ಅಮೆರಿಕದ ಟೆಕ್ ಕಂಪೆನಿಗಳನ್ನೂ ಆವರಿಸಿದ ಜಾತೀಯತೆಯ ಪಿಡುಗು!

Update: 2022-06-14 05:27 GMT

ಅಮೆರಿಕದ ಕಂಪೆನಿಗಳು ದೊಡ್ಡ ಸಂಖ್ಯೆಯಲ್ಲಿ ಏಶ್ಯನ್ ಮೂಲದ ಅಮೆರಿಕನ್ನರನ್ನು ಯಾಕೆ ನೇಮಕಗೊಳಿಸುತ್ತವೆಂದರೆ, ಬಿಳಿಯ ಜನಾಂಗೀಯರಲ್ಲದವರನ್ನು ನಿಯೋಜಿಸುವ ಕುರಿತಾದ ಅವುಗಳ ವೈವಿಧ್ಯತಾ ಗುರಿಗಳನ್ನು ಈಡೇರಿಸಿದಂತಾಗುತ್ತದೆ. ಯಾಕೆಂದರೆ ಕಪ್ಪು ಜನಾಂಗೀಯರು ಸಮಾನ ಹಕ್ಕುಗಳಿಗಾಗಿ ಹಾಗೂ ಗುಲಾಮಗಿರಿ ರದ್ದತಿಗಾಗಿ ಹೋರಾಡಿದ್ದರು. ಹೀಗಾಗಿ ಅವರನ್ನು ಆಕ್ರಮಣಕಾರಿಗಳು ಹಾಗೂ ಘರ್ಷಣೆಗಿಳಿಯುವವರು ಎಂಬಂತೆ ಕಾಣಲಾಗುತ್ತಿದೆ.


ತೀರಾ ಇತ್ತೀಚೆಗೆ ಗೂಗಲ್ ಕಂಪೆನಿಯು ಅಸಾಮಾನ್ಯವಾದ ಕಾರಣಗಳಿಂದಾಗಿ ಸುದ್ದಿಗೆ ಗ್ರಾಸವಾಗಿತ್ತು. ಅಲ್ಲಿ ನಡೆದ ಘಟನೆಯೊಂದು ಅಮೆರಿಕದ ತಂತ್ರಜ್ಞಾನ ವಲಯದಲ್ಲಿ ಜನಾಂಗೀಯ ವೈವಿಧ್ಯತೆಯ ಕೊರತೆ ಕುರಿತಾದ ಚರ್ಚೆಯನ್ನು ತೆರೆದಿಟ್ಟಿದೆ. ಹಾಲಿ ವಿವಾದವು ಕೇವಲ ಗೂಗಲ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಹಿಂದೂ ಹಾಗೂ ಭಾರತೀಯ ಸಿಬ್ಬಂದಿಯನ್ನು ಮಾತ್ರವೇ ಒಳಗೊಂಡಿಲ್ಲ. ನೀವು ಮೇಲ್ಮೈಯನ್ನು ಗೀಚುತ್ತಾ ಹೋದಲ್ಲಿ ನಿಮಗೆ ಅಮೆರಿಕದ ತಂತ್ರಜ್ಞಾನ ವಲಯದಲ್ಲಿ ಕಪ್ಪುಜನಾಂಗೀಯರು ಹಾಗೂ ಲ್ಯಾಟಿನ್ ಜನಾಂಗೀಯ ಉದ್ಯೋಗಿಗಳ ಕೊರತೆಯಿರುವುದು ಕಂಡುಬರುತ್ತದೆ.

