ʼಶಾರುಖ್‌ ಖಾನ್‌ ಆಗಿದ್ದಕ್ಕೆ ಬೆಲೆ ತೆರಬೇಕಾಯಿತುʼ: ಆರ್ಯನ್‌ ಖಾನ್‌ ಪ್ರಕರಣದ ಬಗ್ಗೆ ಶತ್ರುಘ್ನ ಸಿನ್ಹ ಹೇಳಿಕೆ

Update: 2022-05-30 11:24 GMT

ಮುಂಬೈ: ಬಹುಚರ್ಚಿತ ಡ್ರಗ್ಸ್ ಪ್ರಕರಣದಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಸಲ್ಲಿಸಿದ್ದ ಆರೋಪಪಟ್ಟಿಯಿಂದ ಆರ್ಯನ್ ಖಾನ್ ಹೆಸರನ್ನು ಕೈಬಿಡಲಾಗಿದೆ. ಎನ್‌ಸಿಬಿ ಅವರಿಗೆ ಕ್ಲೀನ್ ಚಿಟ್ ನೀಡಿದೆ. ಅದರ ನಂತರ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಈ ನಿರ್ಧಾರವನ್ನು ಸ್ವಾಗತಿಸುತ್ತಿದ್ದು, ಆರ್ಯನ್ ಮತ್ತು ಅವರ ತಂದೆ ಶಾರುಖ್ ಖಾನ್ ರನ್ನು ಬೆಂಬಲಿಸುತ್ತಿದ್ದಾರೆ. ಇದೀಗ ಈ ಪಟ್ಟಿಗೆ ನಟ ಶತ್ರುಘ್ನ ಸಿನ್ಹಾ ಹೆಸರೂ ಸೇರಿಕೊಂಡಿದೆ.  


 'ನನ್ನ ನಿಲುವು ಈಗ ಸರಿಯಾಗಿದೆ ಎಂದು ತೋರುತ್ತಿದೆ. ನಾನು ಆರ್ಯನ್ ಮಾತ್ರವಲ್ಲ ಶಾರುಖ್ ಖಾನ್ ಗೆ ಕೂಡ ಬೆಂಬಲಿಸಿದ್ದೆ. ಅವರು ತಾನು ಶಾರುಖ್ ಖಾನ್ ಎಂಬುದಕ್ಕೆ ಬೆಲೆ ತೆರುತ್ತಿದ್ದಾರೆ.ʼ ಎಂದು ಅವರು ಹೇಳಿದ್ದಾರೆ. 

“ಸರ್ಕಾರದ ಈ ನಿರ್ಧಾರ ಖಂಡಿತವಾಗಿಯೂ ಪ್ರಶಂಸೆಗೆ ಅರ್ಹವಾಗಿದೆ. ಆದರೆ, ಅದೇ ಸಮಯದಲ್ಲಿ, ಈ ನಿರ್ಧಾರವು ಬರಲು ತುಂಬಾ ತಡವಾಗಿದೆ ಎಂದು ತೋರುತ್ತದೆ ಎಂದು ನಾನು ಹೇಳಲು ಬಯಸುತ್ತೇನೆ. ಯಾವುದೇ ಕಾರಣವಿಲ್ಲದೆ, ಯಾವುದೇ ಪುರಾವೆಗಳಿಲ್ಲದೆ ಮತ್ತು ಯಾವುದೇ ಸರಿಯಾದ ತನಿಖೆಯಿಲ್ಲದೆ ಅಮಾಯಕ ಬಾಲಕನನ್ನು ಬಂಧಿಸಿ ಕಂಬಿ ಹಿಂದೆ ಕಳುಹಿಸಿರುವ ಎಲ್ಲರ ವಿರುದ್ಧ ಕ್ರಮ ಕೈಗೊಳ್ಳಬೇಕು. ಹಾಗಾಗಿ ಭವಿಷ್ಯದಲ್ಲಿ ಇಂತಹ ಹೆಜ್ಜೆ ಇಡುವ ಮುನ್ನ ಸಾವಿರ ಬಾರಿ ಯೋಚಿಸಬೇಕು” ಎಂದು ಬಾಂಬೆ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಶತ್ರುಘ್ನ ಸಿನ್ಹಾ ಹೇಳಿದ್ದಾರೆ.

ಕ್ರೂಸ್ ಡ್ರಗ್ ಪ್ರಕರಣದ ತನಿಖೆ ನಡೆಸಿದ ತಂಡದ ವಿರುದ್ಧ ವಾಗ್ದಾಳಿ ನಡೆಸಿದ ಶತ್ರುಘ್ನ, “ಆ ತಂಡವು ಸಂಸ್ಥೆಯ ಹೆಸರಿಗೆ ಕಳಂಕ ತಂದಿದೆ. ಭಾರತದ ಅತ್ಯಂತ ಜನಪ್ರಿಯ ನಟ ಶಾರುಖ್ ಖಾನ್ ಅವರ ಮಗ ಎಂಬ ಕಾರಣಕ್ಕಾಗಿ ಅವರು ಆರ್ಯನ್ ಅವರನ್ನು ಬಲಿಪಶು ಮಾಡಿದ್ದಾರೆ. ಇದು ಸೇಡಿನ ರಾಜಕಾರಣದಂತೆ ಕಾಣುತ್ತಿದೆ. ವಿಶೇಷವಾಗಿ ಎನ್‌ಸಿಬಿಯಂತಹ ಉನ್ನತ ಸಂಸ್ಥೆಯಿಂದ ಇದನ್ನು ಒಪ್ಪಿಕೊಳ್ಳಲಾಗುವುದಿಲ್ಲ. ಶಾರುಖ್ ಖಾನ್ ಅನುಭವಿಸಿದ ನೋವು, ಸಂಕಟ ಮತ್ತು ಅಸಹಾಯಕತೆಯನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ.” ಎಂದು ಅವರು ಹೇಳಿದ್ದಾರೆ. 

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕ್ರೂಸ್ ಪಾರ್ಟಿಯಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಖಾನ್ ಅವರನ್ನು ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಆರ್ಯನ್ ಖಾನ್ 26 ದಿನಗಳ ಕಾಲ ಜೈಲಿನಲ್ಲೇ ಇರಬೇಕಾಯಿತು. ಇದೀಗ 238 ದಿನಗಳ ವಿಚಾರಣೆಯ ನಂತರ ಅಂತಿಮವಾಗಿ ಮೇ 27 ರಂದು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಆರ್ಯನ್ ಸೇರಿದಂತೆ ಆರು ಮಂದಿಗೆ ಕ್ಲೀನ್ ಚಿಟ್ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News