ಸಮಾಜ-ಸರಕಾರ-ಶಿಕ್ಷಣ

Update: 2022-06-12 06:25 GMT

ಸಾಮಾನ್ಯವಾಗಿ ಇಂದು ಯಾರಾದರೂ ಗತಕಾಲವನ್ನು ವರ್ಣಿಸಿದರೆ, ವೈಭವೀಕರಿಸಿದರೆ ಅಂಥವರನ್ನು ಪ್ರಗಲ್ಭ ವಿದ್ವಾಂಸ ಎಂದು ಹಾಡಿ ಹೊಗಳುವರು, ಇನ್ನೂ ಉದಯಿಸದ ಭವಿಷ್ಯತ್ತಿನ ಬಗ್ಗೆ ಆಡಿದರೆ ಅಥವಾ ಬರೆದರೆ ಅಂಥವರನ್ನು ಹುಚ್ಚ ಎಂದು ಕರೆಯುವರು, ಭೂತ-ಭವಿಷ್ಯತ್ತಿನ ಕುರಿತು ಆಡುವವರನ್ನು ಸಮಾಜ ಸಹಿಸೀತು, ಆದರೆ, ಯಾರಾದರೂ ವರ್ತಮಾನ ಸಂಗತಿಯನ್ನು ವಿಶ್ಲೇಷಿಸಿದರೆ, ಅವನೊಬ್ಬ ಕ್ರಾಂತಿಕಾರಿ ಎಂದೆನಿಸುವನು, ಜನ ರೊಚ್ಚಿಗೇಳುವರು, ಹೀಗೆ ಇದೆ ಇಂದಿನ ಪರಿಸ್ಥಿತಿ.

ಸ್ವಭಾವತ ನಾವೆಲ್ಲರೂ ಸಂಕುಚಿತ ಮನಸ್ಸಿನವರೇ ಆಗಿರುವೆವು, ಆ ರೀತಿಯ ಮನೋಸ್ಥಿತಿಯಲ್ಲಿ ನಾವು ಭಾವಿಸುವುದು ನಮ್ಮ ದಾರಿಯೇ ಸರಿಯಾದ ದಾರಿ, ನಾವು ಮೆಚ್ಚಿದ ಗ್ರಂಥವೇ ಶ್ರೇಷ್ಠ ಗ್ರಂಥ, ನಮ್ಮ ಧರ್ಮಗುರುಗಳೇ ಜಗದ್ಗುರುಗಳು ಇತ್ಯಾದಿ. ಈ ರೀತಿಯ ಮನೋಸ್ಥಿತಿಯ ನಿವಾರಣೆ ಶಿಕ್ಷಣದಿಂದಲೇ ಸಾಧ್ಯ, ಅದೂ ಪ್ರಗತಿಪರ ಶಿಕ್ಷಣದಿಂದಲೇ ಸಾಧ್ಯ ಎಂಬುದನ್ನು ಮನಗಾಣಬೇಕಾಗಿದೆ.

