×
Ad

ನಿರುದ್ಯೋಗದ ಅಂಕಿ ಅಂಶ ಹಂಚಿಕೊಂಡ ಉವೈಸಿಗೆ ಕೃತಜ್ಞತೆ ಸಲ್ಲಿಸಿದ ಬಿಜೆಪಿ ಸಂಸದ ವರುಣ್‌ ಗಾಂಧಿ

Update: 2022-06-13 21:11 IST
ವರುಣ್‌ ಗಾಂಧಿ / ಅಸಾದುದ್ದೀನ್‌ ಉವೈಸಿ (Photo: PTI)

ಹೊಸದಿಲ್ಲಿ: ದೇಶದಲ್ಲಿ ನಿರುದ್ಯೋಗವು ದಾಖಲೆಯ ಮಟ್ಟದಲ್ಲಿದ್ದರೂ ಸಹ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಮಂಜೂರಾದ 60 ಲಕ್ಷ ಹುದ್ದೆಗಳು ಖಾಲಿ ಇವೆ ಎಂಬ ಅಂಶವನ್ನು ಬಹಿರಂಗಪಡಿಸಿದ್ದಕ್ಕಾಗಿ ಅಸಾದುದ್ದೀನ್ ಉವೈಸಿ ಅವರಿಗೆ ಬಿಜೆಪಿ ಸಂಸದ ವರುಣ್‌ ಗಾಂಧಿ ಧನ್ಯವಾದ ತಿಳಿಸಿದ್ದಾರೆ. ವರುಣ್ ಗಾಂಧಿ ಒದಗಿಸಿದ ಅಂಕಿ ಅಂಶಗಳ ಆಧಾರದ ಮೇಲೆ ಸರ್ಕಾರವನ್ನು ಓವೈಸಿ ತರಾಟೆಗೆ ತೆಗೆದುಕೊಳ್ಳುತ್ತಿರುವ ವಿಡಿಯೋ ಹಂಚಿಕೊಂಡಿರುವ ಉತ್ತರ ಪ್ರದೇಶದ ಸಂಸದರಾಗಿರುವ ವರುಣ್‌ ಗಾಂಧಿ, ಉದ್ಯೋಗದ ಕುರಿತು ನನ್ನ ಪ್ರಶ್ನೆಗಳನ್ನು ಪ್ರಸ್ತಾಪಿಸಿದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ ಎಂದು ಟ್ವೀಟ್‌ ಮಾಡಿದ್ದಾರೆ.

''ನಿರುದ್ಯೋಗ ಇಂದು ದೇಶದ ಅತ್ಯಂತ ಜ್ವಲಂತ ಸಮಸ್ಯೆಯಾಗಿದ್ದು, ಇಡೀ ದೇಶದ ಮುಖಂಡರು ಈ ಬಗ್ಗೆ ಸರಕಾರದ ಗಮನ ಸೆಳೆಯಬೇಕು, ನಿರುದ್ಯೋಗಿ ಯುವಕರಿಗೆ ನ್ಯಾಯ ಸಿಗಬೇಕು, ಆಗ ಮಾತ್ರ ದೇಶ ಶಕ್ತಿಯುತವಾಗುತ್ತದೆ. ಉದ್ಯೋಗದ ಕುರಿತು ನನ್ನ ಪ್ರಶ್ನೆಗಳನ್ನು ಅಸಾದುದ್ದೀನ್‌ ಉವೈಸಿ ಅವರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ,” ಎಂದು ವರುಣ್ ಗಾಂಧಿಯವರು ಟ್ವೀಟ್ ನಲ್ಲಿ ಬರೆದಿದ್ದಾರೆ.

ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಸಂಖ್ಯೆಯ ವಿವರಗಳೊಂದಿಗೆ ಈ ಹಿಂದೆ ವರುಣ್‌ ಗಾಂಧಿ ಅವರು ಟ್ವೀಟ್ ಮಾಡಿದ್ದರು. 

"3 ದಶಕಗಳಲ್ಲಿ ನಿರುದ್ಯೋಗವು ಗರಿಷ್ಠ ಮಟ್ಟದಲ್ಲಿರುವಾಗ ಈ ಅಂಕಿಅಂಶಗಳು ಬೆಚ್ಚಿಬೀಳಿಸುತ್ತವೆ. ಉದ್ಯೋಗ ಸಿಗದೇ ಕೋಟ್ಯಂತರ ಯುವಕರು ಹತಾಶರಾಗಿ, ನಿರಾಶೆಗೊಂಡಿರುವಾಗ, ದೇಶದಲ್ಲಿ 60 ಲಕ್ಷ 'ಮಂಜೂರಾದ ಹುದ್ದೆಗಳು' ಖಾಲಿ ಇವೆ. ಈ ಹುದ್ದೆಗಳಿಗೆ ಮೀಸಲಿಟ್ಟ ಬಜೆಟ್ ಎಲ್ಲಿ ಹೋಯಿತು? ಇದನ್ನು ತಿಳಿದುಕೊಳ್ಳುವ ಹಕ್ಕು ಪ್ರತಿಯೊಬ್ಬ ಯುವಕನಿಗೂ ಇದೆ!” ಎಂದು ಅವರು ಟ್ವೀಟ್‌ ಮಾಡಿದ್ದರು. 
 
ವರುಣ್ ಗಾಂಧಿ ಅವರು ಇತ್ತೀಚೆಗೆ ಸರ್ಕಾರಿ ಹುದ್ದೆಗಳು ಖಾಲಿ ಇರುವ ವಿಷಯವನ್ನು ಎತ್ತುತ್ತಿದ್ದಾರೆ.  ಉದ್ಯೋಗ ಆಕಾಂಕ್ಷಿಗಳು ಹತಾಶರಾಗಿದ್ದು,  ಆಡಳಿತಾತ್ಮಕ ಅಸಮರ್ಥತೆಗೆ ಬೆಲೆ ತೆರುತ್ತಿದ್ದಾರೆ ಎಂದು ವರುಣ್‌ ಗಾಂಧಿ ಪ್ರತಿಪಾದಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News