ವಾಶಿಂಗ್ಟನ್ ಪೋಸ್ಟ್‌ನ ಇತ್ತೀಚಿನ ವರದಿಯೊಂದು, ಗೂಗಲ್ ಸಂಸ್ಥೆಯ ಭಾರತೀಯ ಮೂಲದ ಏಳು ಉದ್ಯೋಗಿಗಳು ದಲಿತ ಹೋರಾಟಗಾರ, ‘ಈಕ್ವಾಲಿಟಿ ಲ್ಯಾಬ್’ ಎಂಬ ಮಾನವಹಕ್ಕು ಸಂಘಟನೆಯ ಸ್ಥಾಪಕ ಹಾಗೂ ಕಾರ್ಯಕಾರಿ ನಿರ್ದೇಶಕ ತೆನ್‌ಮೋಳಿ ಸೌಂದರ್‌ರಾಜನ್ ಅವರಿಂದ ಜಾತಿ ಕುರಿತ ಸಂವಾದ ಕಾರ್ಯಕ್ರಮ ಆಯೋಜಿಸಿರುವುದನ್ನು ವಿರೋಧಿಸಿದ್ದರು. ಈ ಸಂವಾದ ಕಾರ್ಯಕ್ರಮವನ್ನು ತಾವು ವಿರೋಧಿಸುವುದಕ್ಕೆ ಈ ಏಳು ಮಂದಿ ಉದ್ಯೋಗಿಗಳು, ವಿಚಿತ್ರ ಕಾರಣಗಳನ್ನು ನೀಡಿದ್ದರು. ಜಾತಿ ಸಮಾನತೆಯ ಕುರಿತ ಚರ್ಚೆಯನ್ನು ನಡೆಸುವುದರಿಂದ ತಮಗೆ ಅಭದ್ರತೆಯ ಭಾವನೆಯುಂಟಾಗಿದೆ ಹಾಗೂ ತಮ್ಮ ಜೀವನ ಅಪಾಯಕ್ಕೆ ಸಿಲುಕಲಿದೆ ಎಂದು ಅವರು ಹೇಳಿದ್ದರು. ಅವರ ಈ ಅಭಿಪ್ರಾಯಗಳು ಶೀಘ್ರವಾಗಿ ಗೂಗಲ್‌ನ ಆಂತರಿಕ ಇಮೇಲ್ ಗ್ರೂಪ್‌ನಲ್ಲಿರುವ 8 ಸಾವಿರ ಮಂದಿ ದಕ್ಷಿಣ ಏಶ್ಯದ ಉದ್ಯೋಗಿಗಳಲ್ಲಿ ಹರಡಿತು. ಆನಂತರ ಬಹುತೇಕ ಮಂದಿ ಈ ಸಂವಾದ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದರು.

ಅಂತಿಮವಾಗಿ ಈ ಸಂವಾದ ಕಾರ್ಯಕ್ರಮವನ್ನು ನಡೆಸದಿರಲು ಗೂಗಲ್ ತೀರ್ಮಾನಿಸಿತು. ಈ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲು ಮುತುವರ್ಜಿ ವಹಿಸಿದ್ದ ಗೂಗಲ್ ನ್ಯೂಸ್‌ನ ಹಿರಿಯ ಸಂಪಾದಕಿ ತನುಜಾ ಗುಪ್ತಾ ರಾಜೀನಾಮೆ ನೀಡಿದರು. ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಗೂಗಲ್‌ನ ಮುಖ್ಯ ವೈವಿಧ್ಯತಾ ಅಧಿಕಾರಿ ಮೆಲೊನಿ ಪಾರ್ಕರ್ ಅವರು, ‘‘ತಮ್ಮನ್ನು ಖಳನಾಯಕರಂತೆ ಬಿಂಬಿಸಲಾಗುತ್ತಿದೆಯೆಂದು ಉದ್ಯೋಗಿಗಳ ದೊಡ್ಡ ಗುಂಪೊಂದು ಭಾವಿಸಿದೆ. ಇದು ಬಹಳಷ್ಟು ಆಂತರಿಕ ಕಳವಳಕ್ಕೆ ಕಾರಣವಾಯಿತು’’ ಎಂದವರು ಹೇಳಿದ್ದಾರೆ.

ವೈವಿಧ್ಯತಾ ವರದಿ ಹೇಳುತ್ತಿರುವುದೇನು?
 ಗೂಗಲ್‌ನ ಭಾರತೀಯ ಮೂಲದ ಉದ್ಯೋಗಿಗಳ ಬಳಗದಲ್ಲಿ ಜಾತಿಗಳ ವೈವಿಧ್ಯತೆಯ ಕೊರತೆಯಿದೆಯೆಂಬುದು ಈ ವಿವಾದದಿಂದ ಸ್ಪಷ್ಟವಾಗಿ ತಿಳಿದುಬರುತ್ತದೆ. ಜಾತಿಯನ್ನು ಹೊರಗಿಡುವುದು ಹಾಗೂ ಜಾತಿ ತಾರತಮ್ಯ ಮಾಡುವುದು ಭಾರತದ ಅನೇಕ ಮೇಲ್ಜಾತಿ ಜನರ ಪ್ರವೃತ್ತಿಯಾಗಿದೆ. ಭಾರತದ ಜನಗಣತಿಯ ಸಂದರ್ಭದಲ್ಲಿ ಜಾತಿ ಗಣತಿ ನಡೆಸುವುದನ್ನು ವಿರೋಧಿಸುವುದಕ್ಕೆ ಅವರು ನೀಡುವ ಕಾರಣ ಇದೇ ಆಗಿದೆ. ಜಾತಿ ಗಣತಿಯು ಜಾತಿವಾದ ಹಾಗೂ ಜಾತಿ ದ್ವೇಷಕ್ಕೆ ಎಡೆ ಮಾಡಿಕೊಡುತ್ತದೆಯೆಂದು ಅವರು ವಾದಿಸುತ್ತಾರೆ.

