ಎಳೆ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಹೀಗೊಂದು ಆತ್ಮಾಹುತಿ ದಾಳಿ

Update: 2022-06-04 03:46 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಪಠ್ಯ ಪುಸ್ತಕ ಪರಿಷ್ಕರಣೆ ಎಂಬ ಹೆಸರಿನಲ್ಲಿ, ಶಾಲಾ ವಿದ್ಯಾರ್ಥಿಗಳ ಪಠ್ಯ ಪುಸ್ತಕಗಳ ಮೇಲೆ ನಡೆದಿರುವ ಆತ್ಮಹತ್ಯಾ ದಾಳಿ ಬೇರೆ ಬೇರೆ ತಿರುವುಗಳನ್ನು ಪಡೆಯುತ್ತಿದೆ. ರೋಹಿತ್ ಚಕ್ರತೀರ್ಥ ಎಂಬ ಸಂಘಪರಿವಾರದ ಎಳೆ ಟ್ರೋಲರ್‌ನ ಸೊಂಟಕ್ಕೆ ಪಠ್ಯ ಪರಿಷ್ಕರಣೆಯ ಬಾಂಬನ್ನು ಕಟ್ಟಿ ಶಿಕ್ಷಣ ಕ್ಷೇತ್ರದ ಮೇಲೆ ದಾಳಿ ನಡೆಸುವ ಆರೆಸ್ಸೆಸ್‌ನ ಪ್ರಯತ್ನ ಭಾಗಶಃ ವಿಫಲವಾಗಿದೆ. ಕರ್ನಾಟಕದ ಶಿಕ್ಷಣ ತಜ್ಞರು, ಜೀವಪರ ಲೇಖಕರು, ಸಾಮಾಜಿಕ ಕಾರ್ಯಕರ್ತರು ಈ ಆತ್ಮಹತ್ಯಾ ದಾಳಿಯನ್ನು ವಿಫಲಗೊಳಿಸಲು ಸರ್ವ ಪ್ರಯತ್ನ ನಡೆಸಿದ್ದಾರೆ. ಎಳೆ ಮಕ್ಕಳ ಮೇಲೆ ಆರೆಸ್ಸೆಸ್ ನಡೆಸುವುದಕ್ಕೆ ಉದ್ದೇಶಿರುವ ಪ್ರಯೋಗಗಳನ್ನು ವಿರೋಧಿಸಿ ನಾಡಿನ ಹಲವು ಲೇಖಕರು ತಮ್ಮ ಪಠ್ಯಗಳ ಅನುಮತಿಯನ್ನೇ ಹಿಂದಕ್ಕೆ ಪಡೆಯುತ್ತಿದ್ದಾರೆ. ಒಂದು ಕಾಲದಲ್ಲಿ ಒಬ್ಬ ಲೇಖಕನ ಪದ್ಯ ಅಥವಾ ಲೇಖನ ಪಠ್ಯ ಪುಸ್ತಕಗಳಲ್ಲಿ ಸೇರ್ಪಡೆಯಾಯಿತು ಎಂದರೆ ಅದು ಆತನಿಗೊಂದು ಹೆಮ್ಮೆಯ ವಿಷಯವಾಗಿರುತ್ತಿತ್ತು. ಆ ಮೂಲಕ ಆ ಲೇಖಕನ ಬರಹಕ್ಕೆ 'ಒಂದು ತಲೆಮಾರನ್ನು ರೂಪಿಸುವ ಶಕ್ತಿ ಹೊಂದಿದೆ' ಎನ್ನುವ ಪ್ರಮಾಣ ಪತ್ರ ದೊರಕಿದಂತಾಗುತ್ತಿತ್ತು. ಮತ್ತು ಅದನ್ನು ಸಾವಿರಾರು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಾರೆ ಎನ್ನುವುದು ಲೇಖಕನ ಪಾಲಿಗೆ ಸೌಭಾಗ್ಯದ ವಿಷಯವಾಗಿರುತ್ತಿತ್ತು. ಆದರೆ ಇಂದು ನಾಡಿನ ಲೇಖಕರು, ಪರಿಷ್ಕೃತ ಪಠ್ಯದಲ್ಲಿ ತಮ್ಮ ಲೇಖನಗಳು ಇರಬಾರದು ಎಂದು ಬಯಸುತ್ತಿದ್ದಾರೆ ಎನ್ನುವುದಾದರೆ ಆ ಪರಿಷ್ಕೃತ ಪಠ್ಯ ಅದೆಷ್ಟರ ಮಟ್ಟಿಗೆ ಆತ್ಮಘಾತುಕವಾಗಿರಬಹುದು ಎನ್ನುವುದನ್ನು ನಾವು ಊಹಿಸಬೇಕಾಗುತ್ತದೆ.

