ಫೇಸ್ ಬುಕ್, ಇನ್‌ಸ್ಟಾಗ್ರಾಮ್‌ ನಲ್ಲಿ ಹಿಂಸಾತ್ಮಕ, ಪ್ರಚೋದನಕಾರಿ ಪೋಸ್ಟ್ ಗಳ ಏರಿಕೆ: ಮೆಟಾ ವರದಿ

Update: 2022-06-02 15:15 GMT

ಹೊಸದಿಲ್ಲಿ,ಜೂ.2: ಮೇಟಾ ಬಿಡುಗಡೆಗೊಳಿಸಿರುವ ಮಾಸಿಕ ವರದಿಯಂತೆ ಎಪ್ರಿಲ್‌ನಲ್ಲಿ ಫೇಸ್‌ಬುಕ್‌ನಲ್ಲಿ ದ್ವೇಷಭಾಷಣಗಳ ಪ್ರಮಾಣ ಶೇ.38ರಷ್ಟು ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ಹಿಂಸಾತ್ಮಕ ಮತ್ತು ಪ್ರಚೋದನಾತ್ಮಕ ವಿಷಯಗಳು ಶೇ.86ರಷ್ಟು ಏರಿಕೆಯನ್ನು ಕಂಡಿವೆ.ವರದಿಯಲ್ಲಿನ ಹೆಚ್ಚಿನ ಅಂಶಗಳನ್ನು ಬಳಕೆದಾರರು ಅವುಗಳನ್ನು ವರದಿ ಮಾಡುವ ಮುನ್ನವೇ ಈ ಸಾಮಾಜಿಕ ಮಾಧ್ಯಮ ವೇದಿಕೆಗಳು ಪತ್ತೆ ಹಚ್ಚಿವೆ ಎಂದು ವರದಿಯು ತಿಳಿಸಿದೆ.

ಮೇ 31ರಂದು ಬಿಡುಗಡೆಗೊಂಡಿರುವ ವರದಿಯಂತೆ ಫೇಸ್‌ಬುಕ್ ಎಪ್ರಿಲ್‌ನಲ್ಲಿ 53,200 ದ್ವೇಷ ಭಾಷಣಗಳನ್ನು ಪತ್ತೆ ಹಚ್ಚಿದ್ದು, ಮಾರ್ಚ್‌ನಲ್ಲಿ ಪತ್ತೆಯಾಗಿದ್ದ 38,600ಕ್ಕೆ ಹೋಲಿಸಿದರೆ ಶೇ.37.82ರಷ್ಟು ಏರಿಕೆಯಾಗಿದೆ. ಈ ದ್ವೇಷ ಭಾಷಣಗಳ ವಿರುದ್ಧ ಫೇಸ್‌ಬುಕ್  ಕ್ರಮವನ್ನು ಕೈಗೊಂಡಿದೆ.ಇನ್‌ಸ್ಟಾಗ್ರಾಮ್‌ನಲ್ಲಿ ಮಾರ್ಚ್‌ನಲ್ಲಿ ಹಿಂಸಾಚಾರ ಮತ್ತು ಪ್ರಚೋದನೆ ಸಂಬಂಧಿತ 41,300 ವಿಷಯಗಳು ಪತ್ತೆಯಾಗಿದ್ದರೆ ಎಪ್ರಿಲ್‌ನಲ್ಲಿ ಅವುಗಳ ಸಂಖ್ಯೆ 77,000 ಆಗಿದೆ ಮತ್ತು ಇವುಗಳ ವಿರುದ್ಧ ವೇದಿಕೆಯು ಕ್ರಮವನ್ನು ತೆಗೆದುಕೊಂಡಿದೆ ಎಂದು ವರದಿಯು ತಿಳಿಸಿದೆ.

‘ನಮ್ಮ ಮಾನದಂಡಗಳಿಗೆ ವಿರುದ್ಧವಾಗಿರುವ ಪೋಸ್ಟ್‌ಗಳು, ಫೋಟೊಗಳು,ವೀಡಿಯೊಗಳು ಅಥವಾ ಹೇಳಿಕೆಗಳಂತಹ ವಿಷಯಗಳ ವಿರುದ್ಧ ನಾವು ಕ್ರಮವನ್ನು ತೆಗೆದುಕೊಳ್ಳುತ್ತೇವೆ. ಈ ಸಂಖ್ಯೆಗಳು ನಮ್ಮ ಜಾರಿ ಚಟುವಟಿಕೆಯ ಪ್ರಮಾಣವನ್ನು ತೋರಿಸುತ್ತವೆ. ಫೇಸ್‌ಬುಕ್ ಅಥವಾ ಇನ್‌ಸ್ಟಾಗ್ರಾಮ್‌ನಿಂದ ವಿಷಯವನ್ನು ತೆಗೆದುಹಾಕುವುದು, ಕೆಲವು ವೀಕ್ಷಕರಿಗೆ ತೊಂದರೆಯನ್ನುಂಟು ಮಾಡಬಹುದಾದ ಫೋಟೊಗಳು ಅಥವಾ ವೀಡಿಯೊಗಳನ್ನು ಎಚ್ಚರಿಕೆಯೊಂದಿಗೆ ಮಸುಕು ಮಾಡುವುದು ನಾವು ಕೈಗೊಳ್ಳುವ ಕ್ರಮಗಳಲ್ಲಿ ಸೇರಿವೆ ’ಎಂದು ಅದು ವಿವರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News