ವರ್ಷಗಳ ಬಳಿಕ ತೆರೆ ಮೇಲೆ ಆಮಿರ್ ಖಾನ್: ʼಲಾಲ್‌ ಸಿಂಗ್‌ ಚಡ್ಡಾʼ ಬಿಡುಗಡೆಗೆ ಅಭಿಮಾನಿಗಳ ಕಾತರ

Update: 2022-05-31 03:44 GMT
Photo: Laal Singh Chadda/trailer

ಮುಂಬೈ: ಬಾಲಿವುಡ್‌ ನ ಮಿ.ಪರ್ಫೆಕ್ಷನಿಸ್ಟ್‌ ಖ್ಯಾತಿಯ ಆಮಿರ್ ಖಾನ್ ಅವರ ಬಹುನಿರೀಕ್ಷಿತ ʼಲಾಲ್‌ ಸಿಂಗ್‌ ಚಡ್ಡಾʼ ಚಿತ್ರ ಟ್ರೇಲರ್‌ ರಿಲೀಸ್‌ ಆಗಿದೆ. ಐಪಿಎಲ್‌ 2022 ರ ಫೈನಲ್‌ ಪಂದ್ಯದ ಮೊದಲ ಇನ್ನಿಂಗ್ಸ್‌ನ ಲಘು ವಿರಾಮದ ನಡುವೆ ಈ ಟ್ರೇಲರ್‌ ಅನ್ನು ರಿಲೀಸ್‌ ಮಾಡಲಾಗಿದೆ.

2018 ರಲ್ಲಿ ಆಮಿರ್ ಖಾನ್ ಅಭಿನಯದ ʼಥಗ್ಸ್‌ ಆಫ್‌ ಹಿಂದೂಸ್ತಾನ್‌ʼ  ಬಿಡುಗಡೆಯಾದ ಬಳಿಕ ಆಮಿರ್ ಖಾನ್ ಅವರನ್ನು ಪೂರ್ಣ ಪ್ರಮಾಣದಲ್ಲಿ ತೆರೆಯ ಮೇಲೆ ಕಾಣಲು ಅಭಿಮಾನಿಗಳು ಕಾತರರಾಗಿದ್ದಾರೆ. ಅದರಲ್ಲೂ, ಲಾಲ್‌ ಸಿಂಗ್‌ ಚಡ್ಡಾದಲ್ಲಿ ಶಾರುಖ್‌ ಖಾನ್‌ ವಿಶೇಷ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದೂ ಕುತೂಹಲಕ್ಕೆ ಕಾರಣವಾಗಿದೆ. 

ಸದ್ಯ, ಲಾಲ್‌ ಸಿಂಗ್‌ ಚಡ್ಡಾ ಟ್ರೇಲರ್‌ ವಿಶೇಷ ಗಮನ ಸೆಳೆಯುತ್ತಿದೆ. ಇದು ಟಾಮ್‌ ಹಾನ್ಕ್ಸ್‌ ಅಭಿನಯದ, ಆಸ್ಕರ್‌ ವಿಜೇತ ಹಾಲಿವುಡ್‌ ಚಿತ್ರ ʼಫಾರೆಸ್ಟ್‌ ಗಂಪ್‌ʼ ನ ಹಿಂದಿ ಅವತರಣಿಕೆಯಾದರೂ, ಟ್ರೇಲರ್‌ನಲ್ಲಿರುವ ದೃಶ್ಯಗಳು, ಹಿನ್ನೆಲೆ ಸಂಗೀತ ಹಾಗೂ ಕಲಾವಿದರ ಅಭಿನಯದ ದೃಷ್ಟಿಕೋನದಿಂದ ತಾಜಾತನವನ್ನು ಉಳಿಸಿಕೊಂಡಿರಬಹುದು ಎಂದು ಸುಲಭವಾಗಿ ಊಹಿಸಬಹುದು. ಭಾರತದ ವಿವಿಧ ಭಾಗದಲ್ಲಿ ಚಿತ್ರೀಕರಣ ಮಾಡಿದ್ದು ಟ್ರೇಲರ್‌ನಿಂದಲೇ ವ್ಯಕ್ತವಾಗುತ್ತಿದೆ. ಬಾಲ್ಯದಲ್ಲಿ ನಡೆದಾಡಲೂ ಕಷ್ಟಪಡುವ ಆಮಿರ್ ಖಾನ್ ಪಾತ್ರ, ಬಳಿಕ ಮ್ಯಾರಥಾನ್ ಓಟಗಾರನಾಗಿ, ಸೈನಿಕನಾಗಿ ಬದಲಾಗುವುದು ಟ್ರೇಲರ್‌ನಲ್ಲಿ ನೋಡಬಹುದು. 

