ಉಳ್ಳಾಲ ಸೇತುವೆ | ರಸ್ತೆ ಇಕ್ಕೆಲಗಳಲ್ಲಿ ಅಳವಡಿಸಿರುವ ಸ್ವಚ್ಛತೆ ಜನಜಾಗೃತಿ ಫಲಕಗಳ ಅನಾವರಣ
ಉಳ್ಳಾಲ, ಜೂ.8: ಹಸಿರು ದಳ ಮತ್ತು ಎಪಿಡಿ ಫೌಂಡೇಶನ್ ಸಂಘಟನೆಯು ಮಂಗಳೂರು ಮಹಾನಗರ ಪಾಲಿಕೆಯ ಸಹಕಾರದೊಂದಿಗೆ 'ನಮ್ಮ ನೇತ್ರಾವತಿ ನಮ್ಮ ಜವಾಬ್ದಾರಿ' ಅಭಿಯಾನ ಹಮ್ಮಿಕೊಂಡಿದೆ. ಅಭಿಯಾನದ ಹಿನ್ನೆಲೆಯಲ್ಲಿ ನೇತ್ರಾವತಿ ಸೇತುವೆಯ ಬಳಿ ರಸ್ತೆ ಬದಿ ಕಸ ಎಸೆಯುವುದನ್ನು ತಡೆಗಟ್ಟುವ ಉದ್ದೇಶದಿಂದ ಜನ ಜಾಗೃತಿ ಮೂಡಿಸುವ ಬರಹಗಳಿರುವ ಸೂಚನಾ ಫಲಕಗಳನ್ನು ಮನಪಾ ಮೇಯರ್ ಪ್ರೇಮಾನಂದ ಶೆಟ್ಟಿ ಇಂದು ಅನಾವರಣಗೊಳಿಸಿದರು.
ಈ ವೇಳೆ ಮಾತನಾಡಿದ ಮೇಯರ್, ಕರಾವಳಿಯ ಜೀವನದಿ ನೇತ್ರಾವತಿಯನ್ನು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ. ನದಿಗಳಿಗೆ, ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆದು ಮಾಲಿನ್ಯ ಮಾಡದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಮನಪಾ ಪ್ರಾದೇಶಿಕ ಆಯುಕ್ತ ಶಬರಿನಾಥ್ ಶೆಟ್ಟಿ ಮಾತನಾಡಿ, ಮಹಾನಗರ ಪಾಲಿಕೆಯ ವ್ಯಾಪ್ತಿಯ ನದಿಗಳಿಗೆ ಮತ್ತು ಸಾರ್ವಜನಿಕ ಜಾಗದಲ್ಲಿ ಕಸ ಎಸೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಳುವುದರ ಜೊತೆಗೆ ದೊಡ್ಡ ಮೊತ್ತದ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು ಮತ್ತು ಈಗಾಗಲೇ ಕೆಲವರಿಗೆ ದಂಡ ವಿಧಿಸಿರುವ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಕಾರ್ಪೊರೇಟರ್ ವೀಣಾ ಮಂಗಳ, ನಗರ ಪಾಲಿಕೆಯ ಪರಿಸರ ಅಭಿಯಂತರೆ ದೀಪ್ತಿ, ಪರಿಸವಾದಿ ಜೀತ್ ಮಿಲನ್, ರೋಷನಿ ಅಲ್ಮುನಿ ಅಸೋಸಿಯೇಶನ್ ಸದಸ್ಯ ಕಿಶೋರ್ ಅತ್ತಾವರ, ಸಂತ ಅಲೋಶಿಯಸ್ ಕಾಲೇಜಿನ ಸಿಬ್ಬಂದಿ ಗೋಪಿಕಾ, ಜಮಾಅತೆ ಇಸ್ಲಾಮಿ ಹಿಂದ್ ಉಳ್ಳಾಲ ಘಟಕದ ಅಧ್ಯಕ್ಷ ಕರೀಂ, ನದಿ ಸಂರಕ್ಷಣ ಸಮಿತಿಯ ಸದಸ್ಯ ರಿಯಾಝ್, ರೋಷನಿ ಕಾಲೇಜಿನ ಸಿಸ್ಟೆರ್ ಜೆಸಿಂತಾ ಉಪಸ್ಥಿತರಿದ್ದರು.
ಇದೇವೇಳೆ 'ನಮ್ಮ ನೇತ್ರಾವತಿ ನಮ್ಮ ಜವಾಬ್ದಾರಿ' ಅಭಿಯಾನಕ್ಕೆ ಕೈಜೋಡಿಸಿದ ವಿವಿಧ ಸಂಘ ಸಂಸ್ಥೆಗಳು, ಕಾಲೇಜುಗಳಿಗೆ ಅಭಿನಂದನಾ ಪತ್ರಗಳನ್ನುನ್ನು ನೀಡಲಾಯಿತು..
ಹಸಿರುದಳದ ರೂಪಾ ಸ್ವಾಗತಿಸಿದರು. ಎಪಿಡಿ ಫೌಂಡೇಶನ್ ನ ಗೀತಾ ವಂದಿಸಿದರು ಹಸಿರು ದಳದ ನಾಗರಾಜ್ ಆರ್. ಅಂಚನ್ ಕಾರ್ಯಕ್ರಮ ನಿರೂಪಿಸಿದರು.
'ನಮ್ಮ ನೇತ್ರಾವತಿ ನಮ್ಮ ಜವಾಬ್ದಾರಿ' ಅಭಿಯಾನದಲ್ಲಿ ಮಂಗಳೂರಿನ ರೋಶನಿ ನಿಲಯ ಕಾಲೇಜು, ಸಂತ ಅಲೋಶಿಯಸ್ ಕಾಲೇಜು, ಗೀವ್ ಗ್ರೀನ್ ಸೊಲ್ಯೂಶನ್, ನದಿ ಸಂರಕ್ಷಣಾ ಸಮಿತಿ, ಆಳ್ವಾಸ್ ಕಾಲೇಜು ಮೂಡುಬಿದಿರೆ, ಜಮಾಅತೆ ಇಸ್ಲಾಮಿ ಹಿಂದ್, ಜರ್ನಿ ಥೀಯೇಟರ್ ಗ್ರೂಪ್, ಅಭಿಸಾರನ್, ಬೋಸ್ಕಿ ಒರ್ಬ್, ಪಕ್ಕಲಡ್ಕ ಯುವಕ ಮಂಡಲ, ನಮ್ಮ ಧ್ವನಿ ಹಳೇಕಳ, ಪರಿಸರ ಸಂರಕ್ಷಣಾ ಒಕ್ಕೂಟ, ಮೆಸ್ಕಾಂ, ನೆಹರು ಯುವ ಕೇಂದ್ರ, ರೇಡಿಯೋ ಸಾರಂಗ್, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ, ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ, ಮಂಗಳೂರು ನಗರ ಪೊಲೀಸ್, ಸಂಚಾರ ಪೊಲೀಸ್ ಉಪ ವಿಭಾಗ, ಲಯನ್ಸ್ ಕ್ಲಬ್ ಪರ್ಮನ್ನೂರು, ಫೋಕಸ್, ಜೆಸಿಐ ಬಂಟ್ವಾಳ ಮುಂತಾದ ಹಲವು ಸಂಘಸಂಸ್ಥೆಗಳು ಸಹಭಾಗಿಯಾಗಿವೆ ಎಂದು ಸಂಘಟಕರು ತಿಳಿಸಿದ್ದಾರೆ.