ಯಾವುದೇ ಒಂದು ಸಮಾಜದ ಸ್ವಾಸ್ಥ, ಅಭ್ಯುದಯ ಅಲ್ಲಿನ ಶಿಕ್ಷಣ ಗುಣಮಟ್ಟವನ್ನು ಹೊಂದಿಕೊಂಡಿದೆ ಎಂಬುದು ನಿರ್ವಿವಾದ ವಿಚಾರವಾಗಿದೆ. ಶಿಕ್ಷಣ ಪರಿಣಾಮಕಾರಿಯಾಗದಿದ್ದರೆ ಸಮಾಜ ಅನಾರೋಗ್ಯಕ್ಕೊಳಗಾಗುವುದು. ಕೆಲವಾರು ಕುತ್ತಗಳು ಹಾನಿಯನ್ನು ಉಂಟುಮಾಡುವವು. ಅವುಗಳಲ್ಲಿ ಜಾತೀಯವಾದ, ವರ್ಗೀಯವಾದ, ಪಂಥೀಯವಾದ, ಮತೀಯವಾದ ಹಾಗೂ ಪಕ್ಷೀಯವಾದವುಗಳೇ ಮುಖ್ಯವಾದವುಗಳಾಗಿವೆ. ಉದಾಹರಣೆಗೆ, ವಿದ್ಯಾಸಂಸ್ಥೆಗಳ ಸ್ಥಾಪನೆ, ಸಿಬ್ಬಂದಿ ನೇಮಕಾತಿ, ವಿದ್ಯಾರ್ಥಿ ದಾಖಲಾತಿ, ಸ್ಕಾಲರ್ ಶಿಪ್ ವಿತರಣೆ ಇತ್ಯಾದಿ. ಇತ್ತೀಚೆಗೆ ಜಾತೀಯ ಆಧಾರದಲ್ಲಿ ಕ್ರೀಡಾಕೂಟಗಳನ್ನೂ, ಸ್ಪರ್ಧೆಗಳನ್ನೂ ಏರ್ಪಡಿಸುವುದು ಸಾಮಾನ್ಯವಾಗಿದೆ. ಜಾತೀಯತೆಯನ್ನು ತೊರೆದು ವಿಶ್ವ ಮಾನವನೆಂದೆನಿಸಿಕೊಂಡ ಮಹಾನ್ ವ್ಯಕ್ತಿಯೋರ್ವರನ್ನು ಬೆಂಬಲಿಸಿ ಪ್ರತಿಭಟಿಸಲು ಒಂದು ಜಾತಿಯವರು ಇತ್ತೀಚೆಗೆ ತೊಡಗಿದುದು ಸುದ್ದಿ-ಸಮಾಚಾರವಾಗಿದೆ. ಈ ರೀತಿಯ ಜಾತೀಯ, ವರ್ಗೀಯ, ಪಂಥೀಯ ವಿಚಾರಗಳು, ಅಂಧಶ್ರದ್ಧೆಗಳು ದುರಭಿಮಾನಕ್ಕೆ ಎಡೆಮಾಡುವವು. ಇವೇ ನಮ್ಮ ರಾಷ್ಟ್ರದ ಪ್ರಗತಿಗೆ ಎದುರಾದ ಅಡೆತಡೆಗಳು. ನಮ್ಮ ಶಿಕ್ಷಣ ಕ್ರಮಕ್ಕೆ ಅಂಟಿದ ಹಾನಿಕಾರಕ ಪರಾನ್ನಜೀವಿಗಳು (parasites), ಇವುಗಳ ನಿರೋಧಕ್ರಮ (prophylaxis) ಅತೀ ಅಗತ್ಯವಾಗಿ ಆಗಬೇಕಾಗಿದೆ. ಅದು ನಮ್ಮ ಶಿಕ್ಷಣ ವ್ಯವಸ್ಥೆಯಿಂದಲೇ ಸಾಧ್ಯ. ಮೊದಲು ನಮ್ಮ ಶಿಕ್ಷಣ ಈ ಮೇಲೆ ಹೇಳಿದ ವೈರಸ್‌ಗಳಿಂದ ಮುಕ್ತವಾಗಬೇಕು, ಜೊತೆಯಲ್ಲೇ ನಮ್ಮ ಜನರಲ್ಲಿ ಜಾತೀಯ ಮತೀಯ ಪ್ರಜ್ಞೆ ಅಳಿದು ಸಮುದಾಯ ಪ್ರಜ್ಞೆ ಮೂಡಬೇಕು, ಜಾತಿ, ವರ್ಗ, ಪಂಥ, ಪಂಗಡ ನಿರಾಪೇಕ್ಷ ಸಾರ್ವತ್ರಿಕ ಶಿಕ್ಷಣವಾಗಬೇಕು, ಮೊದಲು ಮಾನವತಾವಾದ ಎಂಬ ಅಂತ ದ್ರವ (cohesive element) ಇಲ್ಲದಿದ್ದಲ್ಲಿ, ಜಾತಿ-ಮತ-ಪಂಥ-ಭಾಷೆ ಇವೆಲ್ಲ ಕೇವಲ ಬಾಹ್ಯ ಅಂಟುದ್ರವ (adhesive agents)ಗಳಾಗಬಲ್ಲವು. ಇದರಿಂದ ಹಾನಿ ಇದೆ.

ಇಂದು ನಮ್ಮನ್ನಾಳುವವರಿಗೆ ಏನಾಗಿದೆ? ಅಂದು ಹಿಜಾಬು, ಇಂದು ಚಡ್ಡಿ ಈ ತುಂಡರಿವೆಗಾಗಿ ಈ ರೀತಿಯ ಕಲಹ ಬೇಕೇ? ಸದಾ ಜಗಳವಾಡುತ್ತಿರುವ ತಂದೆ-ತಾಯಂದಿರ ನಡುವೆ ಮಗು ಹೇಗೆ ಸ್ವಾಸ್ಥ್ಯದಿಂದಿರಲು ಸಾಧ್ಯ? ನಮ್ಮ ಸರಕಾರಕ್ಕೆ ಇತರ ಅಭಿವೃದ್ಧಿಯ ಸಮಸ್ಯೆಗಳು ಕಾಣದೇನು?

