ಮಹಾರಾಷ್ಟ್ರದ ರಾಜ್ಯಸಭೆ ಚುನಾವಣಾ ಫಲಿತಾಂಶಗಳಿಂದ 'ಆಘಾತವಾಗಿಲ್ಲ' ಎಂದ ಶರದ್ ಪವಾರ್

Update: 2022-06-11 06:22 GMT
Photo:PTI

ಪುಣೆ: ಮಹಾರಾಷ್ಟ್ರದ ಆರು ರಾಜ್ಯಸಭಾ ಸ್ಥಾನಗಳ ಪೈಕಿ ಬಿಜೆಪಿ ಮೂರು ಸ್ಥಾನಗಳನ್ನು ಗೆದ್ದ ನಂತರ ಪ್ರತಿಕ್ರಿಯಿಸಿರುವ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು "ಫಲಿತಾಂಶಗಳನ್ನು ನೋಡಿ ನಾನು ಆಘಾತಕ್ಕೊಳಗಾಗಲಿಲ್ಲ ಹಾಗೂ ನಮ್ಮ ಪಕ್ಷವು ಬಿಜೆಪಿ ಬೆಂಬಲಿತ ಸ್ವತಂತ್ರ ಶಾಸಕರೊಬ್ಬರಿಂದ  ಒಂದು ಹೆಚ್ಚುವರಿ ಮತವನ್ನು ಪಡೆದಿದೆ'' ಎಂದು ಹೇಳಿದರು.

ಶುಕ್ರವಾರ ನಡೆದ ತೀವ್ರ ಪೈಪೋಟಿಯ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಕೇಂದ್ರ ಸಚಿವ ಪಿಯೂಷ್ ಗೋಯಲ್ , ಮಾಜಿ ರಾಜ್ಯ ಸಚಿವ ಅನಿಲ್ ಬೋಂಡೆ ಹಾಗೂ  ಧನಂಜಯ್ ಮಹಾದಿಕ್ ಜಯ ಗಳಿಸಿದ್ದಾರೆ. ಶಿವಸೇನೆಯ ಸಂಜಯ್ ರಾವತ್, ಎನ್‌ಸಿಪಿಯ ಪ್ರಫುಲ್ ಪಟೇಲ್ ಮತ್ತು ಕಾಂಗ್ರೆಸ್‌ನ ಇಮ್ರಾನ್ ಪ್ರತಾಪ್‌ಘರ್ಹಿ ಕೂಡ ಗೆಲುವು ಸಾಧಿಸಿದ್ದಾರೆ. ಶಿವಸೇನೆಯ ಎರಡನೇ ಅಭ್ಯರ್ಥಿ ಸಂಜಯ್ ಪವಾರ್ ಬಿಜೆಪಿಯ ಮಹಾದಿಕ್ ವಿರುದ್ಧ ಸೋತಿದ್ದಾರೆ.

"ಫಲಿತಾಂಶಗಳನ್ನು ನೋಡಿ ನನಗೆ ಆಘಾತವಾಗಿಲ್ಲ. ಮಹಾ ವಿಕಾಸ್ ಅಘಾಡಿ(ಎಂವಿಎ) ಮಿತ್ರಪಕ್ಷಗಳಾದ  ಎನ್‌ಸಿಪಿ, ಶಿವಸೇನೆ ಹಾಗೂ  ಕಾಂಗ್ರೆಸ್‌ನ ಪ್ರತಿಯೊಬ್ಬ ಅಭ್ಯರ್ಥಿಗಳು ಪಡೆದ ಮತಗಳನ್ನು ನೀವು ನೋಡಿದರೆ, ಅವರು ಕೋಟಾದ ಪ್ರಕಾರ ಮತಗಳನ್ನು ಪಡೆದರು. ಪ್ರಫುಲ್ ಪಟೇಲ್ (ಎನ್‌ಸಿಪಿ) ಮಾತ್ರ ಒಂದು ಹೆಚ್ಚುವರಿ ಮತ ಪಡೆದರು. ಅದು ಎಲ್ಲಿಂದ ಬಂತು ಎಂದು ನನಗೆ ಗೊತ್ತಿದೆ. ಅದು ನಮ್ಮ ಮೈತ್ರಿಪಕ್ಷದ ಮತವಲ್ಲ, ಅದು ವಿಪಕ್ಷದಿಂದ ಬಂದಿದೆ ”ಎಂದು ಪವಾರ್ ಸುದ್ದಿಗಾರರಿಗೆ ತಿಳಿಸಿದರು.

