ಮಂಗಳೂರು: ರಸ್ತೆ ಬದಿ ಕಸ ಎಸೆದ ನೌಕರನಿಗೆ 20 ಸಾವಿರ ರೂ. ದಂಡ
ಮಂಗಳೂರು: ನಗರದ ಕಂಕನಾಡಿ ಮಾರುಕಟ್ಟೆ ರಸ್ತೆ ಬದಿಗೆ ಕಸ ಎಸೆಯುತ್ತಿದ್ದ ಆರೋಪದಲ್ಲಿ ಫಾಸ್ಟ್ ಫುಡ್ ಸಂಸ್ಥೆಯೊಂದರ ನೌಕರನಿಗೆ ಮಂಗಳೂರು ಮಹಾನಗರ ಪಾಲಿಕೆಯು 20 ಸಾವಿರ ರೂ. ದಂಡ ವಿಧಿಸಿದ ಘಟನೆ ಮಂಗಳವಾರ ನಡೆದಿದೆ.
ಈ ರಸ್ತೆಯಲ್ಲಿ ಕಸ ಎಸೆಯುತ್ತಿದ್ದ ಕಾರಣ ಬ್ಲ್ಯಾಕ್ ಸ್ಪಾಟ್ ಎಂದು ಬಿಂಬಿತವಾಗಿತ್ತು. ಇತ್ತೀಚೆಗೆ ಈ ಸ್ಥಳವನ್ನು ನಗರ ಪಾಲಿಕೆ ಸ್ವಚ್ಛಗೊಳಿಸಿತ್ತು. ಅದಾದ ಬಳಿಕ ಕಸ ಎಸೆಯುವುದು ನಿಯಂತ್ರಣಕ್ಕೆ ಬಂದಿತ್ತು. ಆದರೆ ಕಳೆದ ಕೆಲವು ದಿನಗಳಿಂದ ಮತ್ತೆ ಕಸ ಎಸೆಯುತ್ತಿದ್ದರು.
ಮಂಗಳವಾರ ಫಾಸ್ಟ್ ಫುಡ್ ಸಂಸ್ಥೆಯ ನೌಕರನೊಬ್ಬ ಕಸ ಎಸೆಯುತ್ತಿದ್ದ ಬಗ್ಗೆ ಮಾಹಿತಿ ಪಡೆದ ಮನಪಾ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಕಸ ಎಸೆಯುತ್ತಿದ್ದ ವ್ಯಕ್ತಿಗೆ 20 ಸಾವಿರ ರೂ. ದಂಡ ವಿಧಿಸಿದ್ದಾರೆ.
ʼಬ್ಯೂಟಿಫುಲ್ ಸ್ಪಾಟ್ʼ ಮಾಡಿದ ಜಾಗದಲ್ಲಿ ತ್ಯಾಜ್ಯ ಹಾಕಿ ಮತ್ತೆ ಬ್ಲ್ಯಾಕ್ ಸ್ಪಾಟ್ ಮಾಡಿದ ಕಾರಣವನ್ನೂ ದಂಡದ ರಶೀದಿಯಲ್ಲಿ ನಮೂದಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಪಾಲಿಕೆಯ ಆರೋಗ್ಯ ನಿರೀಕ್ಷಕರಾದ ಶಿವಲಿಂಗ, ರಕ್ಷಿತಾ, ಮಲೇರಿಯಾ ಮೇಲ್ವಿಚಾರಕ ಚಂದ್ರಹಾಸ್ ಪಾಲ್ಗೊಂಡಿದ್ದರು.