ಕಾಲಾನುಕಾಲಕ್ಕೆ ಯಾವುದೇ ಪಠ್ಯ ಪುಸ್ತಕಗಳ ಪರಿಷ್ಕರಣೆ ಅತ್ಯಗತ್ಯ. ಆಧುನಿಕ ಜಗತ್ತು ತೆರೆದುಕೊಂಡಂತೆ, ವಿಜ್ಞಾನ, ವೈಚಾರಿಕತೆ ಬೆಳೆದಂತೆ ಪಠ್ಯ ಪುಸ್ತಕಗಳಲ್ಲೂ ಬದಲಾವಣೆಗಳಾಗಬೇಕು. ಯಾವುದೇ ಪಠ್ಯ ಪುಸ್ತಕ ಪರಿಷ್ಕರಣೆಯ ಸಂದರ್ಭದಲ್ಲಿ ಎರಡು ಮುಖ್ಯ ಪ್ರಶ್ನೆಗಳನ್ನು ತನಗೆ ತಾನೇ ಶಿಕ್ಷಣ ಇಲಾಖೆ ಕೇಳಿಕೊಳ್ಳಬೇಕಾಗುತ್ತದೆ. ಪಠ್ಯ ಪುಸ್ತಕಗಳ ಪರಿಷ್ಕರಣೆಯು ಅನಿವಾರ್ಯವೆ? ಎರಡನೆಯದು, ಅನಿವಾರ್ಯವಾದರೆ ಅದನ್ನು ಪರಿಷ್ಕರಣೆ ಮಾಡಬೇಕಾದವರಿಗೆ ಇರಬೇಕಾಗಿರುವ ಅರ್ಹತೆಗಳೇನು? ಈ ಹಿಂದೆ ಪಠ್ಯ ಪುಸ್ತಕವನ್ನು ರೂಪಿಸಿದವರಲ್ಲಿ ಇದ್ದ ಅಕಾಡಮಿಕ್ ಮತ್ತು ಇನ್ನಿತರ ಅರ್ಹತೆಗಳನ್ನು ಪರಿಗಣಿಸಿ, ಪರಿಷ್ಕರಣೆಯ ಸಂದರ್ಭದಲ್ಲಿ ಅಂತಹ ಹಿರಿಯ ವಿದ್ವಾಂಸರನ್ನು ಆಯ್ಕೆ ಮಾಡುವುದು ಪಠ್ಯದ ಘನತೆಯನ್ನು ಉಳಿಸಿಕೊಳ್ಳುವುದಕ್ಕೆ ಪೂರಕವಾಗಿದೆ. ಆದುದರಿಂದ ಪಠ್ಯ ಪರಿಷ್ಕರಣೆಯ ಸಂದರ್ಭದಲ್ಲಿ ಅದರ ನೇತೃತ್ವವನ್ನು ವಹಿಸುವ ವ್ಯಕ್ತಿಯ ಬಗ್ಗೆ ಸರಕಾರಕ್ಕೆ ಸಂಪೂರ್ಣ ಅರಿವಿರಬೇಕಾಗುತ್ತದೆ.

