ಅಕ್ರಮ ಹಣ ವರ್ಗಾವಣೆ ಪ್ರಕರಣ: ವಿಚಾರಣೆಗಾಗಿ ಈಡಿ ಕಚೇರಿ ತಲುಪಿದ ರಾಹುಲ್ ಗಾಂಧಿ
ನ್ಯಾಷನಲ್ ಹೆರಾಲ್ಡ್ ಪ್ರಕರಣ: ಕಾಂಗ್ರೆಸ್ ಪ್ರತಿಭಟನೆಯ ನಡುವೆಯೇ ಈ.ಡಿ.ಯಿಂದ ರಾಹುಲ್ ವಿಚಾರಣೆ
ಹೊಸದಿಲ್ಲಿ,ಜೂ.13: ನ್ಯಾಷನಲ್ ಹೆರಾಲ್ಡ್ ವೃತ್ತಪತ್ರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಈ.ಡಿ.)ವು ಸೋಮವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ವಿಚಾರಣೆಗೊಳಪಡಿಸಿತು.
ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರ ಘೋಷಣೆಗಳ ನಡುವೆಯೇ ಪೂರ್ವಾಹ್ನ 11:10ರ ಸುಮಾರಿಗೆ ರಾಹುಲ್ ತನ್ನ ಸೋದರಿ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಈ.ಡಿ.ಕಚೇರಿಯನ್ನು ತಲುಪಿದ್ದರು. ಸಂಕ್ಷಿಪ್ತ ಕಾನೂನು ಪ್ರಕ್ರಿಯೆಯನ್ನು ಪೂರೈಸಿ ಹಾಜರಿಯನ್ನು ಹಾಕಿದ ಸುಮಾರು 20 ನಿಮಿಷಗಳ ಬಳಿಕ ಈ.ಡಿ.ಅಧಿಕಾರಿಗಳು ರಾಹುಲ್ ವಿಚಾರಣೆಯನ್ನು ಆರಂಭಿಸಿದರು. ಸುಮಾರು ಎರಡೂವರೆ ಗಂಟೆಗಳ ಕಾಲ ವಿಚಾರಣೆಯ ಬಳಿಕ ಭೋಜನಕ್ಕೆ ತೆರಳಿದ್ದ ರಾಹುಲ್ ಮಧ್ಯಾಹ್ನ ಸುಮಾರು 3.50ರ ಸುಮಾರಿಗೆ ವಿಚಾರಣೆಗೆ ಮರಳಿ ಹಾಜರಾದರು.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ)ಯ ಕಲಂ 50ರಡಿ ರಾಹುಲ್ ತನ್ನ ಹೇಳಿಕೆಯನ್ನು ಲಿಖಿತ ರೂಪದಲ್ಲಿ ನೀಡಿದ್ದಾರೆ ಎನ್ನಲಾಗಿದೆ.
ಬೆಳಿಗ್ಗೆ ಅಕ್ಬರ್ ರಸ್ತೆಯಲ್ಲಿನ ಕಾಂಗ್ರೆಸ್ ಕೇಂದ್ರ ಕಚೇರಿಯಿಂದ ಈ.ಡಿ.ಕಚೇರಿಗೆ ಹೊರಟಾಗ ರಾಜಸ್ಥಾನ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್,ಛತ್ತೀಸ್‌ಗಡ ಮುಖ್ಯಮಂತ್ರಿ ಭೂಪೇಶ ಬಾಗೇಲ್ ಮತ್ತು ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಸೇರಿದಂತೆ ಪಕ್ಷದ ಹಲವಾರು ನಾಯಕರು ರಾಹುಲ್ ಜೊತೆಯಲ್ಲಿದ್ದರು.
