×
Ad

ಉಪ್ಪಿನಂಗಡಿ: ಪತ್ರಕರ್ತರಿಗೆ ವಿದ್ಯಾರ್ಥಿಗಳಿಂದ ದಿಗ್ಭಂಧನ, ಮೊಬೈಲ್ ಕಸಿದು ವಿಡಿಯೋ ಡಿಲೀಟ್; ಆರೋಪ

Update: 2022-06-02 20:42 IST

ಉಪ್ಪಿನಂಗಡಿ: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭುಗಿಲೆದ್ದಿರುವ ಹಿಜಾಬ್ ವಿವಾದದ ಕುರಿತಾಗಿ ನಡೆಯುತ್ತಿರುವ ಘಟನಾವಳಿಗಳ ಬಗ್ಗೆ ಕಾಲೇಜಿನ ಪ್ರಾಂಶುಪಾಲರಲ್ಲಿ ಮಾಹಿತಿ ಪಡೆದುಕೊಳ್ಳಲು ಕಾಲೇಜಿಗೆ ತೆರಳಿದ್ದ ಪತ್ರಕರ್ತರ ಮೇಲೆ ಸುಮಾರು 25 ಮಂದಿಯಷ್ಟಿದ್ದ ವಿದ್ಯಾರ್ಥಿಗಳ ಗುಂಪೊಂದು ದಿಗ್ಭಂಧನ ವಿಧಿಸಿ, ಅವರ ಮೊಬೈಲ್ ಕಸಿದುಕೊಂಡು ಅದರಲ್ಲಿದ್ದ ವೀಡಿಯೊ ಡಿಲೀಟ್ ಮಾಡಿದ್ದಾರೆನ್ನಲಾದ ಘಟನೆ ಗುರುವಾರ ನಡೆದಿದೆ.

ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್ ಧರಿಸಿದ ಆರು ವಿದ್ಯಾರ್ಥಿನಿಯರಿಗೆ ತರಗತಿ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಅಲ್ಲದೇ, ಗುರುವಾರ ಕೆಲ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿಗೆ ಆಗಮಿಸಿದ್ದರು. ಈ ಬಗ್ಗೆ ಸ್ಪಷ್ಟನೆ ಕೇಳಲು ಪತ್ರಕರ್ತರಾದ ಅಜಿತ್ ಕುಮಾರ್ ಕೆ. ಹಾಗೂ ಪ್ರವೀಣ್ ಕುಮಾರ್ ಪ್ರಾಂಶುಪಾಲರ ಕೊಠಡಿಗೆ ತೆರಳಿದ್ದರು. ಅಲ್ಲಿಂದ ಪ್ರಾಂಶುಪಾಲರಲ್ಲಿ ಮಾಹಿತಿ ಕೇಳಿ ಹೊರ ಬಂದಾಗ ಈ ಘಟನೆ ನಡೆದಿದೆ.

