2023ರ ಚುನಾವಣೆಯಲ್ಲಿ ಬಿಜೆಪಿಯು ಇದೇ ರೀತಿಯ ಸೋಲನಭವಿಸುತ್ತದೆ: ರಾಜಸ್ಥಾನ ಸಿಎಂ ಅಶೋಕ್‌ ಗೆಹ್ಲೋಟ್‌

Update: 2022-06-10 16:14 GMT
Photo: Twitter/ashokgehlot51

ಜೈಪುರ್: ಶುಕ್ರವಾರ ರಾಜಸ್ಥಾನದ ನಾಲ್ಕು ರಾಜ್ಯಸಭಾ ಸ್ಥಾನಗಳಲ್ಲಿ ಮೂರು ಸ್ಥಾನಗಳನ್ನು ಕಾಂಗ್ರೆಸ್ ಗೆದ್ದ ನಂತರ, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಅಭಿನಂದಿಸಿದ್ದಾರೆ. ಮತ್ತು ಬಿಜೆಪಿಯ ಕುದುರೆ ವ್ಯಾಪಾರದ ಪ್ರಯತ್ನ ವಿಫಲವಾಗಿದೆ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿಗಳಾದ ಪ್ರಮೋದ್ ತಿವಾರಿ, ಮುಕುಲ್ ವಾಸ್ನಿಕ್ ಮತ್ತು ರಣದೀಪ್ ಸುರ್ಜೇವಾಲಾ ಅವರು ಗೆಲುವು ದಾಖಲಿಸಿದ್ದಾರೆ. ಆದರೆ ಕಳೆದ ಬಾರಿ ಹರಿಯಾಣದಿಂದ ಗೆದ್ದಿದ್ದ ಝೀ ಬ್ಯುಸಿನೆಸ್ ಗ್ರೂಪ್ ಅಧ್ಯಕ್ಷ ಸುಭಾಷ್ ಚಂದ್ರ ಅವರು ಕೇವಲ 30 ಮತಗಳನ್ನು ಗಳಿಸಲು ಸಾಧ್ಯವಾಗಿದ್ದು, 11 ಮತಗಳ ಕೊರತೆಯಿಂದ ಸೋಲನುಭವಿಸಿದ್ದಾರೆ.

2023ರಲ್ಲಿ ನಡೆಯಲಿರುವ ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು "ಇದೇ ರೀತಿಯ ಸೋಲನ್ನು" ಎದುರಿಸಲಿದೆ ಎಂದು ಶ್ರೀ ಗೆಹ್ಲೋಟ್ ತಮ್ಮ ಟ್ವೀಟ್‌ಗಳಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

“ರಾಜಸ್ಥಾನದಲ್ಲಿ ಮೂರು ರಾಜ್ಯಸಭಾ ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು ಪ್ರಜಾಪ್ರಭುತ್ವಕ್ಕೆ ಸಂದ ಜಯ. ಹೊಸದಾಗಿ ಆಯ್ಕೆಯಾದ ಮೂವರು ಸಂಸದರಾದ ಶ್ರೀ ಪ್ರಮೋದ್ ತಿವಾರಿ, ಶ್ರೀ ಮುಕುಲ್ ವಾಸ್ನಿಕ್ ಮತ್ತು ಶ್ರೀ ರಣದೀಪ್ ಸುರ್ಜೇವಾಲಾ ಅವರನ್ನು ನಾನು ಅಭಿನಂದಿಸುತ್ತೇನೆ. ಎಲ್ಲಾ ಮೂವರು ಸಂಸದರು ದಿಲ್ಲಿಯಲ್ಲಿ ರಾಜಸ್ಥಾನದ ಹಕ್ಕುಗಳನ್ನು ಬಲವಾಗಿ ಪ್ರತಿಪಾದಿಸುತ್ತಾರೆ ಎಂದು ನನಗೆ ಖಾತ್ರಿಯಿದೆ.”

“ಮೂರೂ ಸ್ಥಾನಗಳಿಗೆ ಬೇಕಾದ ಬಹುಮತ ಕಾಂಗ್ರೆಸ್ ಗೆ ಇದೆ ಎಂಬುದು ಮೊದಲಿನಿಂದಲೂ ಸ್ಪಷ್ಟವಾಗಿತ್ತು. ಆದರೆ ಬಿಜೆಪಿ ಸ್ವತಂತ್ರ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಕುದುರೆ ವ್ಯಾಪಾರಕ್ಕೆ ಯತ್ನಿಸಿತು. ನಮ್ಮ ಶಾಸಕರ ಒಗ್ಗಟ್ಟು ಈ ಪ್ರಯತ್ನಕ್ಕೆ ತಕ್ಕ ಉತ್ತರ ನೀಡಿದೆ. 2023ರ ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿ ಇದೇ ರೀತಿಯ ಸೋಲನ್ನು ಎದುರಿಸಲಿದೆ.” ಎಂದು ಗೆಹ್ಲೋಟ್‌ ಟ್ವೀಟ್‌ ಮಾಡಿದ್ದಾರೆ.

ತಿವಾರಿ ಅವರು ಅಗತ್ಯವಿರುವ 41 ಮತಗಳನ್ನು ಪಡೆದರೆ, ವಾಸ್ನಿಕ್ 42 ಮತಗಳು, ಮತ್ತು ಸುರ್ಜೆವಾಲಾ 43 ಮತಗಳನ್ನು ಪಡೆದರು. ಬಿಜೆಪಿ ಅಭ್ಯರ್ಥಿ ಘನಶ್ಯಾಮ್ ತಿವಾರಿ ಅವರು 43 ಮತಗಳನ್ನು ಗಳಿಸಿದ್ದಾರೆ.  

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News