ಮೊತ್ತ ಮೊದಲಾಗಿ, ಪಠ್ಯ ಪರಿಷ್ಕರಣೆ ಅನಿವಾರ್ಯವೆ? ಎನ್ನುವುದನ್ನು ಜನರಿಗೆ ವಿವರಿಸುವಲ್ಲಿ ಸರಕಾರ ಮುಖ್ಯವಾಗಿ ಶಿಕ್ಷಣ ಸಚಿವರು ವಿಫಲರಾಗಿದ್ದಾರೆ. ರಾಜ್ಯ ಕೊರೋನ ಮತ್ತು ಲಾಕ್ ಡೌನ್ ದುಷ್ಪರಿಣಾಮಗಳಿಂದ ಇನ್ನೂ ತಲೆಯೆತ್ತಿ ನಿಂತಿಲ್ಲ. ಶಿಕ್ಷಣ ಕ್ಷೇತ್ರ ಈ ಅವಧಿಯಲ್ಲಿ ಸಂಪೂರ್ಣ ತತ್ತರಿಸಿತ್ತು. ಇಂತಹ ಶಿಕ್ಷಣಕ್ಷೇತ್ರಕ್ಕೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು, ಆರ್ಥಿಕ ನೆರವು ನೀಡುವುದು, ಶಿಕ್ಷಕರಿಗೆ ನೈತಿಕ ಸ್ಥೈರ್ಯ ನೀಡುವುದು, ಶಾಲೆ ತೊರೆದ ವಿದ್ಯಾರ್ಥಿಗಳನ್ನು ಮರಳಿ ಶಾಲೆಗೆ ಸೇರಿಸುವುದಕ್ಕೆ ಸರಕಾರ ಆದ್ಯತೆಯನ್ನು ನೀಡಬೇಕಾಗಿತ್ತು. ಆದರೆ ಅವುಗಳ ಬಗ್ಗೆ ಚಿಂತಿಸದೆ 'ಎಲ್ಲಾ ಬಿಟ್ಟ ಭಂಗಿ ನೆಟ್ಟ' ಎಂಬಂತೆ ಸರಕಾರ ಪಠ್ಯ ಪುಸ್ತಕ ಪರಿಷ್ಕರಣೆಯ ಹೆಸರಲ್ಲಿ ಶಿಕ್ಷಣ ಕ್ಷೇತ್ರದ ಗಾಯಗಳಿಗೆ ಇನ್ನಷ್ಟು ಬರೆಗಳನ್ನು ಎಳೆಯಿತು. ಇಂದು ರಾಜ್ಯ ಸರಕಾರ ಪರಿಷ್ಕೃತ ಪಠ್ಯಗಳ ಚರ್ಚೆಯಲ್ಲಿ 'ನಗ್ನ'ವಾಗಿದೆ. ಆದರೆ ಇತ್ತ ಶಾಲೆ ಆರಂಭವಾದರೂ ಪಠ್ಯ ಪುಸ್ತಕಗಳು, ಯೂನಿಫಾರ್ಮ್‌ಗಳು ದೊರೆಯದೆ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ಈ ಪರಿಷ್ಕರಣೆಯ ಅಗತ್ಯತೆಯನ್ನು ಸರಕಾರಕ್ಕೆ ತಿಳಿಸಿಕೊಟ್ಟವರು ಯಾರು? ಆತುರಾತುರವಾಗಿ ಈ ಪರಿಷ್ಕರಣೆ ಯಾಕೆ ನಡೆಯಿತು? ಎಂಬ ಪ್ರಶ್ನೆಗಳನ್ನು ಕೇಳಿದರೆ 'ಮುಂಡಾಸು ಮೂವತ್ತು ಮೊಳ' ಎಂಬ ಬೇಜವಾಬ್ದಾರಿ ಉತ್ತರ ಸರಕಾರದಿಂದ ದೊರಕುತ್ತದೆ.

