಿಮಾಗೆ ಜೊತೆಯಾಗಿದ್ದರು. ಈ ಜೋಡಿ ಇದೀಗ ಸಾವರ್ಕರ್‌ ಚಿತ್ರಕ್ಕಾಗಿ ಮತ್ತೊಮ್ಮೆ ಜೊತೆಯಾಗಿದೆ.  ಈ ಚಿತ್ರವು ಆಗಸ್ಟ್ 2022 ರಲ್ಲಿ ತೆರೆಗೆ ಬರಲಿದ್ದು, ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಬಿಡುಗಡೆಯಾಗುವ ನಿರೀಕ್ಷೆಯಿದೆ.
 
“ದಾವೂದ್ ಇಬ್ರಾಹಿಂ, ಹರ್ಷದ್ ಮೆಹ್ತಾ ಮತ್ತು ಲಲಿತ್ ಮೋದಿಯವರ ಮೇಲೆ ಚಲನಚಿತ್ರಗಳು ಬರುವಾಗ, ನಾವು ಸ್ವಾತಂತ್ರ್ಯ ಹೋರಾಟಗಾರರ ಚಿತ್ರವನ್ನು ಯಾಕೆ ನಿರ್ಮಿಸಬಾರದು ” ಎಂದು ನಿರ್ಮಾಪಕ ಸಂದೀಪ್ ಸಿಂಗ್ ದಿ ಹಿಂದೂ ಜೊತೆಗೆ ಪ್ರಶ್ನಿಸಿದ್ದಾರೆ. 

ಈ ಹಿಂದೆ, ಪ್ರಧಾನಿ ನರೇಂದ್ರ ಮೋದಿಯ ಚಿತ್ರವನ್ನು ನಿರ್ಮಿಸಲು ಇದೇ ನಿರ್ಮಾಪಕರು ಬಂಡವಾಳ ಹೂಡಿದ್ದರು. 2019 ರ ಚುನಾವಣೆಗೆ ಮುನ್ನ ಈ ಚಿತ್ರವನ್ನು ಬಿಡುಗಡೆ ಮಾಡಬೇಕೆಂದು ಚಿತ್ರತಂಡ ಉದ್ದೇಶಿಸಿದ್ದರೂ, ಚುನಾವಣಾ ಆಯೋಗ ಅದಕ್ಕೆ ತಡೆಯೊಡ್ಡಿತ್ತು. ಇದೇ ನಿರ್ಮಾಪಕರು ಗಾಂಧಿ ಹಂತಕ ನಾಥುರಾಮ್ ಗೋಡ್ಸೆ ಬಗ್ಗೆ ಚಿತ್ರ ಮಾಡಲಿದ್ದಾರೆ ಎಂದು theHindu ವರದಿ ಮಾಡಿದೆ. 

ʼನೀವು ಪ್ರೊಪಗಂಡಾ ಚಿತ್ರಗಳನ್ನು ನಿರ್ಮಿಸುತ್ತಿದ್ದೀರಾʼ ಎಂಬ ಪ್ರಶ್ನೆಗೆ ಉತ್ತರಿಸಿದ ನಿರ್ಮಾಪಕ ಸಂದೀಪ್‌ ಸಿಂಗ್‌, “ನಿಜವಾದ ಕಥೆಯನ್ನು ಹೇಳುವುದು ಪ್ರೊಪಗಂಡವಾಗಿದ್ದರೆ, ಅದನ್ನು ಖಂಡಿತವಾಗಿಯೂ ಮಾಡುತ್ತೇನೆ" ಎಂದು ಹೇಳಿದ್ದಾರೆ. "ತನ್ನ ದೇಶವಾಸಿಗಳನ್ನು ಒಗ್ಗೂಡಿಸಲು ಪ್ರಯತ್ನಿಸಿದ ಯಾರೊಬ್ಬರ ಕಥೆಯನ್ನು ಹೇಳುವುದು ಪ್ರೊಪಗಂಡವಾಗಿದ್ದರೆ, ನಾನು ಖಂಡಿತವಾಗಿಯೂ ಪ್ರೊಪಗಂಡದ ಚಲನಚಿತ್ರವನ್ನು ಮಾಡುತ್ತೇನೆ" ಎಂದು ಅವರು ಹೇಳಿದ್ದಾರೆ. 

ಅದಾಗ್ಯೂ, ಹಿಂದುತ್ವದ ನಿರೂಪಣೆಯನ್ನು ಉತ್ತೇಜಿಸುವ ಪ್ರಯತ್ನವಲ್ಲ ಎಂದು ಅವರು ಹೇಳಿದ್ದಾರ. "ಇದು ರಾಜಕಾರಣಿಯ ಕೆಲಸ, ಚಲನಚಿತ್ರ ತಯಾರಕರು ಹೇಳಬೇಕಾದ ಕಥೆಯನ್ನು ಹೇಳಲು ಬಯಸುತ್ತಾರೆ" ಎಂದು ಸಿಂಗ್‌ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News