ಪ್ರಕರಣದ ತನಿಖಾಧಿಕಾರಿಯಾಗಿರುವ ಸಹಾಯಕ ನಿರ್ದೇಶಕ ದರ್ಜೆಯ ಅಧಿಕಾರಿಯೋರ್ವರು ಯಂಗ್ ಇಂಡಿಯನ್ ಕಂಪನಿಯ ಸ್ಥಾಪನೆ,ನ್ಯಾಷನಲ್ ಹೆರಾಲ್ಡ್‌ನ ಕಾರ್ಯಾಚರಣೆಗಳು, ಅಸೋಸಿಯೇಟೆಡ್ ಜರ್ನಲ್ ಲಿ.(ಎಜೆಎಲ್)ಗೆ ಕಾಂಗ್ರೆಸ್ ನೀಡಿರುವ ಸಾಲ ಮತ್ತು ಸುದ್ದಿ ಮಾಧ್ಯಮ ಸಂಸ್ಥೆಯ ಒಳಗೆ ಹಣಕಾಸು ವರ್ಗಾವಣೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ರಾಹುಲ್‌ಗೆ ಕೇಳಿದ್ದರು ಎಂದು ಹೇಳಲಾಗಿದೆ.
ನ್ಯಾಷನಲ್ ಹೆರಾಲ್ಡ್ ವೃತ್ತಪತ್ರಿಕೆಯ ಒಡೆತನವನ್ನು ಹೊಂದಿರುವ, ಕಾಂಗ್ರೆಸ್ ಪ್ರವರ್ತನೆಯ ಯಂಗ್ ಇಂಡಿಯನ್‌ನಲ್ಲಿ ನಡೆದಿತ್ತೆನ್ನಲಾದ ಹಣಕಾಸು ಅವ್ಯವಹಾರಗಳಿಗೆ ಈ.ಡಿ.ತನಿಖೆಯು ಸಂಬಂಧಿಸಿದೆ.
ನ್ಯಾಷನಲ್ ಹೆರಾಲ್ಡ್‌ನ್ನು ಎಜೆಎಲ್ ಪ್ರಕಟಿಸುತ್ತಿದ್ದು,ಯಂಗ್ ಇಂಡಿಯನ್ ಪ್ರೈ.ಲಿ.ಅದರ ಒಡೆತನವನ್ನು ಹೊಂದಿದೆ.
ಮೋದಿ ಸರಕಾರದ ದಮನ ನೀತಿಯ ವಿರುದ್ಧ ಕಾಂಗ್ರೆಸ್ ಪಕ್ಷವು ಹೋರಾಡಲಿದೆ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ ಬಿ.ವಿ. ಅವರು ಈ.ಡಿ.ಕಚೇರಿಯ ಬಳಿ ಸುದ್ದಿಗಾರರಿಗೆ ತಿಳಿಸಿದರು.
‘ನಾವು ಭಯಗೊಂಡಿಲ್ಲ. ನಮ್ಮ ನಾಯಕರು ತನ್ನ ಬೆಂಬಲಿಗರೊಂದಿಗೆ ಈ.ಡಿ.ಕಚೇರಿಗೆ ಹೋಗುತ್ತಿದ್ದಾರೆ ಎಂಬ ಕಾರಣಕ್ಕೆ ಮಧ್ಯ ದಿಲ್ಲಿಯನ್ನು ಭದ್ರಕೋಟೆಯನ್ನಾಗಿಸಿರುವ ಮೋದಿ ಸರಕಾರವು ನಾಚಿಕೆ ಪಟ್ಟುಕೊಳ್ಳಬೇಕು’ ಎಂದು ಪೊಲೀಸರು ತನ್ನನ್ನು ವಶಕ್ಕೆ ತೆಗೆದುಕೊಳ್ಳುವ ಕೆಲವೇ ಕ್ಷಣಗಳ ಮುನ್ನ ಶ್ರೀನಿವಾಸ ಹೇಳಿದರು.
