"ಗೋ ಸೇವೆ ಮಾಡಿ, ಮಹಿಳೆಯರ ಬಟ್ಟೆ ತೊಳೆಯಿರಿ, ರಾಖಿ ಕಟ್ಟಿ"

Update: 2022-06-09 15:58 GMT

ಜೂ.2ರಂದು ಅಲಹಾಬಾದ್ ಉಚ್ಚ ನ್ಯಾಯಾಲಯವು ಆರೋಪಿಯೋರ್ವನಿಗೆ ಜಾಮೀನು ಮಂಜೂರು ಮಾಡುವಾಗ ಕೆಲವು ವಿಲಕ್ಷಣ ಷರತ್ತುಗಳನ್ನು ವಿಧಿಸಿತ್ತು. ಬರೇಲಿಯ ನೋಂದಾಯಿತ ಗೋಶಾಲೆಯ ಹೆಸರಿನಲ್ಲಿ ಒಂದು ಲಕ್ಷ ರೂ.ಗಳನ್ನು ಠೇವಣಿಯಿರಿಸುವಂತೆ ಮತ್ತು ಒಂದು ತಿಂಗಳು ಹಸುಗಳ ಸೇವೆಯನ್ನು ಮಾಡುವಂತೆ ಅದು ಆರೋಪಿಗೆ ಸೂಚಿಸಿತ್ತು.

ಗಿಡಗಳನ್ನು ನೆಡುವಂತೆ ಅಥವಾ ಸಮುದಾಯ ಸೇವೆಯನ್ನು ಮಾಡುವಂತೆ ಅಥವಾ ಹಣವನ್ನು ದಾನ ಮಾಡುವಂತೆ ನ್ಯಾಯಾಲಯಗಳು ಆರೋಪಿಗಳಿಗೆ ಸೂಚಿಸಿದ್ದ ಇಂತಹುದೇ ಆದೇಶಗಳನ್ನು ನಾವು ಈ ಹಿಂದೆಯೂ ನೋಡಿದ್ದೇವೆ.

ಇಂತಹ ಹೆಚ್ಚಿನ ಜಾಮೀನು ಆದೇಶಗಳಲ್ಲಿ ಆರಂಭಿಕ ಹಂತದಲ್ಲಿಯೇ ಆರೋಪಿಗಳಲ್ಲಿ ಸುಧಾರಣೆಯನ್ನು ತರುವ ಪರಿಕಲ್ಪನೆ ಇದೆ. ಆದಾಗ್ಯೂ ಈ ಆದೇಶಗಳು ಆರೋಪಿಗಳು ಅಪರಾಧಿ ಎಂದು ಸಾಬೀತಾಗುವ ಮುನ್ನವೇ ಅವರನ್ನು ಶಿಕ್ಷಿಸುತ್ತವೆ ಮತ್ತು ಇದು ಆರೋಪಿಯೋರ್ವ ತಪ್ಪಿತಸ್ಥ ಎನ್ನುವುದು ಸಾಬೀತಾಗುವವರೆಗೆ ಆತ ನಿರಪರಾಧಿ ಆಗಿರುತ್ತಾನೆ ಎಂದು ಪರಿಗಣಿಸುವ ತತ್ತ್ವಕ್ಕೆ ವಿರುದ್ಧವಾಗಿದೆ. ಇಂತಹ ಹಲವಾರು ಆದೇಶಗಳನ್ನು ಸರ್ವೋಚ್ಚ ನ್ಯಾಯಾಲಯ ಮತ್ತು ವಿವಿಧ ಉಚ್ಚ ನ್ಯಾಯಾಲಯಗಳು ತಳ್ಳಿಹಾಕಿವೆ. 

