ರೈತ ನಾಯಕರ ಮೇಲೆ ಹಲ್ಲೆ, ರಾಜ್ಯದಲ್ಲಿ ಅರಾಜಕ ಪರಿಸ್ಥಿತಿ

Update: 2022-05-31 03:33 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕರ್ನಾಟಕ ಒಂದು ಕಾಲದಲ್ಲಿ ಶಾಂತಿ ಮತ್ತು ಸೌಹಾರ್ದಕ್ಕೆ ಹೆಸರಾಗಿತ್ತು. ಇಲ್ಲಿನ ಕಾನೂನು ಸುವ್ಯವಸ್ಥೆ ಮಾದರಿಯಾಗಿತ್ತು. ಆದರೆ ಯಾವಾಗ ಕೋಮುವಾದಿ ಶಕ್ತಿಗಳನ್ನು ಪ್ರತಿನಿಧಿಸುವ ಪಕ್ಷ ರಾಜ್ಯದ ಅಧಿಕಾರ ಸೂತ್ರ ಹಿಡಿಯಿತೋ ಅಂದಿನಿಂದ ಗಲಭೆ, ಗೂಂಡಾಗಿರಿಯಲ್ಲಿ ಇದು ಉತ್ತರದ ರಾಜ್ಯಗಳನ್ನು ಮೀರಿಸಿದೆ. ಮೇ 30ರಂದು ಬೆಂಗಳೂರಿನಲ್ಲಿ ರೈತ ಸಂಘದ ರಾಷ್ಟ್ರೀಯ ನಾಯಕರಾದ ರಾಕೇಶ್ ಟಿಕಾಯತ್ ಮತ್ತು ರಾಜ್ಯ ರೈತಸಂಘದ ನಾಯಕಿಯರಾದ ಚುಕ್ಕಿ ನಂಜುಂಡಸ್ವಾಮಿ ಮತ್ತು ಅನಸೂಯಮ್ಮ ಅವರ ಮೇಲೆ ನಡೆದ ಹಲ್ಲೆ ಅತ್ಯಂತ ಖಂಡನೀಯವಾಗಿದೆ. ರಾಜ್ಯದಲ್ಲಿ ಕುಸಿಯುತ್ತಿರುವ ಕಾನೂನು ಸುವ್ಯವಸ್ಥೆಗೆ ಇದು ಸಾಕ್ಷಿಯಾಗಿದೆ.

ರೈತ ಸಂಘಟನೆಗಳ ನಾಯಕರೊಂದಿಗೆ ಸಮಾಲೋಚನಾ ಸಭೆಗಾಗಿ ರಾಕೇಶ್ ಟಿಕಾಯತ್ ಬೆಂಗಳೂರಿಗೆ ಬಂದಿದ್ದರು. ನಗರದ ಗಾಂಧಿ ಭವನದಲ್ಲಿ ತಮ್ಮ ಪಾಡಿಗೆ ತಾವು ಸಭೆ ನಡೆಸುತ್ತಿದ್ದರು. ಆಗ ‘‘ಜೈ ಮೋದಿ’’ ಎಂದು ಘೋಷಣೆ ಕೂಗುತ್ತ ಒಳಗೆ ನುಗ್ಗಿದ ಗೂಂಡಾಗಳ ಗುಂಪು ಟಿಕಾಯತ್‌ರನ್ನು ಎಳೆದಾಡಿ ಅವರ ಮುಖಕ್ಕೆ ಮಸಿ ಬಳಿಯಿತು. ರೈತಸಂಘದ ನಾಯಕಿಯರಾದ ಚುಕ್ಕಿ ನಂಜುಂಡಸ್ವಾಮಿ ಮತ್ತು ಅನಸೂಯಮ್ಮ ಅವರ ಮೇಲೆ ಹಲ್ಲೆ ಮಾಡಿತು. ಭಾರತ ರಕ್ಷಣಾ ವೇದಿಕೆ ಎಂಬ ಸಂಘಟನೆಯ ಗೂಂಡಾಗಳು ಈ ದುಷ್ಕೃತ್ಯ ಎಸಗಿದ್ದಾರೆ. ಈ ಗೂಂಡಾಗಳು ಯಾರೆಂದು ವಿವರಿಸಿ ಹೇಳಬೇಕಾಗಿಲ್ಲ. ಸಂಘ ಪರಿವಾರ ನಾನಾ ಹೆಸರಿನ ಸಂಘಟನೆಗಳನ್ನು ಕಟ್ಟಿ ತನ್ನ ಬೇರೆ ಬೇರೆ ಅಜೆಂಡಾಗಳಿಗೆ ಅವುಗಳನ್ನು ಬಳಸಿಕೊಳ್ಳುತ್ತಾ ಬಂದಿದೆ. ಈ ಭಾರತ ರಕ್ಷಣಾ ವೇದಿಕೆ ಆರೆಸ್ಸೆಸ್ ಸೃಷ್ಟಿಸಿದ ಒಂದು ಸಂಘಟನೆ. ಇಂತಹ ಹಲವಾರು ಸಂಘಟನೆಗಳನ್ನು ಅದು ಹೊಂದಿದೆ. ಈ ಘಟನೆ ನಡೆದ ತಕ್ಷಣ ಆರೆಸ್ಸೆಸ್ ಜಾಲತಾಣದ ಚಾನೆಲ್ ಆದ ‘ಸಂವಾದ’ವು, ‘‘ರೈತ ವಿರೋಧಿ ಟಿಕಾಯತ್‌ಗೆ ಮಸಿ’’ ಎಂದು ಸುದ್ದಿ ಪ್ರಸಾರ ಮಾಡತೊಡಗಿತು. ಇದರಿಂದಲೇ ಗೊತ್ತಾಗುತ್ತದೆ ಇದರ ಹಿಂದಿನ ಕೈವಾಡ ಯಾರದೆಂಬುದು. ರಾಜ್ಯದಲ್ಲಿ ತಮ್ಮದೇ ಸರಕಾರ ಇರುವುದರಿಂದ ಏನು ಮಾಡಿಯಾದರೂ ದಕ್ಕಿಸಿಕೊಳ್ಳಬಹುದೆಂಬ ಭಂಡತನ ದಾಳಿಕೋರರಿಗಿದೆ.

ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯ ಸಹಜ. ಆದರೆ ಹಿಟ್ಲರ್ ಮಾದರಿಯ ಸಂಘಟನೆಯಾದ ಆರೆಸ್ಸೆಸ್ ಹಾಗೂ ಅದರ ಅಂಗ ಸಂಘಟನೆ ಬಿಜೆಪಿ ಭಿನ್ನಮತವನ್ನು ಸಹಿಸುವುದಿಲ್ಲ. ದೇಶದ ರಾಜಧಾನಿ ದಿಲ್ಲಿಯಲ್ಲಿ ಒಂದೂವರೆ ವರ್ಷಗಳಷ್ಟು ಸುದೀರ್ಘ ರೈತ ಹೋರಾಟ ನಡೆಸಿದ ರಾಕೇಶ್ ಟಿಕಾಯತ್‌ಮೇಲೆ ಬಿಜೆಪಿಗೆ, ವಿಶೇಷವಾಗಿ ಮೋದಿ ಭಕ್ತರಿಗೆ ತೀವ್ರ ಅಸಮಾಧಾನವಿದೆ.ರೈತರ ಶಾಂತಿಯುತ ಹೋರಾಟವನ್ನು ಸದೆಬಡಿಯಲು ನಾನಾ ಮಸಲತ್ತು ನಡೆಸಿದರು. ಹಿಂಸೆಗೆ ಪ್ರಚೋದಿಸಿದರು. ಆದರೂ ರೈತರು ಮಣಿಯಲಿಲ್ಲ.ಕೊನೆಗೆ ಸರಕಾರವೇ ಮಣಿದು ರೈತರ ಬೇಡಿಕೆಗಳನ್ನು ಒಪ್ಪಿದ್ದಾಗಿ ಪ್ರಧಾನಿ ಹೇಳಬೇಕಾಯಿತು. ಆನಂತರ ನಡೆದ ಮೋಸ, ವಂಚನೆಯ ಕತೆ ಏನೇ ಇರಲಿ, ಮೋದಿಯನ್ನು ನಿರಂಕುಶ ಪ್ರಭು ಎಂದು ಆರಾಧಿಸುತ್ತ ಬಂದವರಿಗೆ ರೈತ ಹೋರಾಟದ ಯಶಸ್ಸಿನಿಂದ ಮುಖಭಂಗವಾದಂತಾಯಿತು. ಹೀಗಾಗಿ ಹತಾಶರಾದ ಅವರು ಬೆಂಗಳೂರಿಗೆ ಬಂದ ಟಿಕಾಯತ್‌ರ ಮೇಲೆ ಮಸಿ ಹಚ್ಚಿದ್ದಾರೆ. ಇದು ಮೇಲ್ನೋಟಕ್ಕೆ ಟಿಕಾಯತ್‌ರಿಗೆ ಹಚ್ಚಿದ ಮಸಿಯಾಗಿದ್ದರೂ ವಾಸ್ತವವಾಗಿ ರಾಜ್ಯದ ಮುಖ್ಯಮಂತ್ರಿಯ ಮುಖಕ್ಕೆ ಮಸಿ ಹಚ್ಚಿದಂತಾಗಿದೆ.ರೈತ ಹೋರಾಟದ ರಾಷ್ಟ್ರೀಯ ನಾಯಕನಿಗೆ ರಕ್ಷಣೆ ಒದಗಿಸಲಾಗದ ಕರ್ನಾಟಕ ಸರಕಾರ ಜಗತ್ತಿನೆದುರು ಮುಖಕ್ಕೆ ಮಸಿ ಬಳಿದುಕೊಂಡು ನಿಂತಂತಾಗಿದೆ.

