ಅಡ್ಡ ಮತದಾನ : ಬಿಜೆಪಿ ಶಾಸಕಿ ಪಕ್ಷದಿಂದ ಅಮಾನತು

Update: 2022-06-11 02:48 GMT
ಶೋಭಾರಾಣಿ ಕುಶ್ವಾಹ್ (Photo- Facebook)

ಜೈಪುರ: ರಾಜಸ್ಥಾನ ವಿಧಾನಸಭೆಯಲ್ಲಿ ಧೋಲಪುರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಬಿಜೆಪಿಯ ಶೋಭಾರಾಣಿ ಕುಶ್ವಾಹ್ ಅವರನ್ನು ಪಕ್ಷ ಅಮಾನತು ಮಾಡಿದೆ ಹಾಗೂ ಅಡ್ಡ ಮತದಾನಕ್ಕೆ ಕಾರಣ ಕೇಳಿ ನೋಟಿಸ್ ನೀಡಿದೆ ಎಂದು indianexpress.com ವರದಿ ಮಾಡಿದೆ.

ಶುಕ್ರವಾರ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಅಚ್ಚರಿ ಎಂಬಂತೆ ಶೋಭಾರಾಣಿ ಕಾಂಗ್ರೆಸ್ ಅಭ್ಯರ್ಥಿ ಪರ ಮತ ಚಲಾಯಿಸಿದ್ದರು ಎನ್ನಲಾಗಿದ್ದು, ಶಾಸಕಿ ಇದೀಗ ಬಿಜೆಪಿ ಪಕ್ಷದಿಂದ ಉಚ್ಚಾಟನೆಯಾಗುವ ಎಲ್ಲ ಸಾಧ್ಯತೆ ಇದೆ. ಐದು ವರ್ಷದ ಹಿಂದೆ ಇವರ ಪತಿಯ ಶಾಸಕತ್ವವನ್ನು ರದ್ದುಪಡಿಸಿ ಜೈಲಿಗೆ ಕಳುಹಿಸಲಾಗಿತ್ತು. ಈ ಕಾರಣದಿಂದ ಶೋಭಾರಾಣಿ ಉಪಚುನಾವಣೆಯಲ್ಲಿ ಆಯ್ಕೆಯಾಗಿದ್ದರು. ಇದೀಗ ಶಾಸಕಿಯ ಅಡ್ಡಮತದಾನವನ್ನು ಪತಿಯ ಜೈಲು ಶಿಕ್ಷೆ ಜತೆ ಸಂಪರ್ಕ ಕಲ್ಪಿಸಲಾಗಿದ್ದು, ಇದುವರೆಗೂ ಪಕ್ಷ ನೀಡಿದ ನೋಟಿಸ್‍ಗೆ ಅವರು ವಿವರಣೆ ನೀಡಿಲ್ಲ ಎಂದು ವರದಿಯಾಗಿದೆ.

ಎರಡನೇ ಬಾರಿಗೆ ಶಾಸಕಿಯಾಗಿರುವ ಶೋಭಾರಾಣಿ, ಮಾಜಿ ಶಾಸಕ ಬಿ.ಎಲ್.ಕುಶ್ವಾಹ ಅವರ ಪತ್ನಿ. 2016 ಡಿಸೆಂಬರ್‌ ನಲ್ಲಿ, ರಾಜಸ್ಥಾನ ವಿಧಾನಸಭೆ ಸ್ಪೀಕರ್ ಕೈಲಾಶ್ ಮೇಘ್ವಾಲ್ ಅವರು ಬಿ.ಎಲ್.ಕುಶ್ವಾಹ ಅವರ ವಿಧಾನಸಭಾ ಸದಸ್ಯತ್ವ ರದ್ದುಪಡಿಸಿದ್ದರು. ಆಗ ಬಿಎಸ್ಪಿಯಲ್ಲಿದ್ದ ಅವರು ಮರ್ಯಾದಾ ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿ ಜೈಲುಪಾಲಾಗಿದ್ದರು.

ಭಾರತದ ಸಂವಿಧಾನದ 191ನೇ ವಿಧಿ ಅನ್ವಯ ಮತ್ತು ಪ್ರಜಾಪ್ರತಿನಿಧಿ ಕಾಯ್ದೆ-1951ರ ಸೆಕ್ಷನ್ 8ರ ಅಡಿ ಕುಶ್ವಾಹ್ ಅವರನ್ನು ಅನರ್ಹಗೊಳಿಸಲಾಗಿತ್ತು. ಬಳಿಕ 2017ರಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ, ಕುಶ್ವಾಹ್ ಅವರ ಪತ್ನಿ ಶೋಭಾರಾಣಿ ಅವರನ್ನು ಕಣಕ್ಕೆ ಇಳಿಸಿತ್ತು. ಈ ಚುನಾವಣೆಯಲ್ಲಿ ಗೆದ್ದ ಶೋಭಾರಾಣಿ ಬಳಿಕ 2018ರ ವಿಧಾನಸಭಾ ಚುನಾವಣೆಯಲ್ಲೂ ಗೆಲುವು ಸಾಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News