ಸಮುದಾಯ ಸೇವೆ

ಸೆಪ್ಟಂಬರ್ 2020ರಲ್ಲಿ ಬಿಹಾರದ ಸ್ಥಳೀಯ ನ್ಯಾಯಾಲಯವೊಂದು ಲೈಂಗಿಕ ಕಿರುಕುಳದ ಆರೋಪವನ್ನು ಹೊತ್ತಿದ್ದ ಧೋಬಿಯೋರ್ವನಿಗೆ ಆರು ತಿಂಗಳ ಕಾಲ ತನ್ನ ಗ್ರಾಮದ ಎಲ್ಲ ಮಹಿಳೆಯರ ಬಟ್ಟೆಗಳನ್ನು ಉಚಿತವಾಗಿ ತೊಳೆದು ಇಸ್ತ್ರಿ ಮಾಡುವ ಷರತ್ತಿನಲ್ಲಿ ಜಾಮೀನು ಮಂಜೂರು ಮಾಡಿತ್ತು. ಈ ಕೆಲಸವನ್ನು ಮಾಡಿದ ಬಳಿಕ ಗ್ರಾಮದ ಸರಪಂಚನಿಂದ ಅಥವಾ ಗ್ರಾಮದ ಯಾವುದೇ ಗೌರವಾನ್ವಿತ ಸರಕಾರಿ ನೌಕರನಿಂದ ಪ್ರಮಾಣಪತ್ರವನ್ನು ಪಡೆದುಕೊಂಡು ಅದನ್ನು ಸೂಕ್ತ ನ್ಯಾಯಾಲಯಕ್ಕೆ ಸಲ್ಲಿಸುವಂತೆ ನ್ಯಾಯಾಧೀಶರು ತನ್ನ ಆದೇಶದಲ್ಲಿ ತಿಳಿಸಿದ್ದರು. 

ಇದೇ ನ್ಯಾಯಾಧೀಶರು ಮಹಿಳೆಯರ ಘನತೆಗೆ ಕುಂದುಂಟು ಮಾಡಿದ್ದ ಆರೋಪಿಯೋರ್ವನಿಗೆ ಚರಂಡಿಗಳನ್ನು ಸ್ವಚ್ಛ ಮಾಡುವಂತೆ ಜಾಮೀನು ಆದೇಶದಲ್ಲಿ ನಿರ್ದೇಶ ನೀಡಿದ್ದರು. ಇನ್ನೊಂದು ಪ್ರಕರಣದಲ್ಲಿಯೂ ಇದೇ ನ್ಯಾಯಾಧೀಶರು ಅಕ್ರಮ ಮದ್ಯ ಸಾಗಾಟದ ಆರೋಪಿಗೆ ಜಾಮೀನು ನೀಡುವಾಗ ಮೂರು ತಿಂಗಳ ಕಾಲ ಬಡಮಕ್ಕಳ ಶಿಕ್ಷಣ ಶುಲ್ಕವನ್ನು ಪಾವತಿಸುವಂತೆ ಸೂಚಿಸಿದ್ದರು.

ಜುಲೈ 2020ರಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯವು 15ಕ್ಕೂ ಹೆಚ್ಚಿನ ಜಾಮೀನು ಆದೇಶಗಳಲ್ಲಿ ತಮ್ಮ ನಿವಾಸಗಳ ಸಮೀಪದ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಶ್ರಮದಾನ ಮಾಡುವಂತೆ ಮತ್ತು ಆರ್ಥಿಕ ನೆರವು ನೀಡುವಂತೆ ಆರೋಪಿಗಳಿಗೆ ನಿರ್ದೇಶ ನೀಡಿತ್ತು. ಇದಲ್ಲದೆ ಹಲವಾರು ಪ್ರಕರಣಗಳಲ್ಲಿ ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಸ್ವಯಂಸೇವಕರಾಗಿ ದುಡಿಯುವಂತೆ ಆರೋಪಿಗಳಿಗೆ ಉಚ್ಚ ನ್ಯಾಯಾಲಯವು ನಿರ್ದೇಶ ನೀಡಿತ್ತು.

2019ರಲ್ಲಿ ರಾಂಚಿಯ ನ್ಯಾಯಾಲಯವು ಕೋಮುದ್ವೇಷದ ಪೋಸ್ಟ್ ಗಳನ್ನು ಮಾಡಿದ್ದಕ್ಕಾಗಿ ಬಂಧಿಸಲ್ಪಟ್ಟಿದ್ದ ಮಹಿಳೆಗೆ ಜಾಮೀನು ಮಂಜೂರು ಮಾಡುವಾಗ ವಿವಿಧ ಗ್ರಂಥಾಲಯಗಳಿಗೆ ಕುರ್‌ಆನ್‌ ನ ಐದು ಪ್ರತಿಗಳನ್ನು ದೇಣಿಗೆ ನೀಡುವಂತೆ ಷರತ್ತು ವಿಧಿಸಿತ್ತು. ಆದರೆ ಪ್ರತಿಭಟನೆಗಳು ಮತ್ತು ತನಿಖಾಧಿಕಾರಿಯ ಮನವಿಯ ಬಳಿಕ ಈ ಷರತ್ತನ್ನು ಹಿಂದೆಗೆದುಕೊಳ್ಳಲಾಗಿತ್ತು.

