ದಿಲ್ಲಿ ಸಚಿವ ಸತ್ಯೇಂದ್ರ ಜೈನ್ ಇಡಿ ಕಸ್ಟಡಿಗೆ: "ರಾಜಕೀಯ ಪ್ರೇರಿತ ಬಂಧನ" ಎಂದ ಕೇಜ್ರಿವಾಲ್
ಹೊಸದಿಲ್ಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿರುವ ದಿಲ್ಲಿ ಸರ್ಕಾರದ ಸಚಿವ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಸತ್ಯೇಂದ್ರ ಜೈನ್ ಅವರನ್ನು ಜೂನ್ 9 ರವರೆಗೆ ಇಡಿ ಕಸ್ಟಡಿಗೆ ಕಳುಹಿಸಲಾಗಿದೆ. ಸುಮಾರು ಆರು ಗಂಟೆಗಳ ಕಾಲ ನಡೆದ ವಿಚಾರಣೆಯ ನಂತರ ಇಡಿ ಸೋಮವಾರ ಸತ್ಯೇಂದ್ರ ಜೈನ್ ಅವರನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ಅಡಿಯಲ್ಲಿ ಬಂಧಿಸಿದೆ.
ಜೈನ್ ವಿರುದ್ಧ ನಡೆಯುತ್ತಿರುವ ಅಕ್ರಮ ಹಣ ವರ್ಗಾವಣೆ ತನಿಖೆಯಲ್ಲಿ ಜೈನ್ ಅವರು ಕೇಂದ್ರ ತನಿಖಾ ಸಂಸ್ಥೆಯೊಂದಿಗೆ ಸಹಕರಿಸುತ್ತಿಲ್ಲ ಎಂದು ಇಡಿ ಆರೋಪಿಸಿದೆ ಎಂದು ಮೂಲಗಳು ತಿಳಿಸಿವೆ.
ಈ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್, ಜೈನ್ ವಿರುದ್ಧದ ಇಡಿ ಪ್ರಕರಣವು ಸಂಪೂರ್ಣವಾಗಿ ನಕಲಿ ಮತ್ತು ರಾಜಕೀಯ ಪ್ರೇರಿತ ಆರೋಪವಾಗಿದೆ ಎಂದು ಹೇಳಿದ್ದಾರೆ. ತಮ್ಮ ಸರ್ಕಾರ ಮತ್ತು ಆಮ್ ಆದ್ಮಿ ಪಕ್ಷ ಅತ್ಯಂತ ಪ್ರಾಮಾಣಿಕವಾಗಿದೆ, ಭ್ರಷ್ಟಾಚಾರವನ್ನು ಸಹಿಸುವುದಿಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ನಾನು ಜೈನ್ ಪ್ರಕರಣವನ್ನು ಪರಿಶೀಲಿಸಿದ್ದೇನೆ ಎಂದು ಹೇಳಿದ ಕೇಜ್ರೀವಾಲ್, ಇದು ಸಂಪೂರ್ಣವಾಗಿ ನಕಲಿ ಮತ್ತು ರಾಜಕೀಯ ಪ್ರೇರಿತವಾಗಿದೆ. ಅವರನ್ನು ಉದ್ದೇಶಪೂರ್ವಕವಾಗಿ ಸಿಲುಕಿಸಲಾಗಿದೆ. ನ್ಯಾಯಾಂಗದ ಮೇಲೆ ನಮಗೆ ನಂಬಿಕೆ ಇದೆ. ಜೈನ್ ಅವರು ಸತ್ಯದ ಮಾರ್ಗದಲ್ಲಿ ನಡೆಯುತ್ತಿದ್ದಾರೆ ಮತ್ತು ಶುದ್ಧರಾಗುತ್ತಾರೆ ಎಂದು ಅವರು ಹೇಳಿದ್ದಾರೆ. ಜನವರಿಯಲ್ಲಿಯೇ, ಪಂಜಾಬ್ ವಿಧಾನಸಭೆ ಚುನಾವಣೆಗೆ ಮುನ್ನ, ಸತ್ಯೇಂದ್ರ ಜೈನ್ ಅವರನ್ನು ಇಡಿ ಬಂಧಿಸಬಹುದು ಎಂದು ಮೂಲಗಳಿಂದ ತಿಳಿದು ಬಂದಿತ್ತು ಎಂದು ಕೇಜ್ರಿವಾಲ್ ಹೇಳಿದ್ದರು.