ಭ್ರಷ್ಟಾಚಾರ ಪ್ರಕರಣ ಬಹಿರಂಗಪಡಿಸಿದ್ದಕ್ಕೆ ಗುಂಡೇಟಿಗೊಳಗಾಗಿದ್ದ ಅಧಿಕಾರಿ ಈ ಬಾರಿ ಐಎಎಸ್ ಪರೀಕ್ಷೆಯಲ್ಲಿ ತೇರ್ಗಡೆ

Update: 2022-06-01 14:40 GMT

ಲಕ್ನೋ: ಭ್ರಷ್ಟಾಚಾರ ಪ್ರಕರಣವೊಂದನ್ನು ಬಹಿರಂಗಪಡಿಸಿದ್ದಕ್ಕಾಗಿ ಗುಂಡೇಟಿಗೊಳಗಾಗಿದ್ದ ಅಧಿಕಾರಿಯೊಬ್ಬರು 2021ರ ಸಿವಿಲ್ ಸರ್ವಿಸಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ರಿಂಕೂ ಸಿಂಗ್ ರಾಹಿ ಎಂಬ ಈ ಅಧಿಕಾರಿ ಈ ಬಾರಿ 683ನೇ ರ್ಯಾಂಕ್ ಪಡೆದು ತೇರ್ಗಡೆಯಾಗಿದ್ದಾರೆ. ಇದು ಅವರ ಕೊನೆಯ ಪ್ರಯತ್ನವಾಗಿದ್ದರಿಂದ ಅದರಲ್ಲಿ ಸಫಲತೆ ಕಂಡು ಅವರು ಬಹಳ ಸಂತೋಷ ವ್ಯಕ್ತಪಡಿಸಿದ್ದಾಗಿ ndtv.com ವರದಿ ತಿಳಿಸಿದೆ.

ಉತ್ತರ ಪ್ರದೇಶದ ಹಾಪುರ್ ಎಂಬಲ್ಲಿನ ಪ್ರಾವಿನ್ಶಿಯಲ್ ಸಿವಿಲ್ ಸರ್ವಿಸ್ ಅಧಿಕಾರಿಯಾಗಿರುವ ರಿಂಕೂ ಅವರು 2008ರಲ್ಲಿ ಮುಝಫ್ಫರನಗರದಲ್ಲಿ ರೂ. 83 ಕೋಟಿ ಸ್ಕಾಲರ್‍ಶಿಪ್ ಹಗರಣವನ್ನು ಬಹಿರಂಗಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆಗ ಅವರು  ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯಾಗಿದ್ದರು. ಈ ಪ್ರಕರಣದಲ್ಲಿ ಎಂಟು ಮಂದಿಯ ವಿರುದ್ಧ ದೋಷಾರೋಪ ಹೊರಿಸಲಾಗಿತ್ತು ಹಾಗೂ ಅವರಲ್ಲಿ ನಾಲ್ಕು ಮಂದಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ಆದರೆ ಹಗರಣ ಬೆಳಕಿಗೆ ಬರುತ್ತಿದ್ದಂತೆಯೇ ರಿಂಕೂ ಅವರ ಮೇಲೆ ದಾಳಿ ನಡೆದು ಅವರ ಮೇಲೆ ಎಂಡು ಬಾರಿ ಗುಂಡು ಹಾರಿಸಲಾಗಿತ್ತು. ಅವರ ಮುಖಕ್ಕೂ ಗುಂಡೇಟು ತಗಲಿದ್ದರಿಂದ ಅವರ ಮುಖ ವಿಕಾರಗೊಂಡಿತ್ತಲ್ಲದೆ ಅವರು ದೃಷ್ಟಿ ಮತ್ತು ಶ್ರವಣ ದೋಷ ಕೂಡ ಎದುರಿಸಿದ್ದರು. ದಾಳಿಯಿಂದ ಒಂದು  ಕಣ್ಣಿನ ದೃಷ್ಟಿ ಹೋಗಿದೆ ಎಂದು ಅವರು ಹೇಳುತ್ತಾರೆ.

ರಾಜ್ಯ ಸರಕಾರದ ಐಎಎಸ್ ಕೋಚಿಂಗ್ ಸೆಂಟರಿನ ನಿರ್ದೇಶಕರಾಗಿ ಈಗಾಗಲೇ ಅವರು ಹಲವಾರು ಐಎಎಸ್ ಆಕಾಂಕ್ಷಿಗಳಿಗೆ ತರಬೇತಿ ನೀಡಿದ್ದಾರೆ. ತಮ್ಮ ವಿದ್ಯಾರ್ಥಿಗಳ ಪ್ರೋತ್ಸಾಹದಿಂದ ಪರೀಕ್ಷೆಗೆ ಹಾಜರಾಗಿದ್ದಾಗಿ ಅವರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News