ನನಗೇನಾದರೂ ಸಂಭವಿಸಿದರೆ ಅದಕ್ಕೆ ನರಸಿಂಗಾನಂದ ಹೊಣೆ: ಆಲ್ಟ್‌ನ್ಯೂಸ್‌ ಸಹಸಂಸ್ಥಾಪಕ ಮುಹಮ್ಮದ್‌ ಝುಬೈರ್‌

Update: 2022-06-13 11:39 GMT

ಹೊಸದಿಲ್ಲಿ: ಟಿವಿ ಚಾನೆಲ್‌ ನ ಚರ್ಚೆಯೊಂದರ ವೇಳೆ ಬಿಜೆಪಿ ವಕ್ತಾರೆ ನೂಪುರ್‌ ಶರ್ಮಾ ಪ್ರವಾದಿ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ ವೀಡಿಯೊವನ್ನು ಮೊದಲು ಸಾಮಾಜಿಕ ತಾಣದಲ್ಲಿ ಬಿಡುಗಡೆ ಮಾಡಿದ್ದ ಆಲ್ಟ್‌ ನ್ಯೂಸ್‌ ಸಹಸಂಸ್ಥಾಪಕ ಮುಹಮ್ಮದ್‌ ಝುಬೈರ್‌ ವಿರುದ್ಧ ಸಾಮಾಜಿಕ ತಾಣದಲ್ಲಿ ಮತ್ತೆ ದ್ವೇಷ ಅಭಿಯಾನಗಳನ್ನು ಬಲಪಂಥೀಯರು ಪ್ರಾರಂಭಿಸಿದ್ದಾರೆ. "ನನಗೇನಾದರೂ ಸಂಭವಿಸಿದರೆ ಅದಕ್ಕೆ ನರಸಿಗಾನಂದ ಹೊಣೆ" ಎಂದು ಟ್ವಿಟರ್‌ ನಲ್ಲಿ ಝುಬೈರ್‌ ಹೇಳಿಕೆ ನೀಡಿದ್ದಾರೆ. 

ಈಗಾಗಲೇ ಪ್ರವಾದಿ ನಿಂದನೆ ಪ್ರಕರಣವು ಭಾರತ ಮಾತ್ರವಲ್ಲದೇ ವಿಶ್ವದಾದ್ಯಂತ ಆಕ್ರೋಶಕ್ಕೆ ಈಡಾಗಿದೆ. ಕತರ್‌ ಆಡಳಿತವು ಭಾರತ ರಾಯಭಾರಿಗೆ ಸಮನ್ಸ್‌ ಹೊರಡಿಸಿದ್ದು, ಜೊತೆಗೆ ಹಲವಾರು ದೇಶಗಳಲ್ಲಿ ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸಲಾಗುತ್ತಿದೆ. 

"ಅವರು ದ್ವೇಷಭಾಷಣ ಮಾಡುತ್ತಾರೆ. ಪ್ರವಾದಿ ಮುಹಮ್ಮದ್‌ ರನ್ನು ನಿಂದಿಸುತ್ತಾರೆ. ಅವರ ಬೆಂಬಲಿಗರಿಗೆ ಇಸ್ಲಾಂ ವಿರುದ್ಧ ಮಾರಕಾಯುಧ ಎತ್ತಿಕೊಳ್ಳಲು ಕರೆ ನೀಡುತತಾರೆ. ನಾವು ಇದನ್ನು ಜನರಿಗೆ ಬಹಿರಂಗಪಡಿಸಿದಾಗ ಅವರು ನಮ್ಮನ್ನು ನಿಂಧಿಸುತ್ತಾರೆ. ಯತಿ ನರಸಿಂಗಾನಂದ ನನ್ನನ್ನು ಇಸ್ಲಾಮಿಜ್‌ ಜಿಹಾದಿ ಎಂದು ಕರೆದು ಗುರಿಪಡಿಸಿಕೊಂಡಿದ್ದಾನೆ. ನನಗೆ ಇಸ್ಲಾಮಿಕ್‌ ರಾಷ್ಟ್ರಗಳಿಂದ ನಿಧಿ ಬರುತ್ತಿದೆ ಎನ್ನುತ್ತಿದ್ದಾನೆ. ಈತ ಈಗಾಗಲೇ ಆನ್‌ಲೈನ್‌ ಮತ್ತು ಆಫ್‌ಲೈನ್‌ ನಲ್ಲಿ ಲಕ್ಷಾಂತರ ಬೆಂಬಲಿಗರನ್ನು ಹೊಂದಿದ್ದಾನೆ. ನನಗೇನಾದರೂ ಆದರೆ ಅದಕ್ಕೆ ಆತನೆ ಹೊಣೆ" ಎಂದು ಟ್ವೀಟ್‌ ಮಾಡಿದ್ದಾರೆ.

ಜೊತೆಗೆ, "ಹಲವಾರು ಬಿಜೆಪಿ ಸದಸ್ಯರು, ಶಾಸಕರು, ಸಂಸದರು, ಬಿಜೆಪಿ ವಕ್ತಾರರು, ಬಿಜೆಪಿ ಐಟಿ ಸೆಲ್‌ಗಳು, ಬಲಪಂಥೀಯ ಟ್ರೋಲ್‌ಗಳು, ವೆಬ್‌ಸೈಟ್‌ಗಳು ಮತ್ತು ಸಂಪಾದಕರು ಇದನ್ನು ಬಹಿರಂಗಪಡಿಸಿದ್ದಕ್ಕಾಗಿ ನನ್ನನ್ನು ಪೊಲೀಸರು ಬಂಧಿಸಬೇಕೆಂದು ಬಯಸಿದ್ದರು. ಇದಕ್ಕಾಗಿ  ಅವರು ನನ್ನ ಮತ್ತು ಇತರರ ವಿರುದ್ಧ 2-3 ದಿನಗಳ ತಡೆರಹಿತ ಅಭಿಯಾನವನ್ನು ನಡೆಸಿದ್ದರು" ಎಂದು ಝುಬೈರ್‌ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News