ಹಣವನ್ನು ದೇಣಿಗೆ ನೀಡಿ

ಹಲವಾರು ಪ್ರಕರಣಗಳಲ್ಲಿ ನ್ಯಾಯಾಲಯಗಳು, ಸಾಮಾನ್ಯವಾಗಿ ದತ್ತಿ ಉದ್ದೇಶಗಳಿಗಾಗಿ, ಹಣವನ್ನು ದೇಣಿಗೆ ನೀಡುವಂತೆ ಆರೋಪಿಗಳಿಗೆ ಸೂಚಿಸುತ್ತವೆ. ಮೇ 2020ರಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ಏಕ ನ್ಯಾಯಾಧೀಶ ಪೀಠವು ಕನಿಷ್ಠ 17 ಜಾಮೀನು ಆದೇಶಗಳಲ್ಲಿ ವಲಸೆ ಕಾರ್ಮಿಕರು ಸೇರಿದಂತೆ ದುರ್ಬಲ ವರ್ಗಗಳಿಗಾಗಿ ಆಹಾರವನ್ನು ತಯಾರಿಸಿ ವಿತರಿಸಲು ಯಾವುದೇ ಸರಕಾರಿ ಸಂಸ್ಥೆ ಅಥವಾ ಎನ್ಜಿಒ ಬಳಸಿಕೊಳ್ಳುವಂತಾಗಲು ಜಿಲ್ಲಾಧಿಕಾರಿಗಳ ಬಳಿ ಹಣವನ್ನು ಠೇವಣಿ ಇರಿಸುವಂತೆ ಆರೋಪಿಗಳಿಗೆ ನಿರ್ದೇಶ ನೀಡಿತ್ತು.

ಎಪ್ರಿಲ್ 2020ರಲ್ಲಿ ಜಾರ್ಖಂಡ್ ಉಚ್ಚ ನ್ಯಾಯಾಲಯವು ಪಿಎಂ-ಕೇರ್ಸ್ ಫಂಡ್‌ಗೆ  ತಲಾ 35,000 ರೂ.ಗಳ ದೇಣಿಗೆಯನ್ನು ಸಲ್ಲಿಸುವಂತೆ ಆರೋಪಿಗಳಿಗೆ ಜಾಮೀನು ಷರತ್ತು ವಿಧಿಸಿತ್ತು. ಇದರ ಜೊತೆಗೆ ಆರೋಗ್ಯ ಸೇತು ಆ್ಯಪ್ ಅನ್ನು ತಮ್ಮ ಮೊಬೈಲ್ ಗಳಲ್ಲಿ ಡೌನ್ಲೋಡ್ ಮಾಡಿಕೊಳ್ಳುವಂತೆಯೂ ಅದು ಆರೋಪಿಗಳಿಗೆ ಸೂಚಿಸಿತ್ತು. ಇದು ಹಲವಾರು ಪ್ರಕರಣಗಳಲ್ಲಿ ಕಂಡು ಬಂದ ಇನ್ನೊಂದು ಸಾಮಾನ್ಯ ಜಾಮೀನು ಷರತ್ತು ಆಗಿದೆ.

ಇನ್ನೊಂದು ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯವು ಭಾರತದಲ್ಲಿ ಅಥವಾ ವಿದೇಶದಲ್ಲಿ (ಚೀನಾ ಹೊರತುಪಡಿಸಿ) ತಯಾರಾದ,ಕನಿಷ್ಠ 25,000 ರೂ. ಮೌಲ್ಯದ ಕಪ್ಪು ಬಣ್ಣದ ಎಲ್ಇಡಿ ಟಿವಿಯನ್ನು ಖರೀದಿಸುವಂತೆ ಆರೋಪಿಗೆ ಸೂಚಿಸಿತ್ತು.