ಲಾಲ್‌ ಸಿಂಗ್‌ ಚಡ್ಡಾ ಮೂಲಕ ತೆಲುಗು ನಟ ನಾಗಚೈತನ್ಯ ಹಿಂದಿಗೆ ಪಾದಾರ್ಪಣೆ ಮಾಡುತ್ತಿದ್ದು, ಈ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಲಿದ್ದಾರೆ ಎನ್ನುವುದು ಟ್ರೇಲರ್‌ ನಿಂದಲೇ ಊಹಿಸಬಹುದಾಗಿದೆ. ಟ್ರೇಲರ್‌ನಲ್ಲಿ ಕನಿಷ್ಟ ಎರಡು ದೃಶ್ಯದಲ್ಲಿ ನಾಗಚೈತನ್ಯ ಕಾಣಿಸಿಕೊಂಡಿರುವುದು ಚಿತ್ರದಲ್ಲಿ ಅವರ ಪಾತ್ರದ ಮಹತ್ವವನ್ನು ಎತ್ತಿ ತೋರಿಸಿದೆ. ಇನ್ನು ಕರೀನಾ ಕಪೂರ್‌ ರ ದೃಶ್ಯಗಳು ಅವರು ನಿರ್ವಹಿಸುತ್ತಿರುವ ಪಾತ್ರದ ಬಗ್ಗೆ ಕುತೂಹಲವನ್ನು ಹುಟ್ಟಿಸಿದೆ. ಅದರಲ್ಲೂ, ಪೊಲೀಸರು ಎಳೆದುಕೊಂಡು ಹೋಗುತ್ತಿರುವ ದೃಶ್ಯದಲ್ಲಿ ಕರೀನಾ ಅವರ ನಿರ್ಭಾವುಕ ಸ್ಥಿತಪ್ರಜ್ಞೆ ಚಿತ್ರದ ಕಾಡುವ ದೃಶ್ಯಗಳಲ್ಲಿ ಒಂದಾಗಿದೆ ಎಂದು ಹಲವು ಸಿನಿಮಾಭಿಮಾನಿಗಳು ಅಭಿಪ್ರಾಯಿಸಿದ್ದಾರೆ.  