ಗೂಗಲ್ ಸಂಸ್ಥೆಯಲ್ಲಿ ಏಶ್ಯ ಮೂಲದ ಅಥವಾ ಭಾರತ ಮೂಲದ ಶ್ರಮಿಕಶಕ್ತಿಯ ವೈವಿಧ್ಯತೆಯ ಸ್ವರೂಪದ ಬಗ್ಗೆ ನಮಗೆ ಹೆಚ್ಚು ತಿಳಿದಿಲ್ಲ. ಯಾಕೆಂದರೆ ಈ ಮಾಹಿತಿ ತಂತ್ರಜ್ಞಾನ ದಿಗ್ಗಜ ಸಂಸ್ಥೆಯು ಎಲ್ಲಾ ವಿವರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವುದಿಲ್ಲ. ಗೂಗಲ್‌ನ ವೈವಿಧ್ಯತಾ ವರದಿಯು ಏಶ್ಯನ್ನರನ್ನು ಒಂದೇ ಸಾಮಾಜಿಕ ಸಮೂಹವೆಂಬುದಾಗಿ ಪರಿಗಣಿಸಿದೆ. ಗೂಗಲ್‌ನ 2022ನೇ ಸಾಲಿನ ವೈವಿಧ್ಯತಾ ವರದಿಯು ಕೆಲವೊಂದು ಆಸಕ್ತಿಕರ ವಿವರಗಳನ್ನು ಒದಗಿಸಿದೆ.
ಅಮೆರಿಕದಲ್ಲಿರುವ ಶೇ.48.3ರಷ್ಟು ಗೂಗಲ್ ಉದ್ಯೋಗಿಗಳು ಶ್ವೇತವರ್ಣೀಯರೆಂದು ದತ್ತಾಂಶಗಳು ತಿಳಿಸಿವೆ. ಏಶ್ಯನ್ನರು ಗೂಗಲ್‌ನಲ್ಲಿರುವ ಎರಡನೇ ಅತಿ ದೊಡ್ಡ ಸಮೂಹವಾಗಿದ್ದು ಅವರು ಒಟ್ಟು ಉದ್ಯೋಗಿಗಳ 43.2 ಶೇಕಡಾದಷ್ಟಿದ್ದಾರೆ. ಶೇ.6.9 ಲ್ಯಾಟಿನ್ನರು, ಶೇ. 5.3 ಕಪ್ಪು ಜನಾಂಗೀಯರು ಹಾಗೂ ಶೇ. 0.8 ಅಮೆರಿಕದ ಮೂಲನಿವಾಸಿ ಜನಾಂಗೀಯರು ಗೂಗಲ್‌ನ ಉದ್ಯೋಗಿಗಳಾಗಿದ್ದಾರೆ.