ಗಿಡಗಳನ್ನು ನೆಡಿ

ನ್ಯಾಯಾಲಯಗಳು ಆರೋಪಿಗಳಿಗೆ ಗಿಡಗಳನ್ನು ನೆಡುವಂತೆ ಸೂಚಿಸಿದ್ದು ಇಂತಹ ವಿಲಕ್ಷಣ ಜಾಮೀನು ಆದೇಶಗಳಲ್ಲಿಯ ಇನ್ನೊಂದು ಸಾಮಾನ್ಯ ಅಂಶವಾಗಿದೆ. ಎಪ್ರಿಲ್ ನಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯವು ಕೊಲೆಯತ್ನ ಪ್ರಕರಣದಲ್ಲಿ ಆರೋಪಿಗೆ ಜಾಮೀನು ಮಂಜೂರು ಮಾಡುವಾಗ ಹಣ್ಣಿನ ಅಥವಾ ಬೇವಿನ ಅಥವಾ ಅರಳಿ ಮರದ 10 ಸಸಿಗಳನ್ನು ನೆಡುವಂತೆ ಮತ್ತು ಸ್ವಂತ ಖರ್ಚಿನಲ್ಲಿ ಅವುಗಳನ್ನು ಪೋಷಿಸುವಂತೆ ಷರತ್ತು ವಿಧಿಸಿತ್ತು.

ಇದೇ ಪೀಠವು ಮಾರ್ಚ್ ನಲ್ಲಿ ಜಾಮೀನು ಆದೇಶವೊಂದರಲ್ಲಿ ಇಂತಹುದೇ ಐದು ಗಿಡಗಳನ್ನು ನೆಡುವಂತೆ ಕೊಲೆ ಆರೋಪಿಯೋರ್ವನಿಗೆ ನಿರ್ದೇಶ ನೀಡಿತ್ತು. ಗಿಡಗಳು ಶೀಘ್ರ ಬೆಳೆಯುವಂತಾಗಲು ಅವು ಆರರಿಂದ ಎಂಟು ಅಡಿ ಎತ್ತರವಿರಬೇಕು ಮತ್ತು ಅವುಗಳ ರಕ್ಷಣೆಗೆ ಬೇಲಿಯನ್ನು ಅಳವಡಿಸಬೇಕು ಎಂದು ಅದು ಸೂಚಿಸಿತ್ತು. ಅಲ್ಲದೆ ಜಿಯೊ-ಟ್ಯಾಗಿಂಗ್ ಮೂಲಕ ಉಚ್ಚ ನ್ಯಾಯಾಲಯವು ಗಿಡಗಳ ಮೇಲೆ ನಿಗಾ ಇರಿಸುವಂತಾಗಲು ಆ್ಯಪ್ವೊಂದನ್ನು ಡೌನ್ಲೋಡ್ ಮಾಡಿಕೊಳ್ಳುವಂತೆಯೂ ಅದು ತಿಳಿಸಿತ್ತು. ಈ ಷರತ್ತುಗಳನ್ನು ಪೂರೈಸದಿದ್ದರೆ ಜಾಮೀನು ರದ್ದುಗೊಳಿಸುವುದಾಗಿ ಅದು ಎಚ್ಚರಿಕೆ ನೀಡಿತ್ತು.

2020ರಲ್ಲಿ ಒರಿಸ್ಸಾ ಉಚ್ಚ ನ್ಯಾಯಾಲಯವು ಕೊಲೆ ಯತ್ನದ ಆರೋಪಿಯೋರ್ವನ ವಿರುದ್ಧ ಮೇಲ್ನೋಟಕ್ಕೆ ಪ್ರಕರಣವಿಲ್ಲ ಎನ್ನುವುದನ್ನು ಗಮನಿಸಿದ ಬಳಿಕ 100 ಸಸಿಗಳನ್ನು ನೆಡುವಂತೆ ಆತನಿಗೆ ಆದೇಶಿಸಿತ್ತು.

