ಅಕ್ರಮ ಹಣ ವರ್ಗಾವಣೆ ಆರೋಪ: ದಿಲ್ಲಿಯ ಆಪ್ ಸಚಿವ ಸತ್ಯೇಂದ್ರ ಜೈನ್ ಬಂಧನ‌

Update: 2022-05-30 17:32 GMT
Satyendar Jain

ಹೊಸದಿಲ್ಲಿ,ಮೇ 30: ಜಾರಿ ನಿರ್ದೇಶನಾಲಯ (ಈ.ಡಿ.)ವು ಅಕ್ರಮ ಹಣ ವರ್ಗಾವಣೆ ಪ್ರಕರಣವೊಂದರಲ್ಲಿ ದಿಲ್ಲಿಯ ಆಪ್ ಸರಕಾರದ ಆರೋಗ್ಯ ಸಚಿವ ಸತ್ಯೇಂದ್ರ ಜೈನರನ್ನು ಬಂಧಿಸಿದೆ. ಜೈನ್ 2015-16ರಲ್ಲಿ ಕೋಲ್ಕತಾ ಮೂಲದ ಕಂಪನಿಯೊಂದಿಗೆ ಹವಾಲಾ ವಹಿವಾಟುಗಳಲ್ಲಿ ಭಾಗಿಯಾಗಿದ್ದರು ಎಂದು ಈ.ಡಿ.ಆರೋಪಿಸಿದೆ.

‌ಜೈನ್ ಬಂಧನವು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಮಮತಾ ಬ್ಯಾನರ್ಜಿ,ಕೆ.ಚಂದ್ರಶೇಖರ ರಾವ್ ಅವರಂತಹ ಪ್ರತಿಪಕ್ಷ ನಾಯಕರು ಮತ್ತು ಕೇಂದ್ರ ಸರಕಾರದ ನಡುವೆ ಹೊಸ ಸಂಘರ್ಷವನ್ನು ಸೃಷ್ಟಿಸುವ ಸಾಧ್ಯತೆಯಿದೆ. ತಮಗೆ ಕಿರುಕುಳ ನೀಡಲು ಬಿಜೆಪಿ ನೇತೃತ್ವದ ಸರಕಾರವು ಕೇಂದ್ರೀಯ ಸಂಸ್ಥೆಗಳನ್ನು ಬಳಸುತ್ತಿದೆ ಎಂದು ಈ ನಾಯಕರು ಆರೋಪಿಸುತ್ತಲೇ ಬಂದಿದ್ದಾರೆ.

ಜೈನ್ ಆಪ್ ಉಸ್ತುವಾರಿಯಾಗಿರುವ ಹಿಮಾಚಲ ಪ್ರದೇಶದಲ್ಲಿ ಮುಂಬರುವ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅವರನ್ನು ಬಂಧಿಸಲಾಗಿದೆ ಎಂದು ದಿಲ್ಲಿ ಉಪಮುಖ್ಯಮಂತ್ರಿ ಮನೀಷ ಸಿಸೋಡಿಯಾ ಅವರು ಸೋಮವಾರ ಸಂಜೆ ಟ್ವೀಟಿಸಿದ್ದಾರೆ.
 ಕಳೆದ ಎಂಟು ವರ್ಷಗಳಿಂದಲೂ ಜೈನ ವಿರುದ್ಧ ಸುಳ್ಳು ಪ್ರಕರಣವು ನಡೆಯುತ್ತಿದೆ. 

ಈವರೆಗೆ ಈಡಿ ಅವರನ್ನು ಹಲವಾರು ಸಲ ವಿಚಾರಣೆಗೆ ಕರೆಸಿದೆ. ಈ ನಡುವೆ ಯಾವುದೇ ಸಾಕ್ಷಾಧಾರಗಳು ಸಿಗದ್ದರಿಂದ ಅವರನ್ನು ಕರೆಸುವುದನ್ನು ಈ.ಡಿ. ನಿಲ್ಲಿಸಿತ್ತು. ಜೈನ ಹಿಮಾಚಲ ಪ್ರದೇಶದಲ್ಲಿ ಆಪ್ನ ಚುನಾವಣಾ ಉಸ್ತುವಾರಿಯಾಗಿರುವುದರಿಂದ ಈಗ ಮತ್ತೆ ಕಿರುಕುಳವನ್ನು ಆರಂಭಿಸಿದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News