ಹಳೆಯ ವಾಹನಗಳನ್ನು ಗುಜರಿಗೆ ಹಾಕಲು ಮಾಲಕರು ಹಿಂದೇಟು: ನೂತನ ಸಮೀಕ್ಷೆ ವರದಿ
ಹೊಸದಿಲ್ಲಿ, ಜೂ.9: ಭಾರತದ ವಾಯುಮಾಲಿನ್ಯ ಸಮಸ್ಯೆಯನ್ನು ನಿವಾರಿಸುವ ಪ್ರಯತ್ನವಾಗಿ ಲಕ್ಷಾಂತರ ಹಳೆಯ ಮಾಲಿನ್ಯಕಾರಕ ವಾಹನಗಳನ್ನು ಹಿಂತೆಗೆದುಕೊಳ್ಳುವ ಭಾರತದ ಯೋಜನೆಯು ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ಅಟೋಮೊಬೈಲ್ ವಾಹನಗಳ ವಯಸ್ಸನ್ನು ಆಧರಿಸಿದ ಅಟೋಮೊಬೈಲ್ ಅನ್ನು ಗುಜರಿಗೆ ಮಾರಾಟ ಮಾಡಲು ಬಹುತೇಕ ವಾಹನ ಮಾಲಕರು ಆಸಕ್ತರಾಗಿಲ್ಲವೆಂದು ಇತ್ತೀಚಿನ ಸಮೀಕ್ಷೆಯೊಂದು ಬಹಿರಂಗಪಡಿಸಿದೆ.
‘ಲೋಕಲ್ ಸರ್ಕಲ್ಸ್’ ಸಂಸ್ಥೆಯು ನಡೆಸಿದ ಸಮೀಕ್ಷೆಯಲ್ಲಿ ಪಾಲ್ಗೊಂಡ 10,543 ವಾಹನ ಮಾಲಕರ ಪೈಕಿ ಶೇ.57ರಷ್ಟು ಮಾಲಕರು, ವಾಹನವನ್ನು ತ್ಯಜಿಸುವುದಕ್ಕೆ ಅದು ಕ್ರಮಿಸಿದ ಒಟ್ಟು ಮೈಲುಗಳನ್ನು ಆಧರಿಸಿರಬೇಕೇ ಹೊರತು ಅದರ ವಯಸ್ಸನ್ನಲ್ಲ ಎಂದು ಅಭಿಪ್ರಾಯಿಸಿದ್ದಾರೆ.
20 ವರ್ಷಗಳಿಗಿಂತಲೂ ಹಳೆಯದಾದ ಖಾಸಗಿ ವಾಹನಗಳು ಹಾಗೂ 15 ವರ್ಷಗಳಿಗಿಂತಲೂ ಹಳೆಯದಾದ ವಾಣಿಜ್ಯ ವಾಹನಗಳು ರಸ್ತೆಯಲ್ಲಿ ಸಂಚರಿಸಬೇಕಾದರೆ ಅವು ಫಿಟ್ನೆಸ್ ಪರೀಕ್ಷೆಯಲ್ಲಿ ತೇರ್ಗಡೆಗೊಳ್ಳುವುದನ್ನು ಕೇಂದ್ರ ಸರಕಾರ ಕಡ್ಡಾಯಗೊಳಿಸಿದೆ.
ಸಮೀಕ್ಷೆಯಲ್ಲಿ ಪಾಲ್ಗೊಂಡ ಅರ್ಧಾಂಶದಷ್ಟು ಗ್ರಾಹಕರು ತಮ್ಮ ಒಡೆತನದ ಕಾರುಗಳ ಸಂಖ್ಯೆಯನ್ನು ಕಡಿಮೆಗೊಳಿಸುವ ಬಗ್ಗೆ ತಾವು ಯೋಚಿಸುತ್ತಿರುವುದಾಗಿ ಹೇಳಿದ್ದಾರೆ. ಹಳೆಯ ವಾಹನಗಳನ್ನು ಇರಿಸಿಕೊಳ್ಳುವುದು ಮುಂದಿನ ದಿನಗಳಲ್ಲಿ ದುಬಾರಿಯಾಗಲಿದೆಯೆಂಬುದು ಅವರ ಅಭಿಪ್ರಾಯವಾಗಿದೆ. 15 ವರ್ಷಗಳಿಗೂ ಹೆಚ್ಚು ಹಳೆಯದಾದ ಕಾರುಗಳು ನೋಂದಣಿಯ ನವೀಕರಣಕ್ಕೆ ಅವುಗಳ ಮಾಲಕರು ಎಂಟು ಪಟ್ಟು ಅಧಿಕ ಹಣವನ್ನು ವ್ಯಯಿಸಬೇಕಾಗುತ್ತದೆ.