 ಗೂಗಲ್‌ನ ಶ್ರಮಿಕವರ್ಗದಲ್ಲಿ ಕಪ್ಪು ಜನಾಂಗೀಯರು ಹಾಗೂ ಲ್ಯಾಟಿನ್ನರ ಪ್ರಾತಿನಿಧ್ಯ ತುಂಬಾ ಕಡಿಮೆ ಇರುವುದನ್ನು ಈ ದತ್ತಾಂಶಗಳು ತೋರಿಸಿವೆ. ಅಮೆರಿಕದ ಜನಗಣತಿ ವರದಿಯ ಪ್ರಕಾರ ಅಮೆರಿಕದ ಜನಸಂಖ್ಯೆಯ ಶೇ.18 ಮಂದಿ ಲ್ಯಾಟಿನೊಗಳು ಹಾಗೂ ಶೇ. 12.1 ಮಂದಿ ಕಪ್ಪು ಜನಾಂಗೀಯರು. ಅಮೆರಿಕದಲ್ಲಿ ಹಿಸ್ಪಾನಿಕೇತರ ಬಿಳಿಯ ಜನಾಂಗೀರು ಶೇ. 57.8ರಷ್ಟಿದ್ದಾರೆ ಆದರೆ ಗೂಗಲ್‌ನ ಶ್ರಮಿಕ ಪಡೆಯಲ್ಲಿ ಅವರ ಪ್ರಾತಿನಿಧ್ಯ ತುಸು ಕಡಿಮೆಯಾಗಿದೆ. ಇದಕ್ಕೆ ತೀರಾ ವ್ಯತಿರಿಕ್ತವೆಂಬಂತೆ ಅಮೆರಿಕದ ಜನಸಂಖ್ಯೆಯ ಕೇವಲ ಶೇ.6ರಷ್ಟಿರುವ ಏಶ್ಯನ್ನರು ಗೂಗಲ್‌ನ ಒಟ್ಟು ಉದ್ಯೋಗಿಗಳಲ್ಲಿ ಶೇ. 43.3ರಷ್ಟಿದ್ದಾರೆ. ಇದು ಅಮೆರಿಕದ ಜನಸಂಖ್ಯೆಯಲ್ಲಿ ಅವರ ಪಾಲಿಗಿಂತ ಏಳು ಪಟ್ಟು ಅಧಿಕವಾಗಿದೆ.

 ಏಶ್ಯನ್ನರ ಅತಿಯಾದ ಪ್ರಾತಿನಿಧ್ಯವು ಗೂಗಲ್‌ಗೆ ವಿಶಿಷ್ಟವಾದುದಾಗಿದೆಯೇ?. ಇದಕ್ಕಾಗಿ ಇನ್ನೊಂದು ತಂತ್ರಜ್ಞಾನ ದಿಗ್ಗಜ ಸಂಸ್ಥೆ ಫೇಸ್‌ಬುಕ್ ಸಿಬ್ಬಂದಿ ವೈವಿಧ್ಯತಾ ವರದಿಯನ್ನು ಪರಿಶೀಲಿಸೋಣ. ನೂತನ ವರದಿಯ ಪ್ರಕಾರ, ಅಮೆರಿಕದಲ್ಲಿರುವ ಶೇ.39.1 ಮಂದಿ ಫೇಸ್‌ಬುಕ್ ಉದ್ಯೋಗಿಗಳು ಬಿಳಿಯ ಜನಾಂಗೀಯರಾಗಿದ್ದಾರೆ. ಏಶ್ಯನ್ನರು ಶೇ.45.7ರಷ್ಟಿದ್ದು, ಫೇಸ್‌ಬುಕ್‌ನ ಅತಿ ದೊಡ್ಡ ಶ್ರಮಿಕವರ್ಗವಾಗಿದೆ. ಫೇಸ್‌ಬುಕ್‌ನಲ್ಲಿ ಕೇವಲ ಶೇ.4.4ರಷ್ಟು ಕಪ್ಪು ಜನಾಂಗೀಯ ಉದ್ಯೋಗಿಗಳಿದ್ದು ಅವರಲ್ಲಿ ಹೆಚ್ಚಿನವರು ತಂತ್ರಜ್ಞಾನೇತರ (ನಾನ್-ಟೆಕ್) ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಲ್ಯಾಟಿನ್ನರ ವಿಷಯದಲ್ಲೂ ಹೀಗೆ ಆಗಿದ್ದು ಅವರು ಫೇಸ್‌ಬುಕ್‌ನ ಒಟ್ಟು ಶ್ರಮಿಕ ಶಕ್ತಿಯ ಕೇವಲ ಶೇ.6.5ರಷ್ಟಿದ್ದಾರೆ.