ನಮ್ಮಲಿಂದು ನಡೆಯುವ ಘಟನಾವಳಿಗಳನ್ನು ಅವಲೋಕಿಸಿದರೆ ನಾವಿಂದು democracy ಯಲ್ಲಿರುವೆವೋ ಯಾ democrazy ಯಲ್ಲಿರುವೆವೋ ಎಂಬ ಸಂದೇಹ ಉಂಟಾಗುವುದು, ಈ ಎಲ್ಲಾ ಸಂದೇಹಗಳಿಗೆ ಮುಖ್ಯ ಕಾರಣವೆಂದರೆ ನಮ್ಮ ಶಾಲಾ ಕಾಲೇಜುಗಳ ತರಗತಿಗಳಲ್ಲಿ, ಪ್ರಜಾಸತಾತ್ಮಕ ವಾತಾವರಣ ಇಲ್ಲದಿರುವುದಾಗಿದೆ. ಇದರ ಪರಿಣಾಮವಾಗಿ ಪ್ರಜಾಸತ್ತಾತ್ಮಕ ವಿಚಾರಗಳಾದ ಸ್ವಾತಂತ್ರ, ಸಮಾನತೆ ಮತ್ತು ಹೊಣೆಗಾರಿಕೆಯ ಅಪಾರ್ಥ ಉಂಟಾಗಿದೆ. ಉದಾಹರಣೆಗೆ ಈ ಕೆಳಗಿನ ವಾಕ್ಯದಲ್ಲಿಯ ವಿರೋಧಾಭಾವವನ್ನು ಗಮನಿಸಿರಿ: Over one lakh security forces were deployed to facilitate free and fair polling.

ನಮ್ಮ ಶಿಕ್ಷಣದ ಗುರಿ, ಉದ್ದೇಶಗಳನ್ನು ಗಮನಿಸಿದಲ್ಲಿ, ನಾವಿಂದು ಗೊಂದಲಕ್ಕೀಡಾಗುವುದು ಸಹಜವೇ ಆಗಿದೆ. ಹಲವಾರು ಎಳೆತ-ಸೆಳೆತಗಳ ನಡುವೆ, ನಮ್ಮ ಪದ್ಧತಿ ಸಿಲುಕಿದೆ. ಉದಾಹರಣೆಗೆ, ಭೂತ-ಭವಿಷ್ಯಗಳ ನಡುವೆ ಹಳತು-ಹೊಸತರ ನಡುವೆ ವ್ಯಷ್ಠಿ-ಸಮಷ್ಠಿಗಳ ನಡುವೆ ಸಿಲುಕಿದೆ. ತರಗತಿಯನ್ನು ಪ್ರವೇಶಿಸಿ ನೋಡಿದರೆ ಅತ್ಯಂತ ಸಡಿಲುತನ ಯಾ ಬಿಗಿತನದ ವಿದ್ಯಾರ್ಥಿಗಳ ಮೇಲಿನ ಹಿಡಿತ. ಅತ್ಯಂತ ಸಡಿಲುತನ(laissez faire) ಅತ್ಯಂತ ಬಿಗಿತನದ(autocratic) ನಡುವೆ ಪ್ರಜಾಸತ್ತಾತ್ಮಕ ಪದ್ಧತಿಯೊಂದು ಇದೆ ಎಂದು ಅವರರಿಯರು. ಪ್ರಜಾಸತ್ತಾತ್ಮಕ ಎಂದರೆ, ಸ್ವಾತಂತ್ರ ಮತ್ತು ಸಡಿಲುತನ ಇವುಗಳ ಜೊತೆಗೆ ಬರುವ ಹೊಣೆಗಾರಿಕೆಯೂ ಇದೆ. ಅತ್ಯಂತ ಸ್ವಾತಂತ್ರ ಇದ್ದಲ್ಲಿ, ಮಕ್ಕಳು ಯಾವುದೇ ರೀತಿಯ ಲಂಗು-ಲಗಾಮು ಇಲ್ಲದೆ ಇತರರ ಸ್ವಾತಂತ್ರಕ್ಕೆ ಲಗ್ಗೆ ಇಟ್ಟು ‘ಇದು ನನ್ನ ಹಕ್ಕು’ ಎಂಬ ರೀತಿಯಲ್ಲಿ ವರ್ತಿಸುವರು, ಇದಕ್ಕೆ ವ್ಯತಿರಿಕ್ತವಾಗಿ, ಅತ್ಯಧಿಕ ಸ್ವಾತಂತ್ರಹರಣದಲ್ಲಿ, ಮಕ್ಕಳು ಕುಗ್ಗಿ-ಬಗ್ಗಿ ಬಾಳುವರು. ಅಧಿಕಾರ, ಅಂತಸ್ತು, ಧನವೇ ಸರ್ವಸ್ವ ಎಂದು ಅಂಜುತ್ತಾ ಅಳುಕುತ್ತಾ ಇರುವರು.

