ಅತ್ಯಾಚಾರವು ʼಲಿಂಗ-ತಟಸ್ಥʼ ಅಪರಾಧವಾಗಬೇಕು:‌ ಕೇರಳ ಹೈಕೋರ್ಟ್

Update: 2022-06-02 18:46 GMT

ಹೊಸದಿಲ್ಲಿ,ಜೂ.2: ಮದುವೆಯಾಗುವ ಸುಳ್ಳು ಭರವಸೆಯಿಂದ ಉದ್ಭವಿಸುವ ಅತ್ಯಾಚಾರದ ಅಪರಾಧವು ‘ಲಿಂಗ-ತಟಸ್ಥ’ ವಾಗಿರಬೇಕು ಎಂಬ ಮೌಖಿಕ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಕೇರಳ ಉಚ್ಚ ನ್ಯಾಯಾಲಯವು,ಇಂತಹ ಭರವಸೆಯೊಂದಿಗೆ ಪುರುಷನನ್ನು ವಂಚಿಸುವ ಮಹಿಳೆಯ ವಿರುದ್ಧ ಕಾನೂನು ಕ್ರಮವನ್ನು ಜರುಗಿಸುವಂತಿಲ್ಲ ಎನ್ನುವುದನ್ನು ಬೆಟ್ಟು ಮಾಡಿದೆ. ಮಗುವಿನ ಪಾಲನೆ ಹಕ್ಕಿಗಾಗಿ ವಿಚ್ಛೇದಿತ ದಂಪತಿಯ ನಡುವಿನ ವ್ಯಾಜ್ಯವನ್ನು ಇತ್ಯರ್ಥಗೊಳಿಸುವ ಸಂದರ್ಭ ನ್ಯಾ.ಮುಹಮ್ಮದ್ ಮುಸ್ತಾಕ್ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ವಿಚ್ಛೇದಿತ ಪತಿಯು ಒಮ್ಮೆ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿದ್ದ ಎಂದು ಮಹಿಳೆಯ ಪರ ವಕೀಲರು ವಿಚಾರಣೆ ಸಂದರ್ಭ ನ್ಯಾಯಾಲಯಕ್ಕೆ ತಿಳಿಸಿದಾಗ, ವಿವಾಹದ ಸುಳ್ಳು ಭರವಸೆಯಡಿ ಲೈಂಗಿಕ ಸಂಪರ್ಕದ ಆಧಾರರಹಿತ ಆರೋಪಗಳನ್ನು ಪ್ರಕರಣವು ಆಧರಿಸಿತ್ತು ಎಂದು ಪ್ರತಿವಾದಿ ಪರ ವಕೀಲರು ಉತ್ತರಿಸಿದರು. ಈ ಸಂದರ್ಭದಲ್ಲಿ ನ್ಯಾ.ಮುಸ್ತಾಕ್ ಅವರು ಐಪಿಸಿಯ ಕಲಂ 376 (ಅತ್ಯಾಚಾರಕ್ಕಾಗಿ ಶಿಕ್ಷೆ) ಲಿಂಗ-ತಟಸ್ಥವಾಗಿಲ್ಲ ಎಂಬ ತನ್ನ ಕಳವಳವನ್ನು ವ್ಯಕ್ತಪಡಿಸಿದರು.

‘ಮದುವೆಯಾಗುವ ಸುಳ್ಳು ಭರವಸೆಯಡಿ ಮಹಿಳೆಯು ಪುರುಷನನ್ನು ವಂಚಿಸಿದರೆ ಆಕೆಯ ವಿರುದ್ಧ ಕಾನೂನು ಕ್ರಮವನ್ನು ಜರುಗಿಸುವಂತಿಲ್ಲ. ಆದರೆ ಇದೇ ಅಪರಾಧಕ್ಕಾಗಿ ಪುರುಷನ ವಿರುದ್ಧ ಕಾನೂನು ಕ್ರಮವನ್ನು ಜರುಗಿಸಬಹುದು. ಇದು ಯಾವ ರೀತಿಯ ಕಾನೂನು? ಇದು ಲಿಂಗ-ತಟಸ್ಥವಾಗಿರಬೇಕು ’ಎಂದು ನ್ಯಾ.ಮುಸ್ತಾಕ್ ಹೇಳಿದರು.

