2008ರ ಪ್ಯಾಕೇಜ್ ಅಡಿಯಲ್ಲಿ ಉದ್ಯೋಗದಲ್ಲಿರುವ ಕಾಶ್ಮೀರಿ ಪಂಡಿತರಿಗೆ ಸಾಮಾನ್ಯ ಅಧಿಕಾರಿಗಳಂತೆ ಭಡ್ತಿ

Update: 2022-06-09 16:47 GMT

ಜಮ್ಮು, ಜೂ. 9: ಪ್ರಧಾನ ಮಂತ್ರಿ ಅವರ 2008ರ ಪುನರ್ವಸತಿ ಪ್ಯಾಕೇಜ್ನ ಅಡಿಯಲ್ಲಿ ಉದ್ಯೋಗಿಗಳಾಗಿರುವ ಕಾಶ್ಮೀರಿ ಪಂಡಿತರ ಪ್ರತ್ಯೇಕ ಹಿರಿತನ ಪಟ್ಟಿಗಾಗಿನ ಯೋಜನೆಗೆ ಜಮ್ಮು ಹಾಗೂ ಕಾಶ್ಮೀರ ಆಡಳಿತಾತ್ಮಕ ಮಂಡಳಿ ಬುಧವಾರ ಅನುಮೋದನೆ ನೀಡಿದೆ.

ಇನ್ನು ಮುಂದೆ ಕಾಶ್ಮೀರಿ ಪಂಡಿತ ಉದ್ಯೋಗಿಗಳು ಸಾಮಾನ್ಯ ಸರಕಾರಿ ನೌಕರರಂತೆ ಭಡ್ತಿಗೆ ಅರ್ಹರಾಗಲಿದ್ದಾರೆ. ಹಿಂದೆ ಈ ಪ್ಯಾಕೇಜ್ ಅಡಿಯಲ್ಲಿ ಕಾಶ್ಮೀರಿ ಪಂಡಿತರು ನಿಗದಿತ ಹುದ್ದೆ ಪಡೆದಿದ್ದರು. ಭಯೋತ್ಪಾದನೆಯ ಹಾವಳಿ ಹೆಚ್ಚಿದ ಬಳಿಕ 1990ರಲ್ಲಿ ಕಣಿವೆ ತ್ಯಜಿಸಿದ ಕಾಶ್ಮೀರಿ ವಲಸಿಗರಿಗೆ ಕೇಂದ್ರ ಸರಕಾರ 2008ರಲ್ಲಿ ಪುನರ್ವಸತಿ ಪ್ಯಾಕೇಜ್ ಘೋಷಿಸಿತ್ತು. ಈ ಪ್ಯಾಕೇಜ್ ಅನೇಕ ಸೌಲಭ್ಯಗಳ ನಡುವೆ ವಲಸಿಗರಿಗೆ 6,000 ಉದ್ಯೋಗಗಳನ್ನು ನೀಡುವ ಹಾಗೂ ಹೆಚ್ಚುವರಿ ಹುದ್ದೆಗಳನ್ನು ಸೃಷ್ಟಿಸುವ ಉದ್ದೇಶ ಹೊಂದಿತ್ತು.

ಪ್ರಸ್ತುತ ಈ ಪ್ಯಾಕೇಜ್ ಅಡಿಯಲ್ಲಿ 5,928 ವ್ಯಕ್ತಿಗಳು ಉದ್ಯೋಗಿಗಳಾಗಿದ್ದಾರೆ ಎಂದು ಅನಾಮಿಕ ಅಧಿಕಾರಿಗಳು ಹೇಳಿರುವುದಾಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಬುಧವಾರ ಘೋಷಿಸಲಾದ ಯೋಜನೆ ಈ ಪ್ಯಾಕೇಜ್ ಅಡಿಯಲ್ಲಿ ನಿಯೋಜಿತರಾದ ಉದ್ಯೋಗಿಗಳ ವೃತ್ತಿ ಜೀವನದಲ್ಲಿನ ಅಡೆತಡೆಗಳನ್ನು ನಿವಾರಿಸಲಿದೆ ಎಂದು ಎಂದು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರ ಕಚೇರಿ ತಿಳಿಸಿದೆ.

ಆದರೆ, ಈ ಭಡ್ತಿ ಹಿರಿತನ ಹಾಗೂ ನೇಮಕಾತಿ ನಿಯಮದಂತೆ ಅರ್ಹತೆಯ ಅಗತ್ಯತೆಯನ್ನು ಅವಲಂಬಿಸಲಿದೆ ಎಂದು ಅದು ತಿಳಿಸಿದೆ. ಈ ಪ್ಯಾಕೇಜ್ ಅಡಿಯ ಎಲ್ಲ ಹುದ್ದೆಗಳನ್ನು ಜಮ್ಮು ಹಾಗೂ ಕಾಶ್ಮೀರ ವಿಭಾಗೀಯ ಹುದ್ದೆಗಳಾಗಿ ಮರು ಗೊತ್ತುಪಡಿಸಿದೆ. ಈ ಹಿಂದೆ ಇವುಗಳು ಜಿಲ್ಲಾ ಮಟ್ಟದ ಹುದ್ದೆಗಳಾಗಿದ್ದವು.

ಇದರರ್ಥ ಈ ಪ್ಯಾಕೇಜ್ನ ಅಡಿಯ ಉದ್ಯೋಗಿಗಳನ್ನು ಈಗ ಕಾಶ್ಮೀರ ಕಣಿವೆಯ ಯಾವುದೇ ಜಿಲ್ಲೆಗಳಿಗೆ ನಿಯೋಜಿಸಬಹುದು. ಈ ಹಿಂದೆ ಅವರನ್ನು ಬೇರೆಡೆ ವಲಸೆ ಹೋಗುವ ಮೊದಲು ಅವರು ಜೀವಿಸುತ್ತಿದ್ದ ಜಿಲ್ಲೆಗಳಲ್ಲಿ ಮಾತ್ರ ನಿಯೋಜಿಸಬಹುದಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News