ಆರೋಪಿಗಳ ಸುಧಾರಣೆ

ಇಂತಹ ಹೆಚ್ಚಿನ ಆದೇಶಗಳು ಆರೋಪಿಗಳಲ್ಲಿ ಸುಧಾರಣೆಗಳನ್ನು ತರುವ ಉದ್ದೇಶವನ್ನು ಹೊಂದಿದ್ದವು ಮತ್ತು ಜಾಮೀನು ಷರತ್ತುಗಳು ಆರೋಪಿಯ ಮೇಲೆ ಹೊರಿಸಲಾದ ಅಪರಾಧದ ಆರೋಪಕ್ಕೆ ಸಂಬಂಧಿಸಿದ್ದವು. ಉದಾಹರಣೆಗೆ ಅಲಹಾಬಾದ್ ಉಚ್ಚ ನ್ಯಾಯಾಲಯವು ಗೋಶಾಲೆಯಲ್ಲಿ ಸೇವೆ ಸಲ್ಲಿಸುವಂತೆ ಆರೋಪಿಗೆ ನಿರ್ದೇಶಿಸಿದ್ದು,ಆತನ ವಿರುದ್ಧ ಗೋಹತ್ಯೆ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
 
ಇನ್ನೊಂದು ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯವು ಮಹಿಳೆಗೆ ಕಿರುಕುಳ ನೀಡಿದ್ದ ವ್ಯಕ್ತಿಗೆ ಜಾಮೀನು ಮಂಜೂರು ಮಾಡುವಾಗ ತನಗೆ ರಾಖಿಯನ್ನು ಕಟ್ಟಲು ಮಹಿಳೆಗೆ ಕೇಳಿಕೊಳ್ಳುವಂತೆ ಮತ್ತು ಆಕೆಯನ್ನು ರಕ್ಷಿಸುವುದಾಗಿ ವಚನ ನೀಡುವಂತೆ ಷರತ್ತು ವಿಧಿಸಿತ್ತು. ಬಳಿಕ ಇದನ್ನು ತಳ್ಳಿಹಾಕಿದ್ದ ಸರ್ವೋಚ್ಚ ನ್ಯಾಯಾಲಯವು ಲೈಂಗಿಕ ಕಿರುಕುಳದ ಪ್ರಕರಣಗಳನ್ನು ನ್ಯಾಯಾಲಯಗಳು ಹೇಗೆ ನಿರ್ವಹಿಸಬೇಕು ಎಂಬ ಬಗ್ಗೆ ಮಾರ್ಗಸೂಚಿಗಳನ್ನು ಹೊರಡಿಸಿತ್ತು.

ಸಾಮಾಜಿಕ ಮಾಧ್ಯಮಗಳಿಂದ ದೂರವಿರಿ

ಕೆಲವು ಪ್ರಕರಣಗಳಲ್ಲಿ ನ್ಯಾಯಾಲಯಗಳು ರಾಜಕಾರಣಿಗಳ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ಪೋಸ್ಟ್ ಮಾಡಿದ್ದಕ್ಕಾಗಿ ಪ್ರಕರಣ ದಾಖಲಾಗಿದ್ದ ಆರೋಪಿಗಳಿಗೆ ಸಾಮಾಜಿಕ ಮಾಧ್ಯಮಗಳ ಬಳಕೆಯಿಂದ ದೂರವಿರುವಂತೆ ಜಾಮೀನು ಷರತ್ತುಗಳನ್ನು ವಿಧಿಸಿವೆ.
2020ರಲ್ಲಿ ಮದ್ರಾಸ್ ಉಚ್ಚ ನ್ಯಾಯಾಲಯವು ನರೇಂದ್ರ ಮೋದಿಯವರ ವಿರುದ್ಧ ಫೇಸ್ಬುಕ್ ಪೋಸ್ಟ್ ಗಾಗಿ ಒಂದು ವರ್ಷದವರೆಗೆ ಸಾಮಾಜಿಕ ಮಾಧ್ಯಮಗಳನ್ನು ಬಳಸದಂತೆ ಆರೋಪಿಗೆ ಜಾಮೀನು ಷರತ್ತು ವಿಧಿಸಿತ್ತು. 

ಇನ್ನೊಂದು ಪ್ರಕರಣದಲ್ಲಿ ಅಲಹಾಬಾದ್ ಉಚ್ಚ ನ್ಯಾಯಾಲಯವು ಎರಡು ವರ್ಷಗಳ ಕಾಲ ಸಾಮಾಜಿಕ ಮಾಧ್ಯಮ ಬಳಸದಂತೆ ಆರೋಪಿಗೆ ನಿರ್ದೇಶ ನೀಡಿತ್ತು. ಇಂತಹ ನಿಷೇಧಗಳು ಕಾನೂನುಬದ್ಧವೇ ಎಂದು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯೊಂದು ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿಯಿದೆ.

