ದೇಶದಲ್ಲಿ ತಲೆ ಎತ್ತಲಿವೆ ಪಿಎಂ ಶ್ರೀ ಮಾದರಿ ಶಾಲೆಗಳು: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್
ಹೊಸದಿಲ್ಲಿ: ಪಿಎಂ ಶ್ರೀ ಶಾಲೆಗಳು ಹೆಸರಿನಲ್ಲಿ ಮಾದರಿ ಶಾಲೆಗಳನ್ನು ಸ್ಥಾಪಿಸುವ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಆರಂಭಿಸಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಬಹಿರಂಗಪಡಿಸಿದ್ದಾರೆ.
"ಪಿಎಂ ಶ್ರೀ ಶಾಲೆಗಳು ಹೊಸ ಶಿಕ್ಷಣ ನೀತಿ-2020ರ ಪ್ರಯೋಗ ಶಾಲೆಗಳಾಗಿರುತ್ತವೆ. ಭವಿಷ್ಯಕ್ಕೆ ವಿದ್ಯಾರ್ಥಿ ಗಳನ್ನು ಸರ್ವಸನ್ನದ್ಧಗೊಳಿಸಲು ಈ ಶಾಲೆಗಳು ಸುಸಜ್ಜಿತವಾಗಿರುತ್ತವೆ" ಎಂದು ಗಾಂಧಿನಗರದಲ್ಲಿ ನಡೆದ ರಾಷ್ಟ್ರೀಯ ಶಾಲಾ ಶಿಕ್ಷಣ ಸಚಿವರ ಸಮ್ಮೇಳನದಲ್ಲಿ ಹೇಳಿದರು.
ಭವಿಷ್ಯದ ಮಾನದಂಡವನ್ನು ಸೃಷ್ಟಿಸಬಲ್ಲ ಮಾದರಿಯ ಬಗ್ಗೆ ಅಭಿಪ್ರಾಯಗಳನ್ನು ನೀಡುವಂತೆ ಅವರು ಎಲ್ಲ ರಾಜ್ಯಗಳು ಹಾಗೂ ಶಿಕ್ಷಣ ವ್ಯವಸ್ಥೆಯನ್ನು ಕೋರಿದರು. ಗುಜರಾತ್ ಸಿಎಂ ಭೂಪೇಂದ್ರ ಪಟೇಲ್, ಗೋವಾ ಸಿಎಂ ಪ್ರಮೋದ್ ಸಾವಂತ್, ಕೇಂದ್ರ ಶಿಕ್ಷಣ ಮತ್ತು ಕೌಶಲ ಅಭಿವೃದ್ಧಿ ಖಾತೆ ರಾಜ್ಯ ಸಚಿವರು, ವಿವಿಧ ರಾಜ್ಯಗಳ ಶಿಕ್ಷಣ ಸಚಿವರು, ಹೊಸ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಅಭಿವೃದ್ಧಿಪಡಿಸುವ ಚಾಲನಾ ಸಮಿತಿಯ ಅಧ್ಯಕ್ಷ ಕೆ.ಕಸ್ತೂರಿರಂಗನ್ ಮತ್ತು ಹಿರಿಯ ಅಧಿಕಾರಿಗಳು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
ಜಾಗತಿಕ ಕಲ್ಯಾಣಕ್ಕೆ ಬದ್ಧವಾದ ಭಾರತವನ್ನು ಜ್ಞಾನ ಆರ್ಥಿಕತೆಯಾಗಿ ರೂಪಿಸುವಲ್ಲಿ ಮುಂದಿನ 25 ವರ್ಷ ಪ್ರಮುಖವಾದದ್ದು. ವಸುದೈವ ಕುಟುಂಬಕಮ್ ಎಂಬ ನಾಗರೀಕತೆಯಲ್ಲಿ ನಾವು ನಂಬಿಕೆ ಇರುವವರು. ನಮ್ಮ ದೇಶದ ಬಗ್ಗೆ ಮಾತ್ರ ನಮಗೆ ಹೊಣೆಗಾರಿಕೆ ಇರುವುದಲ್ಲ; ವಿಶ್ವದ ಬಗ್ಗೆಯೂ ಇದೆ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ಎನ್‍ಇಪಿಯ 5+3+3+4 ದೃಷ್ಟಿಕೋನವನ್ನು ಒತ್ತಿ ಹೇಳಿದ ಅವರು ಪ್ರಿಸ್ಕೂಲ್‍ನಿಂದ ಸೆಕೆಂಡರಿ, ಇಸಿಸಿಇಗೆ ಒತ್ತು, ಶಿಕ್ಷಕರ ತರಬೇತಿ ಹಾಗೂ ವಯಸ್ಕರ ಶಿಕ್ಷಣ, ಶಾಲಾ ಶಿಕ್ಷಣದಲ್ಲಿ ಕೌಶಲ ಅಭಿವೃದ್ಧಿ ಸಮನ್ವಯಗೊಳಿಸುವುದು ಮತ್ತು ಮಾತೃಭಾಷೆಯಲ್ಲಿ ಕಲಿಕೆಗೆ ಆದ್ಯತೆ ನೀಡುವುದು ಮುಂತಾದ ಕ್ರಮಗಳ ಮೂಲಕ 21ನೇ ಶತಮಾನದ ಜಾಗತಿಕ ನಾಗರಿಕರನ್ನು ಸೃಷ್ಟಿಸುವುದು ಗುರಿ ಎಂದು ಹೇಳಿದರು.