ಇಂದು ಕಾಲ ಬದಲಾಗಿದೆ, ಬದಲಾಗಲೇಬೇಕಾಗಿದೆ, ಸಾಮಾಜಿಕ ಅಸಮಾನತೆ ಪ್ರತಿರೋಧ, ಪ್ರತಿಭಟನೆಗೆ ಎಡೆಮಾಡುತ್ತದೆ, ಉದಾಹರಣೆಗೆ, ಅಮೆರಿಕದ Civil Rights ಚಳವಳಿ, 1917ರ ರಶ್ಯದ ಕಾರ್ಮಿಕ ಕ್ರಾಂತಿ, ಜಗತ್ತಿನೆಲ್ಲೆಡೆ ಆರಂಭಗೊಂಡ ಸ್ತ್ರೀ ವಿಮೋಚನಾ ಚಳವಳಿ, ಭಾರತದಲ್ಲಿನ ದಲಿತ ಚಳವಳಿ ಇತ್ಯಾದಿ. ಈಗಿನ್ನೂ ಆರಂಭಗೊಳ್ಳದ ವಿದ್ಯಾರ್ಥಿ ಚಳವಳಿ. ಹೀಗೆ ಹತ್ತು ಹಲವಾರು ಚಳವಳಿಗಳ ನಡುವೆ ನಾವಿದ್ದೇವೆ. ಶಾಲೆ ಮತ್ತು ಸಮಾಜದಲ್ಲಿ ಪ್ರತಿಭಟನೆ ಮತ್ತು ಅಶಾಂತಿ ಇಲ್ಲದಾಗಬೇಕಾದರೆ ಮುಖ್ಯವಾಗಿ ನಾವು ಪ್ರಜಾಸತ್ತಾತ್ಮಕ ಶಿಕ್ಷಣವನ್ನು ಕೈಗೊಳ್ಳಬೇಕಾಗಿದೆ.

ಇಂತಹ ಪರಿಸ್ಥಿತಿಯಲ್ಲಿ ಸಮಸ್ಯೆಗಳೇನೆಂದು ನಮಗೆ ತೋಚದು. ಅರಿವಿನ ಕೊರತೆಯಿಂದಾಗಿ (ತನಗೆ ತಿಳಿಯದು ಎಂಬ ಅರಿವು ನಮಗೆ ಗುರಿದಾರಿಗಳು ಎಡವಟ್ಟಾಗಿದೆ. ಇದರಿಂದಾಗಿ ನಾವಿಂದು ಮೂರ್ತವಾದುದನ್ನೇ ಅಮೂರ್ತವೆಂದು ನಂಬುವೆವು. ತಲುಪಬೇಕಾದ ಊರನ್ನು ಕೈಕಂಬದಲ್ಲಿ(fingerpost) ಕಾಣುವುದಾಗಿದೆ. ಮಾಹಿತಿಯನ್ನೇ ಜ್ಞಾನವೆಂದೂ, ಪರೀಕ್ಷೆಗೆ ತಯಾರಿಗೊಳಿಸುವುದೇ ಅಧ್ಯಾಪನವೆಂದೂ, ಉರು ಹೊಡೆಯುವುದನ್ನು ಕಲಿಕೆಯೆಂದೂ ಪರಿಗಣಿಸುವ ಕಾಲ ಇದಾಗಿದೆ. ಬದುಕು ಒಂದೇ ಸಾಕು, ಬಾಳುವೆ ಬೇಕಾಗಿಲ್ಲ, ಈ ರೀತಿಯ ಸಂಕ್ಷಿಪ್ತಗೊಳಿಸಿದ ನೋಟದಿಂದಾಗಿ ಸಾರ್ಥಕ ಕಲಿಕೆಯ ಬದಲಿಗೆ ಬರೀ ಮುಕ್ಕುವುದು (cramming), ಕಕ್ಕುವುದು (regurgitation), ಹೆಕ್ಕುವುದು (marking) ಅಷ್ಟೇ.

ಈ ಅರಿವಿನ ಕೊರತೆಯಿಂದಾಗಿ ನಮಗೆ ಪ್ರಜಾಸತ್ತಾತ್ಮಕ ಶಿಕ್ಷಣವೆಂಬುದು ಇರಲಿ, ಮೂಲಭೂತವಾದ ಶೈಕ್ಷಣಿಕ ಪರಿಕಲ್ಪನೆಯೇ ತಪ್ಪಿಹೋಗಿದೆ.    

Writer - ಪ್ರೊ. ಸುಕುಮಾರ ಗೌಡ

contributor

Editor - ಪ್ರೊ. ಸುಕುಮಾರ ಗೌಡ

contributor

Similar News