ಸರಿ. ಪರಿಷ್ಕರಣೆ ಮಾಡುವುದಕ್ಕೇನೋ ಸರಕಾರ ಹೊರಟಿತು. ಕನಿಷ್ಠ ಆ ಪರಿಷ್ಕರಣೆ ಮಾಡುವವರ ಹಿನ್ನೆಲೆ ನಾಡಿನ ಜನತೆಗೆ ಅರಿವಿಲ್ಲದಿದ್ದರೂ ಪರವಾಗಿಲ್ಲ, ಶಿಕ್ಷಣ ಸಚಿವರಿಗಾದರೂ ಗೊತ್ತಿರಬೇಕು. 'ಆತ ಐಐಟಿ ಪ್ರೊಫೆಸರ್' ಎಂದು ಶಿಕ್ಷಣ ಸಚಿವರು ಸದನದಲ್ಲಿ ವಿರೋಧ ಪಕ್ಷಕ್ಕೆ ಮಾಹಿತಿಯನ್ನು ನೀಡುತ್ತಾರೆ. ಆದರೆ ಪರಿಷ್ಕರಣೆಯ ನೇತೃತ್ವ ವಹಿಸಿದ 'ಭೂಪ' 'ನಾನು ಐಐಟಿ ಪ್ರೊಫೆಸರ್ ಅಲ್ಲ' ಎನ್ನುವುದನ್ನು ಮಾಧ್ಯಮಗಳಲ್ಲಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ. ಅಂದರೆ, ಪರಿಷ್ಕರಣೆಗೆ ತಪ್ಪು ವ್ಯಕ್ತಿಯನ್ನು ಆರಿಸಲಾಗಿದೆ ಎನ್ನುವುದನ್ನು ಶಿಕ್ಷಣ ಸಚಿವರೇ ಒಪ್ಪಿಕೊಂಡಂತಾಯಿತು. 'ಐಐಟಿ ಪ್ರೊಫೆಸರ್' ಎಂಬ ತಪ್ಪು ಮಾಹಿತಿಯ ಆಧಾರದಲ್ಲಿ ಶಿಕ್ಷಣ ಸಚಿವರು ರೋಹಿತ್ ಚಕ್ರತೀರ್ಥ ಎಂಬ ಎಳಸು ಫೇಸ್‌ಬುಕ್ ಟ್ರೋಲರ್‌ನನ್ನು ಪಠ್ಯ ಪುಸ್ತಕ ತಿದ್ದುವ ಮಹತ್ವದ ಹೊಣೆಗಾರಿಕೆಗೆ ಆಯ್ಕೆ ಮಾಡಿದ್ದಾರೆ ಎಂದಾಯಿತು.

ಇದೀಗ ಸ್ವತಃ ರೋಹಿತ್ ಚಕ್ರತೀರ್ಥನೇ ತಾನು ಪ್ರೊಫೆಸರ್ ಅಲ್ಲ, ಕನಿಷ್ಠ ಶಿಕ್ಷಣ ತಜ್ಞನೂ ಅಲ್ಲ ಎನ್ನುವುದನ್ನು ಬಹಿರಂಗವಾಗಿ ಒಪ್ಪಿಕೊಂಡಿರುವ ಕಾರಣದಿಂದ, ಶಿಕ್ಷಣ ಸಚಿವರ ಬೇಜವಾಬ್ದಾರಿಯಿಂದ ಪಠ್ಯ ಪುಸ್ತಕಗಳಿಗೆ ಆದ ಹಾನಿಯನ್ನು ತುಂಬಿಕೊಡುವವರು ಯಾರು ಎನ್ನುವ ಪ್ರಶ್ನೆಗೆ ಸರಕಾರ ಉತ್ತರಿಸಬೇಕು . ಈ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವರ ರಾಜೀನಾಮೆಗಾಗಿ ಒತ್ತಾಯ ನಡೆಯಬೇಕು. ಕನಿಷ್ಠ ಈ ಚಕ್ರತೀರ್ಥನ ಶಿಕ್ಷಣಯೇತರ ಹಿನ್ನೆಲೆ ಯನ್ನಾದರೂ ಪರಿಶೀಲಿಸಬೇಕಾಗಿರುವುದು ಸರಕಾರದ ಕರ್ತವ್ಯವಾಗಿತ್ತು. ಆತನಿಗೆ ಫೇಸ್‌ಬುಕ್‌ನಲ್ಲಿ ಇತರರನ್ನು ಟ್ರೋಲ್ ಮಾಡುವ, ಮಹಿಳೆಯರನ್ನು ಅತ್ಯಂತ ಅಸಹ್ಯವಾಗಿ ನಿಂದಿಸುವ, ಈ ನಾಡಿನ ಅಭಿವೃದ್ಧಿಗಾಗಿ ಭಾರೀ ಕೊಡುಗೆಗಳನ್ನು ನೀಡಿದ ಹಿರಿಯರನ್ನು ಅತ್ಯಂತ ಕೆಟ್ಟದಾಗಿ ವ್ಯಂಗ್ಯವಾಡುವ ಮಾನಸಿಕ ಕಾಯಿಲೆ ಇದೆ. ಈತನ ಮೇಲೆ ಈ ಹಿಂದೆ ಪೊಲೀಸ್ ಠಾಣೆಯೊಂದರಲ್ಲಿ ಪ್ರಕರಣವೂ ದಾಖಲಾಗಿತ್ತು. ಅಂಬೇಡ್ಕರ್‌ರನ್ನು ಅತ್ಯಂತ ಕೆಟ್ಟದಾಗಿ ನಿಂದಿಸಿದ್ದ. ಕುವೆಂಪು ಅವರನ್ನು ಏಕವಚನದಲ್ಲಿ ಹೀಗಳೆದು ಲೇಖನವನ್ನು ಬರೆದಿದ್ದ. ನಾಡಗೀತೆಯನ್ನು ಅವಮಾನಿಸಿ ಫೇಸ್‌ಬುಕ್‌ನಲ್ಲಿ ಸರ್ವರಿಗೂ ಹಂಚಿಕೊಂಡಿದ್ದ. ಇಂತಹ ಹಿನ್ನೆಲೆಯಿರುವ ಈತನನ್ನು ಪಠ್ಯ ಪರಿಷ್ಕರಣೆಗೆ ಆಯ್ಕೆ ಮಾಡುವುದು ಎಂದರೆ ಕೋತಿಗೆ ಭಂಗಿ ಕುಡಿಸಿದಂತೆ. ಭಂಗಿ ಕುಡಿದ ಕೋತಿ ಏನು ಮಾಡಬೇಕೋ ಅದನ್ನೇ ಆತ ಪಠ್ಯ ಪುಸ್ತಕದಲ್ಲಿ ಮಾಡಿದ್ದಾನೆ.