"ಶಿವಸೇನೆಯಿಂದ ಸ್ಪರ್ಧಿಸಿದ ಆರನೇ ಸ್ಥಾನಕ್ಕೆ ದೊಡ್ಡ ಅಂತರವಿತ್ತು. ಆದರೆ ಎಂವಿಎ ಧೈರ್ಯವನ್ನು ತೋರಿಸಿದೆ ಹಾಗೂ  ಪ್ರಯತ್ನಗಳನ್ನು ಮಾಡಿದೆ. ಬಿಜೆಪಿ ಪಕ್ಷವು ತನ್ನಲ್ಲಿ ಹೆಚ್ಚು ಸ್ವತಂತ್ರ ಶಾಸಕರನ್ನು ಹೊಂದಿತ್ತು. ಆದರೆ ಬಿಜೆಪಿ ಹಾಗೂ  ಎಂವಿಎ ಇಬ್ಬರಲ್ಲೂ ಮತಗಳ ಸಂಖ್ಯೆ ಸಾಕಷ್ಟಿರಲಿಲ್ಲ" ಎಂದು ಪವಾರ್  ಹೇಳಿದರು.

"ಕೆಲವು ಸಂಖ್ಯೆಗಳ ಕೊರತೆಯ ಹೊರತಾಗಿಯೂ ಎಂವಿಎ ಆರನೇ ಸ್ಥಾನವನ್ನು ಗೆಲ್ಲಲು ಧೈರ್ಯಶಾಲಿ ಪ್ರಯತ್ನವನ್ನು ಮಾಡಿದೆ. ನಮ್ಮನ್ನು ಬೆಂಬಲಿಸುವುದಾಗಿ ಭರವಸೆ ನೀಡಿದ್ದ ಸ್ವತಂತ್ರ ಮತ್ತು ಸಣ್ಣ ಪಕ್ಷಗಳನ್ನು ನಮ್ಮಿಂದ ದೂರವಿಡುವಲ್ಲಿ ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಯಶಸ್ವಿಯಾದರು. ಹಾಗಾಗಿಯೇ ಈ ಮತಗಳ ಅಂತರ ಉಂಟಾಗಿದೆ''ಎಂದರು.

ಈ ಫಲಿತಾಂಶದಿಂದ ರಾಜ್ಯದಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಎಂವಿಎ ಸರಕಾರಕ್ಕೆ ಯಾವುದೇ ಬೆದರಿಕೆ ಇಲ್ಲ ಎಂದು ಎನ್‌ಸಿಪಿ ಮುಖ್ಯಸ್ಥರು ಹೇಳಿದ್ದಾರೆ.

"ಎಂವಿಎಗೆ ಆರನೇ ಸೀಟು ಗೆಲ್ಲುವುದು  ರಿಸ್ಕ್ ಆಗಿತ್ತು, ಆದರೆ ಉದ್ಧವ್ ಠಾಕ್ರೆ ರಿಸ್ಕ್ ತೆಗೆದುಕೊಂಡರು. ರಾಜಕೀಯದಲ್ಲಿ ರಿಸ್ಕ್ ತೆಗೆದುಕೊಳ್ಳಬೇಕು" ಎಂದು ಪವಾರ್  ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News