ರಾಹುಲ್ ಬೆಳಿಗ್ಗೆ ಈ.ಡಿ.ಕಚೇರಿಗೆ ತೆರಳಿದಾಗ ಕೋಲಾಹಲದ ದೃಶ್ಯಗಳು ಕಂಡು ಬಂದಿದ್ದವು. ಕಾಂಗ್ರೆಸ್ ಕಚೇರಿಯಿಂದ ಈ.ಡಿ.ಕಚೇರಿಗೆ ಹೊರಟಿದ್ದ ಪ್ರತಿಭಟನಾ ಜಾಥಾ ಎರಡು ಕಡೆಗಳಲ್ಲಿ ಪೊಲೀಸ್ ಬ್ಯಾರಿಕೇಡ್‌ಗಳನ್ನು ದಾಟಿ ಮುಂದೆ ಸಾಗಿತ್ತಾದರೂ ಭಾರೀ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದ್ದ ಮೂರನೇ ಬ್ಯಾರಿಕೇಡ್ ಬಳಿ ಅದನ್ನು ತಡೆಯಲಾಗಿತ್ತು. ರಾಹುಲ್ ಮತ್ತು ಪ್ರಿಯಾಂಕಾ ಮುಂದೆ ಸಾಗಿದ ನಂತರ ಹಲವಾರು ಕಾಂಗ್ರೆಸ್ ನಾಯಕರು ಅಲ್ಲಿಯೇ ಧರಣಿ ಕುಳಿತಿದ್ದರು. ಪ್ರಿಯಾಂಕಾ ರಾಹುಲ್‌ರನ್ನು ಈ.ಡಿ.ಕಚೇರಿಯ ಬಳಿ ಬಿಟ್ಟು ಬಳಿಕ ಅಲ್ಲಿಂದ ನಿರ್ಗಮಿಸಿದ್ದರು.
ನಂತರ ಕಾಂಗ್ರೆಸ್ ನಾಯಕರನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ಬಸ್‌ಗಳಲ್ಲಿ ತುಂಬಿ ಪೊಲೀಸ್ ಠಾಣೆಗಳಿಗೆ ಕರೆದೊಯ್ದಿದ್ದರು. ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ ಸೇರಿದಂತೆ ಪಕ್ಷದ ನಾಯಕರನ್ನು ಭೇಟಿಯಾಗಲು ಪ್ರಿಯಾಂಕಾ ತುಘ್ಲಕ್ ರೋಡ್ ಪೊಲೀಸ್ ಠಾಣೆಯನ್ನು ತಲುಪಿದ್ದರು.
ಪೊಲೀಸರು ಸೋಮವಾರ ಈ.ಡಿ.ಕಚೇರಿಯ ಬಳಿ ನಿಷೇಧಾಜ್ಞೆಯನ್ನು ಜಾರಿಗೊಳಿಸಿದ್ದರು. ಕೋಮು ಮತ್ತು ಕಾನೂನು ಹಾಗೂ ಸುವ್ಯವಸ್ಥೆ ಸ್ಥಿತಿ ಹಾಗೂ ವಿವಿಐಪಿಗಳ ಚಲನವಲನಗಳನ್ನು ಉಲ್ಲೇಖಿಸಿ ಪೊಲೀಸರು ರವಿವಾರ ರಾತ್ರಿಯೇ ಪ್ರತಿಭಟನಾ ಜಾಥಾಕ್ಕೆ ಅನುಮತಿಯನ್ನು ನಿರಾಕರಿಸಿದ್ದರು.
ಆದಾಗ್ಯೂ ತನ್ನ ಬಲ ಪ್ರದರ್ಶನಕ್ಕೆ ಯೋಜಿಸಲಾಗಿದ್ದ ದೇಶವ್ಯಾಪಿ ಪ್ರತಿಭಟನೆಯನ್ನು ನಡೆಸಲು ಕಾಂಗ್ರೆಸ್ ನಿರ್ಧರಿಸಿತ್ತು. ಕರ್ನಾಟಕ,ಮಧ್ಯಪ್ರದೇಶ,ಅಸ್ಸಾಂ,ಮಹಾರಾಷ್ಟ್ರ,ಉತ್ತರ ಪ್ರದೇಶ ಮತ್ತು ಕೇರಳ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಪ್ರತಿಭಟನೆಗಳು ನಡೆದವು.
ಬೆಳಿಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ರಣದೀಪ ಸುರ್ಜೆವಾಲಾ ಅವರು,‘ಇಡೀ ದಿಲ್ಲಿಯಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿರುವುದು ಸರಕಾರವು ನಮಗೆ ಹೆದರುತ್ತಿದೆ ಎನ್ನುವುದನ್ನು ಸಾಬೀತುಗೊಳಿಸಿದೆ ’ಎಂದು ಹೇಳಿದರು. ಮೋದಿ ಸರಕಾರವನ್ನು ಹೇಡಿ ಎಂದು ಬಣ್ಣಿಸಿದ ಅವರು,ಕಾಂಗ್ರೆಸ್ ಪಕ್ಷವು ತ್ಯಾಗಗಳಿಗೆ ಸಿದ್ಧವಾಗಿದೆ ಎಂದರು.
