ನೊಯ್ಡ ಏರ್‌ಪೋರ್ಟ್ ಟಾಟಾ ತೆಕ್ಕೆಗೆ: ದೇಶದ ಅತಿ ದೊಡ್ಡ ಏರ್ ಪೋರ್ಟ್ ಆಗಿ ಅಭಿವೃದ್ದಿಗೊಳ್ಳುವ ನಿರೀಕ್ಷೆ

Update: 2022-06-03 18:31 GMT

ನೊಯ್ಡ, ಜೂ.3: ಭಾರತದ ಅತಿ ದೊಡ್ಡ ವಿಮಾನನಿಲ್ದಾಣವಾಗಿ ರೂಪುಗೊಳ್ಳಲಿರುವ ನೊಯ್ಡಾದ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ನಿರ್ಮಾಣದ ಗುತ್ತಿಗೆಯನ್ನು , ಟಾಟಾ ಉದ್ಯಮಸಮೂಹದ ಮೂಲಸೌಕರ್ಯ ಹಾಗೂ ಕಟ್ಟಡ ನಿರ್ಮಾಣ ಸಂಸ್ಥೆಯಾದ ಟಾಟಾ ಪ್ರಾಜೆಕ್ಟ್ಸ್ ಪಡೆದುಕೊಂಡಿದೆ.

ಈ ಯೋಜನೆಯ ಭಾಗವಾಗಿ ಟಾಟಾ ಪ್ರಾಜೆಕ್ಟ್ಸ್ ಕಂಪೆನಿಯು ವಿಮಾನನಿಲ್ದಾಣದ ಟರ್ಮಿನಲ್, ರನ್ ವೇ, ಮೂಲಸೌಕರ್ಯ, ರಸ್ತೆಗಳು, ಕಟ್ಟಡ ಇತ್ಯಾದಿಗಳನ್ನ ನಿರ್ಮಿಸಲಿದೆಯೆಂದು ಯಮುನಾ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಪ್ರೈ. ಲಿಮಿಟೆಡ್ (ವೈಐಎಪಿಎಲ್) ಹೇಳಿಕೆಯೊಂದರಲ್ಲಿ ತಿಳಿಸಿದೆ.

ಈ ವಿಮಾನನಿಲ್ದಾಣವನ್ನು ನಿರ್ವಹಿಸುವ ಯಮುನಾ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಪ್ರೈವೇಟ್ ಲಿಮಿಟೆಡ್, ಶೇ.100ರಷ್ಟು ಪಾಲುದಾರಿಕೆಯನ್ನು ಹೊಂದಿರುವ ಸ್ವಿಟ್ಝರ್ಲ್ಯಾಂಡ್ನ ಜ್ಯೂರಿಕ್ ಏರ್ಪೋರ್ಟ್ ಇಂಟರ್ನ್ಯಾಶನಲ್ ಎಜಿ ಕಂಪೆನಿಯ ಅಂಗಸಂಸ್ಥೆಯಾಗಿದೆ.

ಈ ವಿಮಾನನಿಲ್ದಾಣವನ್ನು ಅಭಿವೃದ್ಧಿಪಡಿಸುವ ಬಿಡ್ ಅನ್ನು 2019ರಲ್ಲಿ ಝ್ಯೂರಿಕ್ ಅಂತಾರಾಷ್ಟ್ರೀಯ ವಿಮಾನನಿಲ್ದಾಣವು ಪಡೆದುಕೊಂಡಿತ್ತು. 2020ರ ಅಕ್ಟೋಬರ್ 7ರಂದು ಉತ್ತರ ಪ್ರದೇಶ ಸರಕಾರದ ಯಮುನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರೈವೇಟ್ ಲಿಮಿಟೆಡ್ ಜೊತೆ ರಿಯಾಯಿತಿ ಒಪ್ಪಂದಕ್ಕೆ ಜೊತೆ ಸಹಿಹಾಕಿತ್ತು.

1334 ಹೆಕ್ಟೇರ್ ವಿಸ್ತೀರ್ಣದ ಪ್ರದೇಶ ವಿಸ್ತಾರಕ್ಕೆ ವ್ಯಾಪಿಸಿರುವ ಈ ವಿಮಾನನಿಲ್ದಾಣದ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಾಗ ಅದು 5700 ಕೋಟಿ ರೂ. ಹೂಡಿಕೆಯೊಂದಿಗೆ ವರ್ಷಕ್ಕೆ 1.20 ಕೋಟಿ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News