ಪ್ರವಾದಿ ನಿಂದನೆ ಪ್ರಕರಣ: ಸಾಮಾಜಿಕ ತಾಣದಲ್ಲಿ ಕ್ಷಮೆ ಯಾಚಿಸಿದ ನೂಪುರ್ ಶರ್ಮಾ
ಹೊಸದಿಲ್ಲಿ: ಟಿವಿ ಕಾರ್ಯಕ್ರಮದಲ್ಲಿ ಪ್ರವಾದಿ ನಿಂದನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ವಕ್ತಾರೆಯಾಗಿದ್ದ ನೂಪುರ್ ಶರ್ಮಾ ಸಾಮಾಜಿಕ ತಾಣದಲ್ಲಿ ಕ್ಷಮೆ ಯಾಚಿಸಿದ್ದಾರೆ. ನನ್ನ ಮಾತುಗಳಿಂದ ಯಾರದ್ದಾದರೂ ಧಾರ್ಮಿಕ ಭಾವನೆಗಳಿಗೆ ತೊಂದರೆಯಾಗಿದ್ದರೆ ಕ್ಷಮೆ ಯಾಚಿಸುತ್ತಿದ್ದೇನೆ ಎಂದು ಅವರು ಬರೆದುಕೊಂಡಿದ್ದಾರೆ.
"ಕೆಲವು ದಿನಗಳ ಹಿಂದೆ ಟಿವಿ ಕಾರ್ಯಕ್ರಮವೊಂದರಲ್ಲಿ ನಾನು ಭಾಗವಹಿಸಿದ್ದ ವೇಳೆ ಅಲ್ಲಿ ಶಿವನನ್ನು ಅಪಮಾನ ಮಾಡುತ್ತಿದ್ದರು. ಅದು ಶಿವಲಿಂಗವಲ್ಲ, ಕಾರಂಜಿಯಾಗಿದ್ದು, ಫುಟ್ ಪಾತ್‌ನಲ್ಲೂ ಅಂತಹ ವಸ್ತುಗಳು ಕಂಡು ಬಂದರೆ ನೀವು ಅಲ್ಲೂ ತೆರಳಿ ಪೂಜೆ ಮಾಡುತ್ತೀರೋ? ಎಂಬರ್ಥದಲ್ಲಿ ಹಲವು ನಿಂದನಾತ್ಮಕ ಮಾತುಗಳನ್ನು ಮಹಾದೇವನ ಕುರಿತು ಆಡಿದ್ದರು. ಈ ಸಂದರ್ಭದಲ್ಲಿ ಕೋಪದ ಭರದಲ್ಲಿ ನಾನು ಕೆಲವು ಮಾತುಗಳನ್ನು ಆಡಿದ್ದೆ. ಇದರಿಂದ ಯಾರದ್ದಾದರೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದ್ದರೆ ಕ್ಷಮೆಯಾಚಿಸುತ್ತಿದ್ದಾನೆ ಮತ್ತು ನಾನು ಆಡುದ ಮಾತುಗಳನ್ನು ಹಿಂಪಡೆಯುತ್ತೇನೆ. ಯಾರನ್ನೂ ನೋಯಿಸುವುದು ನನ್ನ ಉದ್ದೇಶವಾಗಿರಲಿಲ್ಲ" ಎಂದು ಬರೆದುಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವದಾದ್ಯಂತ ಹಲವಾರು ಪ್ರಮುಖ ಮಾಧ್ಯಮಗಳು ಹಾಗೂ ಹಲವಾರು ಪ್ರಮುಖ ವ್ಯಕ್ತಿಗಳು ಹೇಳಿಕೆಯನ್ನು ಖಂಡಿಸಿದ್ದರು. ಜೊತೆಗೆ ಭಾರತದೊಂದಿಗೆ ಗಲ್ಫ್ ರಾಷ್ಟ್ರಗಳು ಸಂಬಂಧ ಕಡಿದುಕೊಳ್ಳಬೇಕು ಹಾಗೂ ಭಾರತೀಯ ವಸ್ತುಗಳನ್ನು ಬಹಿಷ್ಕರಿಸಬೇಕಾಗಿಯೂ ಹಲವರು ಪೋಸ್ಟ್ ಗಳನ್ನು ಮಾಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ರೀತಿಯ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಬಿಜೆಪಿ ಪಕ್ಷವು ಇಬ್ಬರು ವಕ್ತಾರರನ್ನು ವಜಾ ಮಾಡಿ ತನ್ನ ಹೇಳಿಕೆ ಬಿಡುಗಡೆ ಮಾಡಿತ್ತು.
— Nupur Sharma (@NupurSharmaBJP) June 5, 2022