‘ವೇಣುಗೋಪಾಲ್ ಮೇಲೆ ಪೊಲೀಸರ ಹಲ್ಲೆ’
ಪ್ರತಿಭಟನಾ ಜಾಥಾದಲ್ಲಿ ಪಾಲ್ಗೊಳ್ಳುವುದನ್ನು ತಡೆಯಲು ಕಾಂಗ್ರೆಸಿಗರನ್ನು ವಶಕ್ಕೆ ತೆಗೆದುಕೊಳ್ಳುತ್ತಿದ್ದ ಸಂದರ್ಭ ದಿಲ್ಲಿ ಪೊಲೀಸರು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಕೆ.ಸಿ.ವೇಣುಗೋಪಾಲ ಅವರ ಮೇಲೆ ಹಲ್ಲೆ ನಡೆಸಿರುವುದು ವರದಿಯಾಗಿದೆ.
ವೇಣುಗೋಪಾಲ ಅವರನ್ನು ಪೊಲೀಸರು ದೈಹಿಕವಾಗಿ ಎತ್ತಿಕೊಂಡು ಬಸ್‌ನೊಳಗೆ ತಳ್ಳುತ್ತಿದ್ದನ್ನು ವೀಡಿಯೊ ದೃಶ್ಯಾವಳಿಯು ತೋರಿಸಿದೆ.
ಕೇಂದ್ರೀಯ ಸಂಸ್ಥೆಗಳ ದುರುಪಯೋಗದ ಆರೋಪ
ಪ್ರತಿಪಕ್ಷದ ಧ್ವನಿಯನ್ನಡಗಿಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ ಶಾ ಅವರು ಕೇಂದ್ರೀಯ ಸಂಸ್ಥೆಗಳ ದುರ್ಬಳಕೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ತನ್ನ ನಾಯಕರ ವಿರುದ್ಧದ ಆರೋಪಗಳು ಸುಳ್ಳು ಮತ್ತು ನಿರಾಧಾರವಾಗಿವೆ ಎಂದಿರುವ ಅದು,ಬಿಜೆಪಿ ಸೇಡಿನ ರಾಜಕೀಯದಲ್ಲಿ ತೊಡಗಿದೆ ಎಂದು ಆರೋಪಿಸಿದೆ.
ಜೂ.23ರಂದು ಸೋನಿಯಾ ವಿಚಾರಣೆ:
ನ್ಯಾಷನಲ್ ಹೆರಾಲ್ಡ್‌ಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆಗಾಗಿ ಜೂ.23ರಂದು ತನ್ನೆದುರು ಹಾಜರಾಗುವಂತೆ ಈ.ಡಿ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೂ ಸಮನ್ಸ್ ಜಾರಿಗೊಳಿಸಿದೆ. ಸದ್ಯ ಕೋವಿಡ್ ಸಂಬಂಧಿತ ತೊಂದರೆಗಳಿಂದಾಗಿ ಸೋನಿಯಾ ಆಸ್ಪತ್ರೆಗೆ ದಾಖಲಾಗಿದ್ದಾರೆ.
1937ರಲ್ಲಿ ಸ್ಥಾಪನೆಗೊಂಡಿದ್ದ ಎಜೆಎಲ್ ಭಾರೀ ಸಾಲದ ಸುಳಿಯಲ್ಲಿ ಸಿಲುಕಿತ್ತು ಮತ್ತು ಪಕ್ಷವು 2002-11ರ ಅವಧಿಯಲ್ಲಿ ತನ್ನ ಪತ್ರಕರ್ತರು ಮತ್ತು ಸಿಬ್ಬಂದಿಗಳ ವೇತನಗಳನ್ನು ಪಾವತಿಸಲು ನ್ಯಾಷನಲ್ ಹೆರಾಲ್ಡ್‌ಗೆ 90 ಕೋ.ರೂ.ಗಳನ್ನು ನೀಡಿತ್ತು ಎಂದು ಬೆಳಿಗ್ಗೆ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ತಿಳಿಸಿತ್ತು.