ಮತ್ತೊಂದು ಬೃಹತ್ ಮಾಹಿತಿ ತಂತ್ರಜ್ಞಾನ ಸಂಸ್ಥೆ ಮೈಕ್ರೋಸಾಫ್ಟ್‌ನ ಅಮೆರಿಕದಲ್ಲಿರುವ ಉದ್ಯೋಗಿಗಳ ಪೈಕಿ ಕೇವಲ ಶೇ.5.7ರಷ್ಟು ಮಂದಿ ಕಪ್ಪು ಜನಾಂಗೀಯರು ಹಾಗೂ ಶೇ.7ರಷ್ಟು ಮಂದಿ ಲ್ಯಾಟಿನ್ನರಾಗಿದ್ದಾರೆ. ಶೇ.34.5ರಷ್ಟು ಮಂದಿ ಏಶ್ಯನ್ನರು. ಇನ್‌ಟೆಲ್‌ನ ವಿಷಯದಲ್ಲೂ ಇದೇ ಪರಿಸ್ಥಿತಿಯಿದೆ. ಬೃಹತ್ ಟೆಕ್ ಕಂಪೆನಿಗಳ ಪೈಕಿ ಆ್ಯಪಲ್ ಮಾತ್ರ ಈ ಪ್ರವೃತ್ತಿಯಿಂದ ಹೊರತಾಗಿದೆ. ಆ ಸಂಸ್ಥೆಯಲ್ಲಿ ಕಪ್ಪು ಜನಾಂಗೀಯರು ಹಾಗೂ ಲ್ಯಾಟಿನ್ನರ ಪ್ರಾತಿನಿಧ್ಯ ಉತ್ತಮವಾಗಿದ್ದು, ಅವರುಗಳು ಕ್ರಮವಾಗಿ ಒಟ್ಟು ಶ್ರಮಿಕಶಕ್ತಿಯ 9.4 ಶೇ. ಹಾಗೂ ಶೇ. 14.8ರಷ್ಟಿದ್ದಾರೆ.
 
ವೈವಿಧ್ಯತೆಯ ಪ್ರತಿಜ್ಞೆಗೆ ತಿಲಾಂಜಲಿ
  ಟೆಕ್ ಕಂಪೆನಿಗಳಲ್ಲಿ ಏಶ್ಯನ್ ಮೂಲದ ಅಮೆರಿಕನ್ನರ ಅತಿಯಾದ ಪ್ರಾತಿನಿಧ್ಯ ಹಾಗೂ ಆಫ್ರಿಕನ್ನರ ಹಾಗೂ ಲ್ಯಾಟಿನ್ನರ ತೀರಾ ಕಡಿಮೆ ಪ್ರಾತಿನಿಧ್ಯವು ದೀರ್ಘ ಸಮಯದಿಂದ ಚರ್ಚೆಯ ವಿಷಯವಾಗಿ ಬಿಟ್ಟಿದೆ. ಅಮೆರಿಕನ್ ಮಾಧ್ಯಮವು ಈ ವಿಷಯದ ಬಗ್ಗೆ ಬೆಳಕು ಚೆಲ್ಲಿದೆ. ಕಪ್ಪುಜನಾಂಗೀಯ ಟೆಕ್ ಸಿಇಓಗಳ ಕುರಿತಾದ ಮುಖಪುಟ ಲೇಖನಗಳನ್ನು ಅವು ಪ್ರಕಟಿಸಿವೆ. ರೈನ್‌ಬೋ ಪುಶ್ ಕೊಲಿಶನ್ ಸಂಸ್ಥೆಯ ವರಿಷ್ಠ ರೆವರೆಂಡ್ ಜೆಸ್ಸೆ ಜಾಕ್ಸನ್ ಅವರು ಈ ವಿಷಯವನ್ನು 1999ರಲ್ಲೇ ಎತ್ತಿದ್ದರು. ಅಮೆರಿಕದ ಟೆಕ್ ಕಂಪೆನಿಗಳು ವಿದೇಶಗಳಿಂದ ಟೆಕ್ ಉದ್ಯೋಗಿಗಳನ್ನು ಆಮದು ಮಾಡಿಕೊಳ್ಳುತ್ತಿರುವುದನ್ನು ಹಾಗೂ ಅಮೆರಿಕದ ಅಲ್ಪಸಂಖ್ಯಾತ ಸಮುದಾಯಯಗಳ ಅರ್ಹ ಅಭ್ಯರ್ಥಿಗಳನ್ನು ಕಡೆಗಣಿಸುತ್ತಿರುವುದನ್ನು ಅವರು ಟೀಕಿಸಿದ್ದರು. ಕಪ್ಪು ವರ್ಣೀಯ ಜನಾಂಗದ ನಾಯಕರ ನಿರಂತರ ಹೋರಾಟದ ಆನಂತರ ಟೆಕ್ ಕಂಪೆನಿಗಳು, ತಮ್ಮಲ್ಲಿರುವ ಉದ್ಯೋಗಿಗಳ ಜನಾಂಗೀಯ ವೈವಿಧ್ಯತೆಯ ಕುರಿತ ವರದಿಗಳನ್ನು ಪ್ರಕಟಿಸಲು ಒಪ್ಪಿಕೊಂಡವು. ಗೂಗಲ್ ಕಂಪೆನಿಯು ತನ್ನ ಪ್ರಪ್ರಥಮ ಸಿಬ್ಬಂದಿ ವೈವಿಧ್ಯತಾ ವರದಿಯನ್ನು 2014ರಲ್ಲಿ ಪ್ರಕಟಿಸಿತ್ತು. ಮೈಕ್ರೋಸಾಫ್ಟ್ ಕಂಪೆನಿಯ ಉದ್ಯೋಗಿಗಳ ಜನಾಂಗೀಯ ವೈವಿಧ್ಯತೆ ಕುರಿತ ದತ್ತಾಂಶಗಳು ತುಂಬಾ ಕಳಪೆಯಾಗಿದ್ದರಿಂದ ಅದು 2025ರೊಳಗೆ, ಕಪ್ಪು ಜನಾಂಗೀಯರು ಹಾಗೂ ಆಫ್ರಿಕನ್ ಅಮೆರಿಕನ್ನರು, ಹಿಸ್ಪಾನಿಕ್ ಹಾಗೂ ಲ್ಯಾಟಿನ್ ಜನಾಂಗಗಳಿಗೆ ಸೇರಿದ ಸಿಬ್ಬಂದಿಯ ಸಂಖ್ಯೆಯನ್ನು ಎರಡು ಪಟ್ಟು ಹೆಚ್ಚಿಸಲು ನಿರ್ಧರಿಸಿತು.