ವಿಚಾರಣೆಗೆ ಮೊದಲೇ ತಪ್ಪಿತಸ್ಥ

ಕೆಲವೊಂದು ಅಪವಾದಗಳನ್ನು ಹೊರತುಪಡಿಸಿದರೆ ವ್ಯಕ್ತಿಯೋರ್ವ ತಪ್ಪಿತಸ್ಥ ಎನ್ನುವುದು ಸಾಬೀತಾಗುವವರೆಗೆ ಆತ ಅಮಾಯಕ ಎಂದು ಕಾನೂನು ಪರಿಗಣಿಸುತ್ತದೆ. ಸಮುದಾಯ ಸೇವೆ ಅಥವಾ ಹಣದ ದೇಣಿಗೆಯಂತಹ ಇಂತಹ ಹಲವಾರು ಷರತ್ತುಗಳು ಆತ/ಆಕೆ ತಪ್ಪಿತಸ್ಥ ಎನ್ನುವುದು ನಿರ್ಧಾರವಾಗುವ ಮೊದಲೇ ಶಿಕ್ಷೆಯನ್ನು ವಿಧಿಸುವುದಕ್ಕೆ ಸಮನಾಗುತ್ತವೆ.

ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಗಳಿಗೆ ಜಾಮೀನು ನೀಡಲು ನಿರ್ದಿಷ್ಟ ಷರತ್ತುಗಳನ್ನು ಉಲ್ಲೇಖಿಸಲಾಗಿರುವ ಸಿಪಿಸಿಯ ಕಲಂ 437(3) ಮತ್ತು 439 ನ್ಯಾಯದ ಹಿತಾಸಕ್ತಿಯಲ್ಲಿ, ಅಗತ್ಯವೆನಿಸಿದ ಇತರ ಯಾವುದೇ ಷರತ್ತುಗಳನ್ನೂ ವಿಧಿಸಲು ನ್ಯಾಯಾಲಯಗಳಿಗೆ ಅವಕಾಶ ನೀಡಿದೆ ಮತ್ತು ಮೇಲೆ ಉಲ್ಲೇಖಿಸಲಾಗಿರುವ ಷರತ್ತುಗಳನ್ನು ವಿಧಿಸಲು ನ್ಯಾಯಾಯವು ‘ಯಾವುದೇ ಷರತ್ತು’ನಂತಹ ಶಬ್ದಗಳನ್ನು ಬಳಸಿಕೊಂಡಿದ್ದವು.

ಈ ಕಲಮ್ಗಳನ್ನು ಬಳಸಿಕೊಂಡು ತಮಗೆ ಸೂಕ್ತವೆನಿಸಿದ ಜಾಮೀನು ಷರತ್ತುಗಳನ್ನು ವಿಧಿಸಲು ನ್ಯಾಯಾಲಯಗಳು ಪ್ರಯತ್ನಿಸುತ್ತವೆ. ಆದಾಗ್ಯೂ ಉನ್ನತ ನ್ಯಾಯಾಲಯಗಳು ಆಗಾಗ್ಗೆ ಅವುಗಳನ್ನು ತಳ್ಳಿಹಾಕುತ್ತಲೇ ಬಂದಿವೆ. ಕಳೆದ ಮೇ ತಿಂಗಳಿನಲ್ಲಿ ಭೂ ಕಬಳಿಕೆ ಪ್ರಕರಣದಲ್ಲಿ ಎಸ್ಪಿ ನಾಯಕ ಅಝಂ ಖಾನ್ ಗೆ ಜಾಮೀನು ನೀಡುವಾಗ ಅಲಹಾಬಾದ್ ಉಚ್ಚ ನ್ಯಾಯಾಲಯವು,ಭೂಮಿಯ ಮಾಪನ,ಆವರಣ ಗೋಡೆ ನಿರ್ಮಾಣ ಮತ್ತು ವೈರಿಂಗ್ ಕಾರ್ಯಗಳಿಗೆ ಸಂಪೂರ್ಣವಾಗಿ ಸಹಕರಿಸುವಂತೆ ಷರತ್ತು ವಿಧಿಸಿತ್ತು.