ಬಸವಣ್ಣರ ಬಗ್ಗೆ ತಪ್ಪು ಮಾಹಿತಿಗಳನ್ನು ಪಠ್ಯ ಪುಸ್ತಕದಲ್ಲಿ ನೀಡಿದ ಕಾರಣಕ್ಕಾಗಿ ಈಗಾಗಲೇ ಲಿಂಗಾಯತ ಸ್ವಾಮೀಜಿಗಳು ಬಂಡೆದಿದ್ದಾರೆ. ಕುವೆಂಪುವರನ್ನು ಪರಿಚಯಿಸುವ ಹೆಸರಿನಲ್ಲಿ ಅತ್ಯಂತ ಕೀಳಾಗಿ ನಿರೂಪಿಸಿ ತನ್ನ ವಿಕೃತಿಯನ್ನು ಪಠ್ಯದಲ್ಲಿ ಮೆರೆದಿದ್ದಾನೆ. ಇದರ ವಿರುದ್ಧ ಒಕ್ಕಲಿಗ ಸ್ವಾಮೀಜಿಗಳು ಮಾತ್ರವಲ್ಲ, ಕನ್ನಡಾಭಿಮಾನಿಗಳೆಲ್ಲ ಒಂದಾಗಿ ಪ್ರತಿಭಟಿಸುತ್ತಿದ್ದಾರೆ. ನಾರಾಯಣ ಗುರುಗಳನ್ನು ಅವಮಾನಿಸಿದ್ದಾನೆ. ಬ್ರಾಹ್ಮಣೇತರರ ನಿಂದನೆ ಮತ್ತು ಬ್ರಾಹ್ಮಣ ಲೇಖಕರ ವೈಭವೀಕರಣ ಈ ಪಠ್ಯದ ತುಂಬಾ ನಡೆದಿದೆ. ಹೊಸ ತಲೆಮಾರನ್ನು ರೂಪಿಸಬೇಕಾಗಿದ್ದ, ನೈತಿಕ ವೌಲ್ಯಗಳ ಹಾಲನ್ನು ಊಡಿಸಿ ಬೆಳೆಸಬೇಕಾಗಿದ್ದ ಪಠ್ಯಗಳಲ್ಲಿ ವಿಷವನ್ನು ತುಂಬಿ, ಅದನ್ನು ಮಕ್ಕಳ ಮೆದುಳಿಗೆ ಸುರಿಯುವ ಆರೆಸ್ಸೆಸ್‌ನ ಸಂಚೊಂದರ ಭಾಗವಾಗಿದ್ದಾನೆ ರೋಹಿತ್ ಚಕ್ರತೀರ್ಥ. ಇದೀಗ ಆ ಸಂಚು ಬಟಾ ಬಯಲಾಗಿದೆ. ಆದರೆ ನಾಡಿನ ಭವಿಷ್ಯಕ್ಕಿಂತ ತನ್ನ ಪ್ರತಿಷ್ಠೆಯೇ ದೊಡ್ಡದು ಎನ್ನುವಂತೆ ಶಿಕ್ಷಣ ಸಚಿವರು ವರ್ತಿಸುತ್ತಿದ್ದಾರೆ. ಆದರೆ ಇದರಿಂದ ಇನ್ನಷ್ಟು ಅನಾಹುತಗಳನ್ನು ಅವರು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ಆದುದರಿಂದ, ತಕ್ಷಣ ಪರಿಷ್ಕೃತ ಪಠ್ಯ ಪುಸ್ತಕಗಳನ್ನು ರದ್ದಿಗೆ ಹಾಕಿ, ಕುವೆಂಪು, ಬಸವಣ್ಣ, ನಾರಾಯಣ ಗುರು ಮೊದಲಾದವರನ್ನು ಅವಮಾನಿಸಿದ ರೋಹಿತ್ ಚಕ್ರತೀರ್ಥನ ವಿರುದ್ಧ ಪ್ರಕರಣ ದಾಖಲಿಸಿ ಆತನನ್ನು ಜೈಲಿನಲ್ಲಿರಿಸಿ ಅಲ್ಲಿ, ಆತನಿಗೆ ಒಂದನೇ ತರಗತಿಯಲ್ಲಿರುವ ಈ ಹಿಂದಿನ ನೈತಿಕ ಪಾಠಗಳನ್ನು ಹೊಸದಾಗಿ ಕಲಿಸಲು ವ್ಯವಸ್ಥೆ ಮಾಡಿಕೊಡಬೇಕು. ಮತ್ತೆ ಅವನನ್ನು ಮನುಷ್ಯನನ್ನಾಗಿ ಪರಿವರ್ತಿಸುವುದಕ್ಕೆ ಬೇಕಾಗಿರುವ ಯೋಗ್ಯ ಚಿಕಿತ್ಸೆಯನ್ನು ಜೈಲಿನಲ್ಲೇ ಉಚಿತವಾಗಿ ಒದಗಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News