ಏಶ್ಯ ಮೂಲದವರನ್ನು ದೊಡ್ಡ ಸಂಖ್ಯೆಯಲ್ಲಿ ನಿಯೋಜಿಸುವ ಮೂಲಕ ಅಮೆರಿಕದ ಟೆಕ್ ಕಂಪೆನಿಗಳು, ಜನಾಂಗೀಯ ವೈವಿಧ್ಯತೆಯ ಸಿಬ್ಬಂದಿ ವರ್ಗವನ್ನು ಹೊಂದುವ ತಮ್ಮ ವಾಗ್ದಾನದಿಂದ ಹಿಂದೆ ಸರಿದಂತಾಗಿದೆ. ಆದಾಗ್ಯೂ ತಮ್ಮದು ಬಿಳಿಯ ಜನಾಂಗೀಯರ ಪ್ರಾಬಲ್ಯದ ಕಂಪೆನಿಯಲ್ಲ ಎಂಬುದನ್ನು ತೋರಿಸಲು ಅವು ಪ್ರಯತ್ನಿಸುತ್ತಿರುವ ಹಾಗೆ ಕಾಣಿಸುತ್ತಿದೆ. ಬಿಳಿಯ ಜನಾಂಗೀಯ ಹಾಗೂ ಬಿಳಿಯ ಜನಾಂಗೀಯರಲ್ಲದವರು ಎಂಬ ದೃಷ್ಟಿಕೋನದಲ್ಲಿ ಜನಾಂಗೀಯವಾದವನ್ನು ನೋಡುವುದಾದರೆ ಟೆಕ್ ಕಂಪೆನಿಗಳ ಈ ಕ್ರಮ ಪರವಾಗಿಲ್ಲ ಎನ್ನಬಹುದು. ಆದರೆ ಜಾತಿ ವ್ಯವಸ್ಥೆಯ ಹಾಗೆ ಜನಾಂಗೀಯವಾದ ಕೂಡಾ ಶ್ರೇಣೀಕೃತ ಅಸಮಾನತೆಯಾಗಿದೆ. ಕಪ್ಪು ಜನಾಂಗೀಯರನ್ನು ಶಾಶ್ವತವಾಗಿ ಕೆಳಸ್ತರದಲ್ಲಿಡಲು ಬಿಳಿಯ ಜನಾಂಗೀಯರು ಹಾಗೂ ಕಂದುವರ್ಣೀಯರ ನಡುವೆ ಏರ್ಪಟ್ಟ ಜಂಟಿ ಸಹಯೋಗ ಇದಾಗಿದೆ ಎಂದು ‘ಕಾಸ್ಟ್: ದಿ ಒರಿಜಿನ್ ಆಫ್ ಅವರ್ ಡಿಸ್‌ಕಂಟೆಂಟ್’ ಎಂಬ ಭಾರೀ ಜನಪ್ರಿಯ ಕೃತಿಯ ಲೇಖಕಿ ಇಸಾಬೆಲ್ ವಿಲ್ಕರ್‌ಸನ್‌ಹೇಳುತ್ತಾರೆ. ‘‘ಸುಮಾರು 2040ರ ವೇಳೆಗೆ ಅಮೆರಿಕದಲ್ಲಿ ಹಿಸ್ಪಾನಿಕೇತರ ಬಿಳಿಯ ಜನಾಂಗೀಯರು ಬಹುಸಂಖ್ಯಾತರಾಗಿ ಉಳಿಯುವುದಿಲ್ಲ. ಹೀಗಾಗಿ ಬಿಳಿಯರು, ಅಭದ್ರತೆಯ ಭಾವನೆಯಿರುವ ಮಧ್ಯಮ ಜಾತಿಯ ಬಿಳಿಯೇತರರಿಗೆ (ಕಂದು ವರ್ಣೀಯ ಜನಾಂಗದವರು) ಸಮೀಪವಾಗಲು ಬಯಸುತ್ತಾರೆ. ಕಪ್ಪು ಜನಾಂಗೀಯರು ಯಾವುದಕ್ಕಾಗಿ ದೃಢವಾದ ಹೋರಾಟಗಳನ್ನು ನಡೆಸಿದರೋ ಅವುಗಳ ಪ್ರಯೋಜನಗಳನ್ನು ಈ ಜನಾಂಗಗಳು ಪಡೆಯಲಿವೆ’’ ಎಂದು ಆಕೆ ಹೇಳಿದ್ದಾರೆ. ಆದರೆ ಆ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿರುವ ಹಾಗೆ ಕಾಣುತ್ತಿದೆ.

