ಲಾಲ್‌ ಸಿಂಗ್‌ ಚಡ್ಡಾ ಟ್ರೇಲರ್‌ ಬಿಡುಗಡೆ: ಅಮೀರ್‌ ಖಾನ್‌ ಅಭಿನಯದ ಚಿತ್ರ ಬಹಿಷ್ಕರಿಸಲು ಬಲಪಂಥೀಯರಿಂದ ಅಭಿಯಾನ

Update: 2022-05-29 18:07 GMT
Photo: Trailer/SS

ಮುಂಬೈ: ಅಮೀರ್ ಖಾನ್ ಅಭಿನಯದ ʼಲಾಲ್ ಸಿಂಗ್ ಚಡ್ಡಾʼ ಚಿತ್ರದ ಟ್ರೈಲರ್ ಇಂದು ಬಿಡುಗಡೆಯಾಗಿದೆ. ಕರೀನಾ ಕಪೂರ್ ಖಾನ್ ಕೂಡ ನಟಿಸಿರುವ ಈ ಚಿತ್ರವನ್ನು ಅದ್ವೈತ್ ಚಂದನ್ ನಿರ್ದೇಶಿಸಿದ್ದಾರೆ. ವರ್ಷಗಳ ಬಳಿಕ ಅಮೀರ್‌ ಚಿತ್ರ ತೆರಕಾಣಲಿರುವುದರಿಂದ ಅಭಿಮಾನಿಗಳು ಈ ಚಿತ್ರಕ್ಕೆ ವಿಪರೀತ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅದಾಗ್ಯೂ, ಇಂದು ಅಮೀರ್‌ ಖಾನ್‌ ಚಿತ್ರವನ್ನು ಬಹಿಷ್ಕರಿಸುವಂತೆ ಬಲಪಂಥೀಯರು ಟ್ವಿಟರಿನಲ್ಲಿ ಅಭಿಯಾನ ಮಾಡುತ್ತಿದ್ದಾರೆ.

ಈ ಚಿತ್ರಕ್ಕೆ ಟ್ರೇಲರ್ ಬಿಡುಗಡೆಗೆ ಸ್ವಲ್ಪ ಮುಂಚಿತವಾಗಿ, #BoycottLaalSinghChaddha ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಗಿದೆ. ಅಮೀರ್‌ ಖಾನ್‌ ಅವರ 'ಭಾರತದಲ್ಲಿ ಅಸಹಿಷ್ಣುತೆ' ವಿವಾದ ಮತ್ತು ಇತರ ಕೆಲವು ವಿಷಯಗಳನ್ನು ಇಟ್ಟುಕೊಂಡು ಅಮಿರ್‌ ಖಾನ್‌ ವಿರುದ್ಧ ಅಭಿಯಾನ ಮಾಡಲಾಗುತ್ತಿದೆ.

#BoycottBollywood #BoycottLaalSinghChaddha ಮೊದಲಾದ ಹ್ಯಾಷ್‌ಟ್ಯಾಗ್‌ಗಳು ಟ್ವಿಟರಿನಲ್ಲಿ ಟ್ರೆಂಡ್‌ ಆಗಿದ್ದು, ಬಾಲಿವುಡ್‌ ಗೆ ಫಾರೆಸ್ಟ್‌ ಗಂಪ್‌ ಅನ್ನು ರಿಮೇಕ್‌ ಮಾಡಲು 14 ವರ್ಷ ಬೇಕಾಯಿತು ಎಂದು ಕೆಲವರು ಕಮೆಂಟ್‌ ಮಾಡಿದ್ದಾರೆ.

ರವಿವಾರ ಸಂಜೆ ಲಾಲ್‌ ಸಿಂಗ್‌ ಚಿತ್ರ ಟ್ರೈಲರ್‌ ಬಿಡುಗಡೆಯಾಗಿದ್ದು, ಇದು ಟಾಮ್‌ ಹಾಂಕ್ಸ್‌ ನಟಿಸಿರುವ ಹಾಲಿವುಡ್‌ ನ ಜನಪ್ರಿಯ ಚಿತ್ರ, ಆಸ್ಕರ್‌ ವಿಜೇತ ʼಫಾರೆಸ್ಟ್‌ ಗಂಪ್‌ʼನ ರಿಮೇಕ್‌ ಆಗಿದೆ. ಚಿತ್ರದ ಟ್ರೇಲರ್‌ ನಲ್ಲಿ ತೆಲುಗು ನಟ ನಾಗಚೈತನ್ಯ ಕೂಡಾ ಕಾಣಿಸಿಕೊಂಡಿದ್ದಾರೆ. ಲಾಲ್‌ ಸಿಂಗ್‌ ಚಡ್ಡಾ ಚಿತ್ರದ ಟ್ರೈಲರ್‌ಗೆ ಮೆಚ್ಚುಗೆ ಕೂಡಾ ವ್ಯಕ್ತವಾಗಿದೆ.

ಗಮನಾರ್ಹವಾಗಿ, ಈ ಚಿತ್ರದಲ್ಲಿ, ತುರ್ತು ಪರಿಸ್ಥಿತಿ, 1983 ಕ್ರಿಕೆಟ್ ವಿಶ್ವಕಪ್, ಆಪರೇಷನ್ ಬ್ಲೂ ಸ್ಟಾರ್, ರಥಯಾತ್ರೆ, ಮತ್ತು 1999 ರ ಕಾರ್ಗಿಲ್ ಯುದ್ಧದಂತಹ ಭಾರತೀಯ ಇತಿಹಾಸದ ಪ್ರಮುಖ ಘಟನೆಗಳನ್ನು ಲಾಲ್ ಸಿಂಗ್ ಚಡ್ಡಾ (ಅಮೀರ್ ಖಾನ್) ದೃಷ್ಟಿಕೋನದಿಂದ ವಿವರಿಸಲಾಗಿದೆ ಎಂದು ವರದಿಯಾಗಿದೆ.

ಮಾಧ್ಯಮ ವರದಿಗಳ ಪ್ರಕಾರ, ಶಾರುಖ್ ಖಾನ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.  

ಚಿತ್ರದ ನಿರ್ಮಾಪಕರಲ್ಲಿ ಅಮೀರ್‌ ಖಾನ್‌ ಕೂಡಾ ಒಬ್ಬರಾಗಿದ್ದು, ಮುಖೇಶ್‌ ಅಂಬಾನಿ ಒಡೆತನದ ರಿಲಾಯನ್ಸ್‌ ಸಮೂಹದ ವಿಯಾಕಾಂ18 ಸ್ಟುಡಿಯೋಸ್‌ (Viacom18 Studios) ಕೂಡಾ ಬಂಡವಾಳ ಹೂಡಿದೆ. ಚಿತ್ರವು ಆಗಸ್ಟ್ 11 ರಂದು ಥಿಯೇಟರ್‌ಗಳಿಗೆ ಬರಲು ಸಿದ್ಧವಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News