ಮುಚ್ಚಿಡಲು ಏನೂ ಇಲ್ಲ, ತನಿಖೆಗೆ ಸೋನಿಯಾ, ರಾಹುಲ್‌ ಹಾಜರಾಗಲಿದ್ದಾರೆ: ಇಡಿ ಸಮನ್ಸ್‌ ಕುರಿತು ಕಾಂಗ್ರೆಸ್‌ ಸ್ಪಷ್ಟನೆ

Update: 2022-06-08 15:21 GMT

ಹೊಸದಿಲ್ಲಿ: ಇಡಿ ಮುಂದೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಹಾಜರಾಗುವ ಕುರಿತು ಸ್ಪಷ್ಟನೆ ನೀಡಿದೆ. ತನಿಖಾ ಸಂಸ್ಥೆಯಿಂದ ಮುಚ್ಚಿಡಲು ಏನೂ ಇಲ್ಲದ ಕಾರಣ ಇಬ್ಬರೂ ನಾಯಕರು ಇಡಿ ಮುಂದೆ ಹಾಜರಾಗಲಿದ್ದಾರೆ ಎಂದು ಪಕ್ಷವು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಜೂನ್ 8 ರಂದು ಹಾಜರಾಗುವಂತೆ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಇಡಿ ಸಮನ್ಸ್ ನೀಡಿತ್ತು, ಆದರೆ ಅವರು ಕೋವಿಡ್ -19 ನಿಂದ ಬಳಲುತ್ತಿರುವ ಕಾರಣ ಅವರು ಹಾಜರಾಗಲು ಸಾಧ್ಯವಾಗಲಿಲ್ಲ. ಜೂನ್ 2 ರಂದು ಸೋನಿಯಾ ಗಾಂಧಿಗೆ ಕೋವಿಡ್ ಸೋಂಕು ತಗುಲಿತ್ತು.

ಜೂನ್ 13 ರಂದು ಇಡಿ ಮುಂದೆ ಹಾಜರಾಗುವಂತೆ ರಾಹುಲ್ ಗಾಂಧಿಗೆ ತಿಳಿಸಲಾಗಿದ್ದು, ಅವರು ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿದೆ. ಈ ಹಿಂದೆ ಜೂನ್ 2 ರಂದು ಅವರಿಗೆ ಸಮನ್ಸ್ ನೀಡಲಾಗಿತ್ತು. ಆದರೆ ಆ ಸಮಯದಲ್ಲಿ ಅವರು ವಿದೇಶದಲ್ಲಿದ್ದ ಕಾರಣ ಸಮಯ ವಿಸ್ತರಣೆಗೆ ಕೋರಿದ್ದರು.

ಕಾಂಗ್ರೆಸ್ ವಕ್ತಾರ ಪವನ್ ಖೇರಾ ಸುದ್ದಿಗಾರರೊಂದಿಗೆ ಮಾತನಾಡಿ, "ನಮ್ಮದು ಕಾನೂನು ಪಾಲಿಸುವ ಪಕ್ಷ. ನಾವು ನಿಯಮಗಳನ್ನು ಅನುಸರಿಸುತ್ತೇವೆ. ಆದ್ದರಿಂದ, ಅವರನ್ನು ಕರೆದರೆ, ಅವರು (ರಾಹಲ್‌ ಗಾಂಧಿ & ಸೋನಿಯಾ ಗಾಂಧಿ) ಹೋಗುತ್ತಾರೆ, ನಮ್ಮಲ್ಲಿ ಮುಚ್ಚಿಡಲು ಏನೂ ಇಲ್ಲ" ಎಂದು ಹೇಳಿದ್ದಾರೆ.

"ನಾವು ಅವರಂತೆ ಅಲ್ಲ. ಅಮಿತ್ ಶಾ ಅವರು 2002 ರಿಂದ 2013 ರಲ್ಲಿ ಓಡುತ್ತಿದ್ದುದು ನಮಗೆ ನೆನಪಿದೆ" ಎಂದು ಅವರು ಹೇಳಿದ್ದಾರೆ.

"ಸತ್ಯದ ಮಾರ್ಗವನ್ನು ಅನುಸರಿಸುವ ಜನರು ಎಂತಹವರು ಎಂಬುದರ ಕುರಿತು ಅವರು (ಬಿಜೆಪಿ) ನಮ್ಮಿಂದ ಕೆಲವು ಪಾಠಗಳನ್ನು ಕಲಿಯುತ್ತಾರೆ. ಅವರು ನಮ್ಮಿಂದ ಕಲಿಯಬೇಕು" ಎಂದು ಖೇರಾ ಹೇಳಿದ್ದಾರೆ

ಇಡಿ ಸಮನ್ಸ್ ಅನ್ನು 'ಸೇಡಿನ ರಾಜಕಾರಣ' ಎಂದು ಕಾಂಗ್ರೆಸ್ ಬಣ್ಣಿಸಿದ್ದು, ʼವಿರೋಧ ಪಕ್ಷದ ನಾಯಕರನ್ನು ಗುರಿಯಾಗಿಸುವುದು ಬಿಜೆಪಿ ಸೇಡಿನ ರಾಜಕಾರಣʼ ಎಂದು ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದ್ದಾರೆ.

"ನ್ಯಾಶನಲ್ ಹೆರಾಲ್ಡ್ ಪತ್ರಿಕೆಯನ್ನು 1942 ರಲ್ಲಿ ಪ್ರಾರಂಭಿಸಲಾಯಿತು. ಅಂದು ಬ್ರಿಟಿಷರು ಅದನ್ನು ತಡೆಯಲು ಯತ್ನಿಸಿದ್ದರು, ಇಂದು ಮೋದಿ ಸರ್ಕಾರ ಕೂಡ ಬ್ರಿಟಿಷರು ಮಾಡಿದ್ದನ್ನೇ ಮಾಡುತ್ತಿದೆ. ಈಗ ಈ ಉದ್ದೇಶಕ್ಕಾಗಿ ಇಡಿ ಬಳಸಲಾಗುತ್ತಿದೆ.” ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News