ರಾಜಕೀಯ ಮತ್ತು ಸೈದ್ಧಾಂತಿಕ ಭಿನ್ನಾಭಿಪ್ರಾಯ ಹೊಂದಿದವರ ಜೊತೆ ಸಂವಾದ, ಸಮಾಲೋಚನೆ ಮಾಡುವುದು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಹೊಂದಿರುವವರ ಮಾರ್ಗ. ಆದರೆ ಹಿಟ್ಲರ್, ಮುಸ್ಸೋಲಿನಿ, ಹೆಡಗೆವಾರ್, ಗೋಳ್ವಾಲ್ಕರ್, ಸಾವರ್ಕರ್ ಸಿದ್ಧಾಂತದಲ್ಲಿ ನಂಬಿಕೆ ಹೊಂದಿದವರಿಗೆ ಸಂವಾದ ಮಾಡುವಷ್ಟು ಸಹನೆಯಾಗಲಿ, ಅಧ್ಯಯನವಾಗಲಿ, ಬೌದ್ಧಿಕ ಸಿದ್ಧತೆಯಾಗಲಿ ಇರುವುದಿಲ್ಲ. ಹೀಗಾಗಿ ಅವರು ಗೂಂಡಾಗಿರಿಗೆ ಇಳಿಯುತ್ತಾರೆ. ನರ್ಮದಾ ಹೋರಾಟದ ನಾಯಕಿ ಮೇಧಾ ಪಾಟ್ಕರ್ ಹಿಂದೆ ಗುಜರಾತ್ ಮತ್ತು ಛತ್ತೀಸ್‌ಗಡಗಳಿಗೆ ಹೋದಾಗ ಇದೇ ರೀತಿ ದೈಹಿಕ ಹಲ್ಲೆ ಮಾಡಲಾಗಿತ್ತು. ಹೆಣ್ಣುಮಗಳೆಂಬ ಗೌರವವಿಲ್ಲದೆ ನಡು ರಸ್ತೆಯಲ್ಲಿ ಎಳೆದಾಡಿದ್ದರು. ಸುಪ್ರೀಂ ಕೋರ್ಟಿನ ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಅವರ ಮೇಲೆ ನ್ಯಾಯಾಲಯದ ಆವರಣದಲ್ಲೇ ಹಲ್ಲೆ ಮಾಡಿ ಮುಖಕ್ಕೆ ಮಸಿ ಬಳಿದಿದ್ದರು. ಹಿರಿಯ ಚಿಂತಕ ಯೋಗೇಂದ್ರ ಯಾದವ್‌ರ ಮೇಲೆ ಹಲ್ಲೆ ಮಾಡಿ ಥಳಿಸಿದ್ದರು. ಸ್ವಾಮಿ ಅಗ್ನಿವೇಶ್‌ಅವರಂತಹ ಸಾತ್ವಿಕ ಸನ್ಯಾಸಿಯ ಮೇಲೆ ರಸ್ತೆಯ ಮಧ್ಯದಲ್ಲೇ ಹಲ್ಲೆ ಮಾಡಿ ನೆಲಕ್ಕೆ ಹಾಕಿ ಉರುಳಾಡಿಸಿ ಹೊಡೆದಿದ್ದರು. ಇನ್ನು ಇವರ ಎಬಿವಿಪಿ ಎಂಬ ವಿದ್ಯಾರ್ಥಿ ಸಂಘಟನೆ ಪಾಠ ಮಾಡುವ ಗುರುಗಳ ಮೇಲೆ ಹಲ್ಲೆ ಮಾಡುವಲ್ಲಿ ಕುಖ್ಯಾತಿ ಗಳಿಸಿದೆ. ಇಂತಹವರ ಹಾವಳಿ ಈವರೆಗೆ ಕರ್ನಾಟಕದಲ್ಲಿ ಇರಲಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಇವೆಲ್ಲ ಸಾಮಾನ್ಯ ಎಂಬಂತಾಗಿದೆ.

