×
Ad

ಬಾಲಿವುಡ್‌ ನಟ ಸಲ್ಮಾನ್‌ ಖಾನ್‌, ತಂದೆ ಸಲೀಂ ಖಾನ್‌ ಗೆ ಕೊಲೆ ಬೆದರಿಕೆ ಪತ್ರ: ಪ್ರಕರಣ ದಾಖಲು

Update: 2022-06-05 20:31 IST
PHOTO: TWITTER/@ANI

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ಅವರ ತಂದೆ ಬರಹಗಾರ ಸಲೀಂ ಖಾನ್ ಅವರಿಗೆ ಬೆದರಿಕೆ ಹಾಕಿರುವ ಅನಾಮಧೇಯ ಪತ್ರವೊಂದು ಬಾಂದ್ರಾ ಬ್ಯಾಂಡ್‌ ಸ್ಟ್ಯಾಂಡ್ ವಾಯು ವಿಹಾರದ ಬಳಿ ರವಿವಾರ ಪತ್ತೆಯಾಗಿದೆ. ಬಾಂದ್ರಾ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಈ ಪತ್ರವು ಸಲೀಂ ಖಾನ್ ಅವರ ಭದ್ರತಾ ಸಿಬ್ಬಂದಿಗೆ ಬೆಂಚ್‌ನಲ್ಲಿ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. "ಸಲೀಂ ಖಾನ್ ಅವರು ತಮ್ಮ ಭದ್ರತಾ ಸಿಬ್ಬಂದಿಯೊಂದಿಗೆ ವಾಯುವಿಹಾರಕ್ಕೆ ಬೆಳಗ್ಗಿನ ವೇಳೆ ತೆರಳುತ್ತಾರೆ. ಅವರು ಸಾಮಾನ್ಯವಾಗಿ ವಿರಾಮ ತೆಗೆದುಕೊಳ್ಳುವ ಸ್ಥಳವಾದ ಬೆಂಚ್ ಮೇಲೆ ಚೀಟಿಯನ್ನು ಬಿಡಲಾಗಿದೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ಸಲೀಂ ಖಾನ್ ಅವರ ಭದ್ರತಾ ಸಿಬ್ಬಂದಿ ಪತ್ರವನ್ನು ಕಂಡು ಅವರಿಗೆ ನೀಡಿದರು. ಪೊಲೀಸರ ಪ್ರಕಾರ, ಪತ್ರದಲ್ಲಿ ಸಲ್ಮಾನ್ ಮತ್ತು ಸಲೀಂ ಖಾನ್ ಇಬ್ಬರಿಗೂ ಕೊಲೆ ಬೆದರಿಕೆ ಇತ್ತು. "ಮೂಸಾವಾಲಾ ಜೈಸಾ ಕರ್ ದುಂಗಾ" (ಇತ್ತೀಚೆಗೆ ಕೊಲೆಯಾದ ಸಿಧು ಮೂಸಾವಾಲಾರನ್ನು ಉಲ್ಲೇಖಿಸಿ) ಎಂದು ಅದರಲ್ಲಿ ಬರೆಯಲಾಗಿತ್ತು ಎನ್ನಲಾಗಿದೆ. ಕೂಡಲೇ ಈ ಕುರಿತು ಬಾಂದ್ರಾ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಬ್ಯಾಂಡ್‌ಸ್ಟ್ಯಾಂಡ್ ಪ್ರದೇಶದಲ್ಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ ಮತ್ತು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

2018ರಲ್ಲಿ ಸಲ್ಮಾನ್ ಖಾನ್ ಅವರಿಗೆ ಬೆದರಿಕೆ ಒಡ್ಡಿದ್ದ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ನ ಸದಸ್ಯರಿಂದ ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಅವರು ಹತ್ಯೆ ನಡೆದಿದೆ ಎಂದು ಹೇಳಲಾದ ಕೆಲವು ದಿನಗಳ ಬಳಿಕ ಈ ಬೆದರಿಕೆ ಪತ್ರ ಬಂದಿರುವುದರಿಂದ ಮಹತ್ವ ಪಡೆದುಕೊಂಡಿದೆ. ಸಲ್ಮಾನ್ ಖಾನ್ ಅವರಿಗೆ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಕೊಲೆ ಬೆದರಿಕೆ ಒಡ್ಡಿರುವುದು ಖಾನ್ ಆರೋಪಿಯಾಗಿರುವ 1998ರ ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧ ಹೊಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News