ತನ್ನನ್ನೇ ವಿವಾಹವಾಗಲಿರುವ ಗುಜರಾತ್‌ನ ಈ ಯುವತಿ !

Update: 2022-06-02 14:33 GMT

ಅಹ್ಮದಾಬಾದ್: ಗುಜರಾತ್‌ನ ವಡೋದರಾ ನಿವಾಸಿ, 24 ವರ್ಷದ ಕ್ಷಮಾ ಬಿಂದು ಜೂನ್‌ 11ರಂದು ಸಪ್ತಪದಿ ತುಳಿಯಲಿದ್ದಾರೆ. ಇದಕ್ಕಾಗಿ ಎಲ್ಲಾ ತಯಾರಿಗಳೂ ನಡೆಯುತ್ತಿವೆ. ಇದರಲ್ಲೇನು ವಿಷೇಷ ಅಂತೀರಾ? ಈ ವಿವಾಹ ಸಮಾರಂಭದಲ್ಲಿ ವರನೇ ಇಲ್ಲ. ಏಕೆಂದರೆ ಕ್ಷಮಾ ತಮ್ಮನ್ನು ತಾವೇ ವಿವಾಹವಾಗಲಿದ್ದಾರೆ.

ದೇಶದಲ್ಲಿಯೇ ಇದು ಇಂತಹ ಮೊದಲ ವಿವಾಹವೆಂದೇ ತಿಳಿಯಲಾಗಿದೆ. ಇದು ಸ್ವಯಂ-ಪ್ರೇಮದಿಂದ ಕೈಗೊಂಡ ನಿರ್ಧಾರ ಎಂದು ಬಿಂದು ಹೇಳುತ್ತಾರೆ. ʻʻನಾನು ಯಾವತ್ತೂ ವಿವಾಹವಾಗಲು ಬಯಸಿರಲಿಲ್ಲ. ಆದರೆ ವಧುವಾಗಿ ಸಿಂಗರಿಸಬೇಕೆಂದು ಬಯಸಿದ್ದೆ. ಅದಕ್ಕಾಗಿ ನನ್ನನ್ನು ನಾನೇ ವಿವಾಹವಾಗಲು ನಿರ್ಧರಿಸಿದೆ,ʼʼ ಎಂದು ಅವರು ಹೇಳುತ್ತಾರೆ.

ʻʻಇದು ಸ್ವಯಂ ಸ್ವೀಕಾರ ಕೃತ್ಯ ಎಂದು ಬಣ್ಣಿಸುವ ಕ್ಷಮಾ, ನನಗಾಗಿ ನಾನಿದ್ದೇನೆ ಹಾಗೂ ನಾನು ನನ್ನನ್ನು ಬಹಳ ಪ್ರೀತಿಸುತ್ತೇನೆ ಎಂಬುದನ್ನು ತೋರ್ಪಡಿಸಲು ಈ ವಿವಾಹ. ಜನರು ತಾವು ಪ್ರೀತಿಸುವವರನ್ನು ವಿವಾಹವಾಗುತ್ತಾರೆ, ನಾನು ನನ್ನನ್ನೇ ಪ್ರೀತಿಸುತ್ತೇನೆ,ʼʼಎನ್ನುತ್ತಾರೆ ಈ ಯುವತಿ.

ಖಾಸಗಿ ಸಂಸ್ಥೆಯ ಉದ್ಯೋಗಿಯಾಗಿರುವ ಕ್ಷಮಾ ತಮ್ಮ ಹೆತ್ತವರು ತಮ್ಮ ಈ ನಿರ್ಧಾರವನ್ನು ಬೆಂಬಲಿಸಿದ್ದಾರೆ ಎಂದು ಹೇಳುತ್ತಾರೆ. ವಿವಾಹದ ನಂತರ ಕ್ಷಮಾ ಅವರು ಗೋವಾಗೆ ಎರಡು ವಾರಗಳ ಕಾಲ ʼತಮ್ಮೊಂದಿಗೆʼ ಹನಿಮೂನ್‌ಗೂ ತೆರಳಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News