×
Ad

ಪ್ರಧಾನಿಯಿಂದ ‘ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್’ ಯೋಜನೆಯ ಸೌಲಭ್ಯ ಬಿಡುಗಡೆ

Update: 2022-05-30 23:16 IST

ಹೊಸದಿಲ್ಲಿ, ಮೇ 30: ಕೋವಿಡ್ ಸಾಂಕ್ರಾಮಿಕ ರೋಗದ ಸಂದರ್ಭ ತಮ್ಮ ಹೆತ್ತವರನ್ನ ಕಳೆದುಕೊಂಡ ಮಕ್ಕಳಿಗೆ ನೆರವು ನೀಡುವ ಉದ್ದೇಶದಿಂದ ಆರಂಭಿಸಲಾದ ‘ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್’ ಯೋಜನೆಯ ಸೌಲಭ್ಯಗಳನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಬಿಡುಗಡೆ ಮಾಡಿದರು. 

ಕಾರ್ಯಕ್ರಮದಲ್ಲಿ ಪ್ರಧಾನಿ ಅವರು ಶಾಲಾ ಮಕ್ಕಳಿಗೆ ಶಿಷ್ಯ ವೇತನವನ್ನು ವರ್ಗಾಯಿಸಿದರು ಹಾಗೂ ‘ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್’ನ ಪಾಸ್ಪುಸ್ತಕ, ಹಾಗೂ ಆಯುಷ್ಮಾನ್ ಭಾರತ್-ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ ಆರೋಗ್ಯ ಕಾರ್ಡ್ಗಳನ್ನು ಹಸ್ತಾಂತರಿಸಿದರು. ‘ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್’ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು 2021 ಮೇ 29ರಂದು ಆರಂಭಿಸಿದ್ದರು. 2020 ಮಾರ್ಚ್ 11ರಿಂದ 2022 ಫೆಬ್ರವರಿ 28ರ ನಡುವಿನ ಅವಧಿಯಲ್ಲಿ ಕೋವಿಡ್ ಸಾಂಕ್ರಾಮಿಕ ರೋಗದಿಂದ ಹೆತ್ತವರು ಅಥವಾ ಕಾನೂನಾತ್ಮಕ ಪಾಲಕರು ಅಥವಾ ದತ್ತು ಪಾಲಕರನ್ನು ಕಳೆದುಕೊಂಡ ಮಕ್ಕಳಿಗೆ ನೆರವು ನೀಡಲು ಈ ಯೋಜನೆಯನ್ನು ಆರಂಭಿಸಲಾಗಿತ್ತು. 

‘‘ಕೋವಿಡ್ ಸಾಂಕ್ರಾಮಿಕ ರೋಗದ ಸಂದರ್ಭ ತಮ್ಮ ಕುಟುಂಬದ ಸದಸ್ಯರನ್ನು ಕಳೆದುಕೊಂಡ ವ್ಯಕ್ತಿಗಳ ಸಂಕಷ್ಟ ಪರಿಸ್ಥಿತಿ ಬಗ್ಗೆ ನನಗೆ ತಿಳಿದಿದೆ. ಕೋವಿಡ್ ಸಾಂಕ್ರಾಮಿಕ ರೋಗದ ಸಂದರ್ಭ ಹೆತ್ತವರನ್ನು ಕಳೆದುಕೊಂಡ ಮಕ್ಕಳಿಗೆ ಈ ಯೋಜನೆ’’ ಎಂದು ಮೋದಿ ಅವರು ವೀಡಿಯೊ ಕಾನ್ಫರೆನ್ಸ್ನಲ್ಲಿ ಹೇಳಿದ್ದಾರೆ. ‌

ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲ, ತಿಂಗಳ ಶಿಷ್ಯವೇತನ 

‘ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್’ ಯೋಜನೆ ಅಡಿಯಲ್ಲಿ ಸೌಲಭ್ಯಗಳನ್ನು ಬಿಡುಗಡೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಕೋವಿಡ್ ಸಾಂಕ್ರಾಮಿಕ ರೋಗದಿಂದ ಸಂತಸ್ತರಾಗಿರುವ ವಿದ್ಯಾರ್ಥಿಗಳು ಹಾಗೂ ಮಕ್ಕಳಿಗೆ ಸರಣಿ ಯೋಜನೆಗಳನ್ನು ಘೋಷಿಸಿದ್ದಾರೆ.

ಕೋವಿಡ್ ಸಾಂಕ್ರಾಮಿಕ ರೋಗದಿಂದ ತಮ್ಮ ಹೆತ್ತವರು, ಪಾಲಕರನ್ನು ಕಳೆದುಕೊಂಡ ಮಕ್ಕಳ ದಿನ ನಿತ್ಯದ ಅಗತ್ಯತೆಗಳನ್ನು ಈಡೇರಿಸಲು ವಿವಿಧ ಯೋಜನೆಗಳ ಮೂಲಕ 4 ಸಾವಿರ ರೂಪಾಯಿ ಒದಗಿಸಲಾಗುವುದು ಎಂದು ಪ್ರಧಾನಿ ಅವರು ಹೇಳಿದರು. ಇದಲ್ಲದೆ, 18ರಿಂದ 23 ವರ್ಷಗಳ ನಡುವಿನ ವಯೋಮಾನದವರಿಗೆ ಶಿಷ್ಯವೇತನ ನೀಡಲಾಗುವುದು. ಒಂದು ವೇಳೆ ಯಾರಿಗಾದರೂ ವೃತ್ತಿಪರ ಕೋರ್ಸ್ಗಳಿಗೆ, ಉನ್ನತ ಶಿಕ್ಷಣಕ್ಕೆ ಸಾಲದ ಅಗತ್ಯತೆ ಇದ್ದರೆ, ಪಿಎಂ ಕೇರ್ಸ್ ಅದಕ್ಕೆ ಕೂಡ ನೆರವಾಗಲಿದೆ ಎಂದು ಪ್ರಧಾನಿ ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News