 ವಿಲ್ಕರ್‌ಸನ್ ಅವರು ಹಾಗೆ ಯೋಚಿಸುವುದರಲ್ಲಿ ತರ್ಕಬದ್ಧತೆಯೂ ಇದೆ. ಆಕೆ ಹೀಗೆ ಬರೆಯುತ್ತಾರೆ. ‘‘ನೀವು ತುತ್ತ ತುದಿಯಿಂದ ಕೆಳಗಿದ್ದರೆ ಮತ್ತು ತೀರಾ ಕೆಳಗಿನಿಂದ ಸ್ವಲ್ಪ ಮೇಲಿದ್ದರೆ ಮಧ್ಯದಲ್ಲಿ ಎಲ್ಲಾ ನಿಮಗೆ ಅಭದ್ರತೆ ಕಾಡುತ್ತಿರುತ್ತದೆ. ಆಗ ನೀವು ತಳಮಟ್ಟದಿಂದ ದೂರವಾಗಲು ಯತ್ನಿಸುವಿರಿ ಮತ್ತು ನಿಮ್ಮ ಸ್ಥಾನಮಾನ ಉಳಿಸಿಕೊಳ್ಳಲು ನೀವು ನಿಮಗಿಂತ ಕೆಳಗಿರುವವರು ಎಂದು ನೀವು ಭಾವಿಸಿರುವವರ ವಿರುದ್ಧ ತಡೆಗೋಡೆಯನ್ನು ನಿರ್ಮಿಸುವಿರಿ’’ ಎಂದಾಕೆ ಹೇಳಿದ್ದಾರೆ. ಅದೇ ರೀತಿ ಭಾರತದಲ್ಲಿ ತಲೆತಲಾಂತರಗಳಿಂದ ತಾವು ಸಂಪಾದಿಸಿಕೊಂಡು ಬಂದಿದ್ದ ಸ್ಥಾನಮಾನಗಳನ್ನು ಉಳಿಸಿಕೊಳ್ಳಲು ತೀರಾ ಆಕ್ರಮಣಕಾರಿಗಳು ಹಾಗೂ ಹಗೆತನದೊಂದಿಗೆ ವರ್ತಿಸುವ ಭಾರತೀಯ ಮೇಲ್ಜಾತಿಗಳು ಅಮೆರಿಕದಲ್ಲಿ ‘ಮಾದರಿ ಅಲ್ಪಸಂಖ್ಯಾತರಾಗಿ’ ಪರಿವರ್ತನೆಗೊಂಡಿದ್ದಾರೆ. ಅಮೆರಿಕದ ಜಾತಿ ವ್ಯವಸ್ಥೆಯನ್ನು ಶಾಶ್ವತವಾಗಿಸುವಲ್ಲಿ ಭವಿಷ್ಯತ್ತಿನಲ್ಲಿ ಶ್ವೇತವರ್ಣೀಯರಿಗೆ ಕಂದುವರ್ಣೀಯರು ಸಹಭಾಗಿಗಳಾಗಲಿದ್ದಾರೆ. ಈ ವ್ಯವಸ್ಥೆಯಲ್ಲಿ ಕಪ್ಪು ಜನಾಂಗೀಯರು ಶಾಶ್ವತವಾಗಿ ತಳಮಟ್ಟದಲ್ಲಿಯೇ ಉಳಿದುಕೊಳ್ಳಲಿದ್ದಾರೆ. ಬಿಳಿಯ ಜನಾಂಗೀಯರ ‘ಶ್ರೇಷ್ಠತೆಯನ್ನು’ ಕಾಪಾಡುವಲ್ಲಿ ಮಧ್ಯಮ ಜಾತಿಗಳವರು (ಕಂದುವರ್ಣೀಯರು) ಕಿರಿಯ ಪಾಲುದಾರರಾಗಲಿದ್ದಾರೆ ಎಂದು ಆಕೆ ಅಭಿಪ್ರಾಯಿಸುತ್ತಾರೆ.

ಅಮೆರಿಕದ ಕಂಪೆನಿಗಳು ದೊಡ್ಡ ಸಂಖ್ಯೆಯಲ್ಲಿ ಏಶ್ಯನ್ ಮೂಲದ ಅಮೆರಿಕನ್ನರನ್ನು ಯಾಕೆ ನೇಮಕಗೊಳಿಸುತ್ತವೆಂದರೆ, ಬಿಳಿಯ ಜನಾಂಗೀಯರಲ್ಲದವರನ್ನು ನಿಯೋಜಿಸುವ ಕುರಿತಾದ ಅವುಗಳ ವೈವಿಧ್ಯತಾ ಗುರಿಗಳನ್ನು ಈಡೇರಿಸಿದಂತಾಗುತ್ತದೆ. ಯಾಕೆಂದರೆ ಕಪ್ಪು ಜನಾಂಗೀಯರು ಸಮಾನ ಹಕ್ಕುಗಳಿಗಾಗಿ ಹಾಗೂ ಗುಲಾಮಗಿರಿ ರದ್ದತಿಗಾಗಿ ಹೋರಾಡಿದ್ದರು. ಹೀಗಾಗಿ ಅವರನ್ನು ಆಕ್ರಮಣಕಾರಿಗಳು ಹಾಗೂ ಘರ್ಷಣೆಗಿಳಿಯುವವರು ಎಂಬಂತೆ ಕಾಣಲಾಗುತ್ತಿದೆ. ಇದರಿಂದಾಗಿ ಭಾರತೀಯರನ್ನು ಉತ್ತಮ ಬಿಳಿಯಜನಾಂಗೀಯೇತರರೆಂಬಂತೆ ಕಾಣಲಾಗುತ್ತಿದೆ. ಆದರೆ ಕೆಟ್ಟ ವಿಷಯವೇನೆಂದರೆ, ಕೆಲಸದ ಸ್ಥಳಗಳನ್ನು ಪ್ರಜಾತಾಂತ್ರಿಕಗೊಳಿಸುವ ಅತ್ಯಂತ ಸಣ್ಣ ಮಟ್ಟದ ಪ್ರಯತ್ನಗಳನ್ನೂ ಅಮೆರಿಕದಲ್ಲಿರುವ ಕೆಲವು ಭಾರತೀಯರು ವಿರೋಧಿಸುತ್ತಿರುವುದು. ಬಹುಶಃ ಗೂಗಲ್ ಕಂಪೆನಿ ಇದಕ್ಕೆ ಕೇವಲ ಒಂದು ಉದಾಹರಣೆ ಮಾತ್ರವೇ ಆಗಿದೆ.


ಕೃಪೆ: theprint.in

Writer - ದಿಲೀಪ್ ಮಂಡಲ್

contributor

Editor - ದಿಲೀಪ್ ಮಂಡಲ್

contributor

Similar News