ಆಪರೇಶನ್ ಕಮಲದ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿಯವರು ನಲವತ್ತು ಪರ್ಸೆಂಟ್ ಕಮಿಶನ್ ಹಗರಣ, ಪೊಲೀಸ್ ನೇಮಕಾತಿ ಭ್ರಷ್ಟಾಚಾರ, ಮುಂತಾದವುಗಳನ್ನು ಮುಚ್ಚಿಕೊಳ್ಳಲು ಜನರ ಗಮನವನ್ನು ಬೇರೆಡೆ ಸೆಳೆಯಲು ಹಿಜಾಬ್, ಮೈಕ್, ವ್ಯಾಪಾರ ಬಹಿಷ್ಕಾರದಂಥ ಕಸರತ್ತು ನಡೆಸಿದರು. ಪಠ್ಯಪುಸ್ತಕ ಬದಲಿಸಿ ಅವುಗಳಲ್ಲಿ ಕೋಮು ವಿಷ ತುಂಬಲು ಯತ್ನಿಸಿ ಅಪಹಾಸ್ಯಕ್ಕೀಡಾದರು. ಈಗ ಅವರ ಬೆಂಬಲಿತ ಸಂಘಟನೆ ರೈತ ನಾಯಕರ ಮೇಲೆ ಹಲ್ಲೆ ಮಾಡಿಸಿ ತಮ್ಮ ಕರಾಳ ಸ್ವರೂಪವನ್ನು ತೋರಿಸಿದೆ.

ಭಿನ್ನಾಭಿಪ್ರಾಯ ಮತ್ತು ಭಿನ್ನಮತ ಪ್ರಜಾಪ್ರಭುತ್ವದ ಸಹಜ ತತ್ವ. ಅವುಗಳನ್ನು ನಾವು ಗೌರವಿಸಬೇಕು. ಟೀಕೆ ವಿಮರ್ಶೆಗಳಿಂದಲೇ ಜನತಂತ್ರ ಉಸಿರಾಡುತ್ತದೆ. ಆ ಉಸಿರಾಟವನ್ನು ಬಲವಂತವಾಗಿ ನಿಲ್ಲಿಸಲು ಯತ್ನಿಸಿದರೆ ಪ್ರಜಾಪ್ರಭುತ್ವ ಕೊನೆಯುಸಿರೆಳೆಯುತ್ತದೆ. ಆಗ ಸರ್ವಾಧಿಕಾರ ಉದಯವಾಗುತ್ತದೆ. ಒಮ್ಮೆ ಸರ್ವಾಧಿಕಾರಿ ವ್ಯವಸ್ಥೆ ಕಾಲಿಟ್ಟರೆ ಆ ದೇಶ ನಾಶವಾಗಿ ಹೋಗುತ್ತದೆ. ಭಾರತ ಇಂದು ಅಪಾಯದ ಅಂಚಿನಲ್ಲಿದೆ. ಜನತೆ ಎಚ್ಚೆತ್ತು ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಬೇಕಾಗಿದೆ.

ಬೆಂಗಳೂರಿನಲ್ಲಿ ರೈತ ನಾಯಕರಾದ ರಾಕೇಶ್ ಟಿಕಾಯತ್, ಚುಕ್ಕಿ ನಂಜುಂಡಸ್ವಾಮಿ, ಅನಸೂಯಮ್ಮ ಅವರ ಮೇಲೆ ನಡೆದ ಹಲ್ಲೆಯನ್ನು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವ ಎಲ್ಲರೂ ಖಂಡಿಸಬೇಕಾಗಿದೆ. ವಿವಿಧ ರೈತ ಸಂಘಟನೆಗಳು, ದಲಿತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ವಿದ್ಯಾರ್ಥಿ ಸಂಘಟನೆಗಳು,ಮಹಿಳಾ ಸಂಘಟನೆಗಳು ಸೇರಿದಂತೆ ಎಲ್ಲ ಸಮಾನ ಮನಸ್ಕ ಸಂಘಟನೆಗಳು ಒಂದಾಗಿ ಈ ಹಲ್ಲೆಯನ್ನು ಖಂಡಿಸಬೇಕಾಗಿದೆ. ಮುಂದೆ ಇಂತಹ ಘಟನೆಗಳು ನಡೆಯದಂತೆ ಎದುರಿಸಲು ಸ್ವಯಂ ರಕ್ಷಣಾ ಪಡೆಗಳನ್ನು ಕಟ್ಟಿಕೊಳ್ಳಬೇಕಾಗಿದೆ. ಬಸವರಾಜ ಬೊಮ್ಮಾಯಿ ಸರಕಾರ ತಕ್ಷಣ ಹಲ್ಲೆಕೋರರ ಮೇಲೆ ಕ್ರಮ ಕೈಗೊಳ್ಳಲಿ. ಅಷ್ಟೇ ಅಲ್ಲ ಹಿಂದೆ ಕುಳಿತು ಪ್ರಚೋದಿಸಿದವರನ್ನು ಬಂಧಿಸಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News