ಈ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿರುವ ಪತ್ರಕರ್ತ ಅಜಿತ್ ಕುಮಾರ್, ಕಾಲೇಜಿನಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಅಧಿಕೃತ ಮಾಹಿತಿ ಕೇಳಲು ನಾನು ಹಾಗೂ ಸಹೋದ್ಯೋಗಿ ಪ್ರವೀಣ್ ಕುಮಾರ್ ಪ್ರಾಂಶುಪಾಲರ ಕಚೇರಿಗೆ ಪೂರ್ವಾಹ್ನ 11:40ರ ಸುಮಾರಿಗೆ ತೆರಳಿದ್ದೆವು. ಘಟನಾವಳಿಗೆ ಸಂಬಂಧಿಸಿ ಪ್ರಾಂಶುಪಾಲರ ಹೇಳಿಕೆಯನ್ನು ದಾಖಲಿಸಿಕೊಂಡು ಕಾಲೇಜಿನಿಂದ ನಿರ್ಗಮಿಸುವ ಸಂದರ್ಭದಲ್ಲಿ ಕಾಲೇಜು ವರಾಂಡದಲ್ಲಿದ್ದ ಸುಮಾರು 25ಕ್ಕೂ ಅಧಿಕ ಮಂದಿಯ ವಿದ್ಯಾರ್ಥಿಗಳ ಗುಂಪೊಂದು ನಮ್ಮನ್ನು ಸುತ್ತುವರೆದು ನಿಮಗೆ ಕಾಲೇಜು ಕ್ಯಾಂಪಸ್‌ನೊಳಗೆ ಬರಲು ಅನುಮತಿ ನೀಡಿದವರು ಯಾರು? ಎಂದು ಪ್ರಶ್ನಿಸಿ ದೈಹಿಕವಾಗಿ ತಳ್ಳಾಟ ನಡೆಸಿದರು. ಸತ್ಯಾಸತ್ಯತೆಯ ವರದಿ ಮಾಡುವ ಸಲುವಾಗಿ ಕಾಲೇಜಿನ ಪ್ರಾಂಶುಪಾಲರನ್ನು ಭೇಟಿ ಮಾಡುವುದು ನಮ್ಮ ಸಾಂವಿಧಾನಿಕ ಹಕ್ಕು ಎಂದು ತಿಳಿಸಿದರೂ, ನಮ್ಮ ಮೇಲೆ ಹಲ್ಲೆ ನಡೆಸುತ್ತಾ, ನನ್ನನ್ನು ಕಾಲೇಜು ಕ್ಯಾಂಪಸ್‌ನಿಂದ ಹೊರಗೆ ಹೋಗಲು ಬಿಡದೇ ನನಗೆ ಅಕ್ರಮವಾಗಿ ದಿಗ್ಭಂಧನವನ್ನೂ ವಿಧಿಸಿದ್ದಾರೆ. ಬಳಿಕ ನನ್ನನ್ನು ಕಾಲೇಜಿನ ಕೋಣೆಯೊಂದರಲ್ಲಿ ಕೂಡಿ ಹಾಕಿ, ನನ್ನ ಕ್ಯಾಮರಾವನ್ನು ಬಲವಂತವಾಗಿ ಕಿತ್ತುಕೊಂಡು ಅದರಲ್ಲಿದ್ದ ಪ್ರಾಂಶುಪಾಲರ ಹೇಳಿಕೆ ಸಹಿತ ಹಲವು ನನ್ನ ವಾಣಿಜ್ಯ ನೆಲೆಯ ದೃಶ್ಯಾವಳಿಗಳನ್ನು ಡಿಲೀಟ್ ಮಾಡಿದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಕಾಲೇಜಿನಲ್ಲಿ ವಸ್ತ್ರ ಸಂಹಿತೆಯ ನಿಯಮಗಳನ್ನು ಮಾಡಲಾಗಿದೆ. ಆದರೆ ಅದನ್ನು ಉಲ್ಲಂಘಿಸಿದವರಿಗೆ ಹಲವು ಬಾರಿ ನೊಟೀಸ್ ನೀಡಲಾಗಿತ್ತು. ಆದರೂ ಇದು ಪುನಾರವರ್ತನೆಯಾದಾಗ ಆರು ಮಂದಿಯ ಮೇಲೆ ಆರು ದಿನಗಳ ಕಾಲ ತರಗತಿ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಮೂವರು ವಿದ್ಯಾರ್ಥಿಗಳ ಪೋಷಕರು ಈಗಾಗಲೇ ಕಾಲೇಜಿಗೆ ಬಂದು ಮಾತನಾಡಿದ್ದು, ಕಾಲೇಜಿನ ನಿಯಮಾವಳಿಗಳನ್ನು ನಮ್ಮ ಮಕ್ಕಳು ಉಲ್ಲಂಘಿಸದಂತೆ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಇನ್ನೊಂದೆಡೆ ಇಷ್ಟೆಲ್ಲಾ ಆಗಿಯೂ ಕೆಲ ವಿದ್ಯಾರ್ಥಿಗಳು ತಲೆಗೆ ಡಬಲ್ ಶಾಲು ಅನ್ನು ಹಿಜಾಬ್ ನಂತೆ ಸುತ್ತಿಕೊಂಡು ಬರುತ್ತಿದ್ದರು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಕೇಸರಿ ಶಾಲುಗಳನ್ನು ಹಾಕಿಕೊಂಡು ಬಂದು ಪ್ರತಿಭಟಿಸಿದ್ದಾರೆ. ಕೇಸರಿ ಶಾಲು ಹಾಕಿದವರನ್ನು ಮತ್ತು ಹಿಜಾಬ್ ಧರಿಸಿದವವರನ್ನು ತರಗತಿಯ ಒಳಗೆ ಪ್ರವೇಶಿಸಲು ಅನುಮತಿ ನೀಡಿಲ್ಲ.

- ಶೇಖರ ಎಂ.ಬಿ.  ಪ್ರಾಚಾರ್ಯರು, ಸರಕಾರಿ ಪ್ರಥಮ ದರ್ಜೆ ಕಾಲೇಜು ಉಪ್ಪಿನಂಗಡಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News