ನ್ಯಾ.ಮುಸ್ತಾಕ್ ಈ ವರ್ಷದ ಆರಂಭದಲ್ಲಿ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ತೀರ್ಪೊಂದನ್ನು ನೀಡಿದ್ದ ಇನ್ನೊಂದು ಪೀಠದ ಭಾಗವಾಗಿದ್ದರು. ಅತ್ಯಾಚಾರ ಅಪರಾಧದ ಶಾಸನಬದ್ಧ ನಿಬಂಧನೆಗಳು ಲಿಂಗ-ತಟಸ್ಥವಾಗಿಲ್ಲ ಎನ್ನುವುದನ್ನು ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಬೆಟ್ಟು ಮಾಡಿತ್ತು.

‘ಐಪಿಸಿಯಲ್ಲಿ ಹೇಳಲಾಗಿರುವ ಅತ್ಯಾಚಾರ ಆರೋಪದ ಕುರಿತು ಶಾಸನಬದ್ಧ ನಿಬಂಧನೆಗಳು ಲಿಂಗ-ತಟಸ್ಥವಾಗಿಲ್ಲ ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು. ಮದುವೆಯಾಗುವ ಭರವಸೆಯನ್ನು ನೀಡಿ ಮತ್ತು ಅದರಡಿ ಪುರುಷನ ಒಪ್ಪಿಗೆಯೊಂದಿಗೆ ಮಹಿಳೆಯು ಆತನೊಂದಿಗೆ ಲೈಂಗಿಕ ಸಂಬಂಧವನ್ನು ಹೊಂದಿದ್ದರೆ ಅದನ್ನು ಅತ್ಯಾಚಾರ ಎಂದು ದಂಡಿಸಲಾಗುವುದಿಲ್ಲ. ಆದರೆ ಪುರುಷನು ಮಹಿಳೆಯನ್ನು ಮದುವೆಯಾಗುವುದಾಗಿ ಸುಳ್ಳು ಭರವಸೆಯನ್ನು ನೀಡಿ ಆಕೆಯೊಂದಿಗೆ ಲೈಂಗಿಕ ಸಂಪರ್ಕವನ್ನು ಹೊಂದಿರುವುದು ಪ್ರಾಸಿಕ್ಯೂಷನ್ನಿನ ಅತ್ಯಾಚಾರ ಪ್ರಕರಣಕ್ಕೆ ಕಾರಣವಾಗುತ್ತದೆ. 

ಮದುವೆಯ ಭರವಸೆಯ ಉಲ್ಲಂಘನೆಯಡಿ ಪುರುಷನೋರ್ವ ಮದುವೆಯಾಗುವುದಾಗಿ ನಂಬಿಸಿ ಮಹಿಳೆಯ ಸಮ್ಮತಿಯೊಂದಿಗೆ ಲೈಂಗಿಕ ಸಂಪರ್ಕವನ್ನು ಬೆಳೆಸಿ ಬಳಿಕ ತನ್ನ ಭರವಸೆಯಿಂದ ಹಿಂದೆ ಸರಿದರೆ ಆತನನ್ನು ಅತ್ಯಾಚಾರಕ್ಕಾಗಿ ಕಾನೂನು ಕ್ರಮಕ್ಕೆ ಒಳಪಡಿಸಬಹುದು. ಆದಾಗ್ಯೂ ಕೇವಲ ಭರವಸೆಯಿಂದ ಹಿಂದೆ ಸರಿಯುವುದು ಅತ್ಯಾಚಾರಕ್ಕೆ ಸಮನಾಗುವುದಿಲ್ಲ. ಪುರುಷನು ಎಂದಿಗೂ ಮಹಿಳೆಯನ್ನು ಮದುವೆಯಾಗುವ ಉದ್ದೇಶವನ್ನು ಹೊಂದಿರಲಿಲ್ಲ ಮತ್ತು ಲೈಂಗಿಕ ಸಂಪರ್ಕಕ್ಕೆ ಒಪ್ಪಿಸುವ ಮೂಲಕ ಆಕೆಯನ್ನು ವಂಚಿಸಿದ್ದಾನೆ ಎನ್ನುವುದನ್ನು ಪ್ರಾಸಿಕ್ಯೂಷನ್ ಸಾಬೀತು ಪಡಿಸಬೇಕಾಗುತ್ತದೆ ಎಂದು ತೀರ್ಪಿನಲ್ಲಿ ಹೇಳಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News