ಉಚ್ಚ ನ್ಯಾಯಾಲಯವು ವಿಧಿಸಿರುವ ಜಾಮೀನು ಷರತ್ತುಗಳು ಅಳತೆ ತಪ್ಪಿವೆ ಮತ್ತು ಆರೋಪಿಯ ಉಪಸ್ಥಿತಿಯನ್ನು ಖಚಿತಪಡಿಸಿಕೊಳ್ಳಲು ಮತ್ತು ವಿಚಾರಣೆಯ ನ್ಯಾಯಸಮ್ಮತತೆಗೆ ಅಡ್ಡಿಯಾಗದಂತೆ ನೋಡಿಕೊಳ್ಳಲು ಹೇರಬೇಕಿರುವ ಷರತ್ತುಗಳೊಂದಿಗೆ ಸಮಂಜಸವಾದ ಸಂಬಂಧವನ್ನು ಹೊಂದಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿತ್ತು. ವಿಚಾರಣೆ ಪ್ರಕ್ರಿಯೆಯನ್ನು ಮುಂದುವರಿಸಲು ಮಾತ್ರ ಜಾಮೀನು ನೀಡಬೇಕು ಮತ್ತು ಆರೋಪಿಯ ಹಾಜರಿಯನ್ನು ಖಚಿತಪಡಿಸಿಕೊಳ್ಳುವ ಜಾಮೀನಿನ ಉದ್ದೇಶವು ದಂಡನಾತ್ಮಕ ಅಥವಾ ತಡೆಗಟ್ಟುವಿಕೆ ಆಗುವಂತಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಹಲವಾರು ಪ್ರಕರಣಗಳಲ್ಲಿ ಹೇಳಿದೆ.

ಹಲವಾರು ಪ್ರಕರಣಗಳಲ್ಲಿ ಆರೋಪಿಗಳಿಗೆ ವಿಧಿಸಲಾಗಿದ್ದ ದಂಡಗಳನ್ನೂ ರದ್ದುಗೊಳಿಸಲಾಗಿದೆ. ಮಧ್ಯಪ್ರದೇಶ ಮತ್ತು ಕೇರಳದಲ್ಲಿಯ ಸ್ಥಳೀಯ ನ್ಯಾಯಾಲಯಗಳು ಪಿಎಮ್-ಕೇರ್ಸ್ ಫಂಡ್‌ಗೆ  ದೇಣಿಗೆ ನೀಡುವಂತೆ ಆರೋಪಿಗಳಿಗೆ ಜಾಮೀನು ಷರತ್ತುಗಳನ್ನು ವಿಧಿಸಿದ್ದವು. ಆದರೆ ಈ ಷರತ್ತುಗಳನ್ನು ರಾಜ್ಯಗಳ ಉಚ್ಚ ನ್ಯಾಯಾಲಯಗಳು ತಳ್ಳಿಹಾಕಿದ್ದವು. ಜಾರ್ಖಂಡ್ ಉಚ್ಚ ನ್ಯಾಯಾಲಯವು ಸಹ ಅಬಕಾರಿ ಇಲಾಖೆಯಲ್ಲಿ ಠೇವಣಿಯಿರಿಸಬೇಕಿದ್ದ,60,000 ರೂ.ಗಳ ದಂಡವನ್ನು ವಿಧಿಸಿದ ಜ್ಯುಡಿಷಿಯಲ್ ಕಮಿಷನರ್ ಆದೇಶವನ್ನು ತಳ್ಳಿಹಾಕಿತ್ತು. ಈ ದಂಡವು ಶಿಕ್ಷೆಯಾಗಿದೆ ಮತ್ತು ತಪ್ಪು ಸಾಬೀತಾಗದೆ ಈ ಶಿಕ್ಷೆಯನ್ನು ವಿಧಿಸುವಂತಿಲ್ಲ ಎಂದು ಅದು ಸ್ಪಷ್ಟಪಡಿಸಿತ್ತು.

Writer - *ಉಮಂಗ್ ಪೊದ್ದಾರ್ (scroll.in)

contributor

Editor - *ಉಮಂಗ್ ಪೊದ್ದಾರ್ (scroll.in)

contributor

Similar News