ಮಾಲಿನ್ಯಯುಕ್ತ ವಾಹನಗಳನ್ನು ತೊರೆಯುವುದಕ್ಕೆ ಸಾರ್ವಜನಿಕರಿಗಿರುವ ಆಸಕ್ತಿಯ ಕೊರತೆಯಿಂದಾಗಿಯೇ 2070ರಲ್ಲಿ ಭಾರತವನ್ನು ಇಂಗಾಲಮುಕ್ತ ದೇಶವನ್ನಾಗಿ ಮಾಡುವ ಭಾರತದ ಮಹತ್ವಾಕಾಂಕ್ಷೆಗೆ ಸಂಭಾವ್ಯ ಹಿನ್ನಡೆಯಾಗಲಿದೆ ಎಂದು ಸಮೀಕ್ಷಾ ವರದಿ ತಿಳಿಸಿದೆ.2025ರ ವೇಳೆಗೆ ಅವಧಿ ಮುಕ್ತಾಯದ ಅಂಚಿನಲ್ಲಿರುವ 2 ಕೋಟಿಗೂ ಅಧಿಕ ವಾಹನಗಳು ಭಾರತದಲ್ಲಿ ಇರಲಿದ್ದು, ಪರಿಸರಕ್ಕೆ ಅತಿದೊಡ್ಡ ಹಾನಿಯುಂಟು ಮಾಡಲಿದೆಯೆಂದು ವಿಜ್ಞಾನ ಹಾಗೂ ಪರಿಸರದ ಭವಿಷ್ಯ ಕುರಿತ ರಾಷ್ಟ್ರೀಯ ಕೇಂದ್ರ ಹೇಳಿದೆ.
ವಾಹನಗಳನ್ನು ಗುಜರಿಗೆ ಹಾಕುವುದಕ್ಕೆ ಅವುಗಳ ವಯಸ್ಸು ಉತ್ತಮ ಮಾನದಂಡವಲ್ಲವೆಂದು ಮಾರುತಿ ಸುಝುಕಿ ಇಂಡಿಯಾ ಲಿಮಿಟೆಡ್ ಚೇರ್ಮನ್ ಆರ್.ಸಿ. ಭಾರ್ಗವ್ ಅವರು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ರಸ್ತೆಗಳಲ್ಲಿ ವಾಹನಗಳು ಸುರಕ್ಷಿತವಾಗಿ ಓಡುವ ಸಾಮರ್ಥ್ಯವನ್ನು ಹೊಂದಿದ್ದರೆ, ಅವು ರಸ್ತೆಯ ಇತರ ಬಳಕೆದಾರನ್ನು ಅಪಾಯಕ್ಕೊಡ್ಡಲಾರದು ಎಂಬುದೇ ಇಲ್ಲಿರುವ ತರ್ಕವಾಗಿದೆ. ಒಂದು ವಾಹನವನ್ನು ರಿಪೇರಿಗೊಳಿಸುವುದರಿಂದ ಹಾಗೂ ಅದಕ್ಕೆ ಫಿಟ್ನೆಸ್ ಸರ್ಟಿಫಿಕೇಟ್ ಪಡೆಯುವುದು ಆರ್ಥಿಕವಾಗಿ ಯೋಗ್ಯವಲ್ಲವೆಂಬುದನ್ನು ಬಳಕೆದಾರನಿಗೆ ಅರಿವಾದಾಗ ಆತ ವಾಹನವನ್ನು ಸ್ವ ಇಚ್ಛೆಯಿಂದ ಗುಜರಿಗೆ ಹಾಕುತ್ತಾನೆ ಎಂದು ಭಾರ್ಗವ್ ಅಭಿಪ್ರಾಯಿಸುತ್ತಾರೆ.