2.45 ನಿಮಿಷದ ಟ್ರೇಲರಿನ ದೃಶ್ಯಗಳು, ಚಿತ್ರದಲ್ಲಿ ಭಾರತೀಯ ರಾಜಕೀಯ ಇತಿಹಾಸದ ಪ್ರಮುಖ ವಿದ್ಯಾಮಾನಗಳನ್ನು ಒಳಗೊಂಡಿದೆ ಎನ್ನುವುದಕ್ಕೆ ಸುಳಿವುಗಳನ್ನು ನೀಡುತ್ತವೆ. ದೇಶದ ಹಲವಾರು ಪ್ರಮುಖ ಐತಿಹಾಸಿಕ ಘಟನೆಗಳ ಮೇಲೆ ವ್ಯಾಪಿಸಿರುವ ಈ ಕಥೆಯನ್ನು ಮೂಲ ಚಿತ್ರದಿಂದ ಭಾರತೀಯ ಸನ್ನಿವೇಶಕ್ಕೆ ಚೆನ್ನಾಗಿ ಹೊಂದಿಸಿಕೊಂಡಂತೆ ತೋರುತ್ತದೆ. ಆಮಿರ್ ಖಾನ್ ನಟನೆಯ ಬಗ್ಗೆ ಹೇಳಬೇಕಾದರೆ, ತಮ್ಮ ಹಿಂದಿನ ಸಿನೆಮಾಗಳ ಪಾತ್ರಗಳಾದ ರಾಂಚೋ (ತ್ರೀ ಇಡಿಯೆಟ್ಸ್), ಪಿಕೆಯ ಪ್ರಭಾವಗಳು ಈ ಚಿತ್ರದಲ್ಲೂ ಬೀರಿರುವ ಲಕ್ಷಣಗಳು ಕಾಣುತ್ತವೆ. ಪಾತ್ರವು ಮುಗ್ಧವೂ, ವಿಶೇಷ ಬುದ್ಧಿವಂತನೂ ಆಗಿರುವ ಹಿನ್ನೆಲೆಯಲ್ಲಿ ಹೀಗೆ ತೋರಿರುವ ಸಾಧ್ಯತೆಯೂ ಇದೆ. ಚಿತ್ರದಲ್ಲೂ ಹಳೆಯ ಪಾತ್ರಗಳ ನೆರಳು ಕಾಣಿಸುತ್ತದಾ ಎಂದು ಕಾದು ನೋಡಬೇಕಾಗಿದೆ. 

ತಾಂತ್ರಿಕತೆ ವಿಚಾರಗಳಲ್ಲಿ, ಲಾಲ್ ಸಿಂಗ್ ಚಡ್ಡಾದ ದೃಶ್ಯಗಳನ್ನು ಚೆನ್ನಾಗಿ ಚಿತ್ರೀಕರಿಸಲಾಗಿದೆ. ಟ್ರೇಲರಿನಲ್ಲಿ ಕಂಡ ವಿವಿಧ ಪ್ರೇಕ್ಷಣೀಯ ಸ್ಥಳಗಳನ್ನು ಆಕರ್ಷಣೀಯವಾಗಿ ಸೆರೆ ಹಿಡಿಯಲಾಗಿದೆ. ಹಿನ್ನೆಲೆ ಸಂಗೀತವು ಟ್ರೇಲರ್‌ ನ ಕಾವ್ಯಾತ್ಮಕ ದೃಶ್ಯಗಳಿಗೆ ಹಿತವಾದ ಇಂಪು ಮತ್ತು ತಾಜಾತನದ ಅನುಭವವನ್ನು ನೀಡುತ್ತದೆ. ಸಿನಿಮಾದ ಸಂಗೀತ ನಿರ್ದೇಶನವನ್ನು ಪ್ರೀತಂ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಚಿತ್ರಕ್ಕೆ ಅಮಿತಾಭ್ ಭಟ್ಟಾಚಾರ್ಯ ಸಾಹಿತ್ಯವನ್ನು ಬರೆದಿದ್ದಾರೆ. ಆಮಿರ್ ಖಾನ್, ಝೈರಾ ವಾಸಿಮ್ ಅಭಿನಯದ ʼಸೀಕ್ರೆಟ್‌ ಸೂಪರ್‌ ಸ್ಟಾರ್‌ʼ ಚಿತ್ರದ ನಿರ್ದೇಶಕ ಅದ್ವೈತ್‌ ಚಂದನ್‌ ಈ ಚಿತ್ರಕ್ಕೂ ಆಕ್ಷನ್‌-ಕಟ್‌ ಹೇಳಿದ್ದಾರೆ. ರಿಲಾಯನ್ಸ್‌ ಸಮೂಹದ ವೈಯಕಾಮ್ 18 ಜೊತೆಗೆ ಆಮಿರ್ ಖಾನ್ ಮತ್ತು ಅವರ ಮಾಜಿ ಪತ್ನಿ ಕಿರಣ್‌ ರಾವ್‌ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News