ಹಜ್ ಯಾತ್ರೆಯ ಕನಸು ಕೈಬಿಟ್ಟು 28 ಸೆಂಟ್ಸ್ ಜಮೀನನ್ನು ಸರಕಾರದ ಲೈಫ್ ಮಿಷನ್ ಯೋಜನೆಗೆ ನೀಡಿದ ಕೇರಳದ ದಂಪತಿ

Update: 2022-05-30 11:30 GMT

ಪಟ್ಟಣಂತಿಟ್ಟ: ತಮ್ಮ ಬಹು ವರ್ಷಗಳ ಕನಸಾಗಿದ್ದ ಹಜ್ ಯಾತ್ರೆ ಕೈಗೊಳ್ಳುವ ಉದ್ದೇಶದಿಂದ ಕೇರಳದ ಅರನ್ಮುಲ ನಿವಾಸಿಗಳಾದ ಜಾಸ್ಮಿನ್ ಮತ್ತು ಹನೀಫಾ ಅವರು ತಮ್ಮ ಜಮೀನನ್ನು ಮಾರಾಟ ಮಾಡುವ ಇಂಗಿತ ಹೊಂದಿದ್ದರು.

ಆದರೆ ಕೊನೆಯ ಕ್ಷಣದಲ್ಲಿ ಅವರು ತಮ್ಮ 28 ಸೆಂಟ್ಸ್ ವಿಸ್ತೀರ್ಣದ ಪೂರ್ವಜರ ಆಸ್ತಿಯನ್ನು ರಾಜ್ಯ ಸರಕಾರದ  ನಿರ್ವಸಿತರಿಗಾಗಿ ಮನೆ  ನಿರ್ಮಿಸುವ ಯೋಜನೆಯಾದ ಲೈಫ್ ಮಿಷನ್‍ಗೆ ದಾನ ಮಾಡಿದ್ದಾರೆ.

ದಂಪತಿಯ ಈ ನಿರ್ಧಾರದ ಹಿಂದೆ ಒಂದು ಕಾರಣವಿದೆ. ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಅವರ ನೆರೆಮನೆಯವರೊಬ್ಬರು ತಮ್ಮ ಮೃತ ಕುಟುಂಬ ಸದಸ್ಯರ ಅಂತ್ಯಸಂಸ್ಕಾರಕ್ಕೆ ಪರದಾಡುವಂತಾಗಿತ್ತು. ಅವರಿಗೆ ಸ್ವಂತ ಜಮೀನಿಲ್ಲದೇ ಇರುವುದೇ ಇದಕ್ಕೆ ಕಾರಣವಾಗಿತ್ತು,  "ನೆರೆಮನೆಯವರಿಗೆ ಅವರ ಸಮುದಾಯದ ಸದಸ್ಯರೊಬ್ಬರು ನಾಲ್ಕು ಸೆಂಟ್ಸ್ ಜಮೀನು ನೀಡಿದ ನಂತರ ಸಮಸ್ಯೆ ಇತ್ಯರ್ಥವಾಗಿತ್ತು. ಇದನ್ನು ನೋಡಿ ನಾವು ಹಜ್ ಯಾತ್ರೆಗೆ ತೆರಳುವ ಬದಲು ಅಗತ್ಯವಿದ್ದವರಿಗೆ ಜಮೀನು ಒದಗಿಸಲು ನಿರ್ಧರಿಸಿದೆವು" ಎಂದು ಹನೀಫಾ ಹೇಳುತ್ತಾರೆ.

ರವಿವಾರ ಕೇರಳ  ಆರೋಗ್ಯ ಸಚಿವೆ ವೀಣಾ ಜಾರ್ಜ್ 57 ವರ್ಷದ ಹನೀಫಾ ಅವರ ನಿವಾಸಕ್ಕೆ ತೆರಳಿ ಅವರ ಜಮೀನು ದಾಖಲೆಗಳನ್ನು ಲೈಫ್ ಮಿಷನ್ ಯೋಜನೆಗಾಗಿ ಪಡೆದುಕೊಂಡರು.

ಈ ಜಮೀನು 48 ವರ್ಷದ ಜಾಸ್ಮೀನ್ ಒಡೆತನದಲ್ಲಿದ್ದು ರಾಜ್ಯ ಸರಕಾರದ "ಮನಸ್ಸೋಡಿತ್ತಿರಿ ಮಣ್ಣ್" ಯೋಜನೆಗೆ ಮೀಸಲಿರಿಸಲಾಗುವುದು. ಈ ಯೋಜನೆಗಾಗಿ ಸರಕಾರಕ್ಕೆ ಇಲ್ಲಿಯವರೆಗೆ 13 ಕಡೆಗಳಲ್ಲಿ ಒಟ್ಟು 926.75 ಸೆಂಟ್ಸ್ ಜಮೀನು ದೊರಕಿದೆ. ಇತರ 30 ಕಡೆಗಳಲ್ಲಿ 830.8 ಸೆಂಟ್ಸ್ ಜಮೀನು ಒದಗಿಸುವ ಭರವಸೆ ದೊರಕಿದೆ. 1000 ಮನೆಗಳ ನಿರ್ಮಾಣಕ್ಕೆ ರೂ 25 ಕೋಟಿ ದೇಣಿಗೆ ದೊರಕಿದೆ ಎಂದು ರಾಜ್ಯದ ಸ್ಥಳೀಯಾಡಳಿತ ಸಚಿವ ಗೋವಿಂದನ್ ತಿಳಿಸಿದ್ದಾರೆ. ಈ ಯೋಜನೆಯಡಿ ಇಲ್ಲಿಯ ತನಕ ಸರಕಾರ 2,95,006 ಮನೆಗಳನ್ನು ಹಸ್ತಾಂತರಿಸಿದ್ದರೆ 34,374 ಮನೆಗಳು ನಿರ್ಮಾಣ ಹಂತದಲ್ಲಿವೆ. ಒಟ್ಟು 27 ವಸತಿ ಸಂಕೀರ್ಣಗಳೂ ತಲೆಯೆತ್ತುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News