×
Ad

ಕಾಶ್ಮೀರ ಹಿಂಸಾಚಾರ ಮತ್ತು ಗೋವಿನ ಹೆಸರಿನಲ್ಲಿ ಮನುಷ್ಯರನ್ನು ಕೊಲ್ಲುವುದಕ್ಕೂ ವ್ಯತ್ಯಾಸವಿಲ್ಲ: ನಟಿ ಸಾಯಿಪಲ್ಲವಿ

Update: 2022-06-15 15:04 IST
Photo: Deccan Chronicle 

ಹೊಸದಿಲ್ಲಿ: ತೆಲುಗು, ತಮಿಳು, ಮಲಯಾಳಂನ ಖ್ಯಾತ ನಟಿ ಸಾಯಿ ಪಲ್ಲವಿ ತಮ್ಮ ನೇರಾನೇರ ಮಾತುಗಳಿಗೆ ಹೆಸರು ಪಡೆದವರು. ಇದರಿಂದಲೇ ಅವರು ಹಲವು ಅಭಿಮಾನಿಗಳನ್ನೂ ಗಳಿಸಿದ್ದಾರೆ. ತಮ್ಮ ಮುಂಬರುವ ಚಲನಚಿತ್ರ `ವಿರಾಟ ಪರ್ವಮ್' ಪ್ರಮೋಷನ್ ವೇಳೆ ಆಕೆ ಕಾಶ್ಮೀರದಲ್ಲಿ ನಡೆದ ನರಮೇಧವನ್ನು `ಗೋ ಸಾಗಾಟಕ್ಕಾಗಿ' ನಡೆಯುವ ಹತ್ಯೆಗಳಿಗೆ ಹೋಲಿಸಿದ್ದಾರೆ. ಆಕೆಯ ಈ ಅಭಿಪ್ರಾಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಹೇಳಿಕೆಗಳು ಕೇಳಿ ಬಂದಿವೆ. ಕೆಲವರು ಸಾಯಿ ಪಲ್ಲವಿ ಅವರ ಮಾತುಗಳನ್ನು ಪ್ರಶಂಸಿಸಿದರೆ ಇನ್ನು ಕೆಲವರು ಅದನ್ನು ಒಪ್ಪಿಲ್ಲ.

ಯುಟ್ಯೂಬ್ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದ ವೇಳೆ ನಟಿಯ ರಾಜಕೀಯ ನಿಲುವಿನ ಬಗ್ಗೆ ಒಂದು ಪ್ರಶ್ನೆ ಕೇಳಲಾಯಿತು. ಆಗ ಆಕೆ ತಾನು ಸೈದ್ಧಾಂತಿಕವಾಗಿ ತಟಸ್ಥ ನಿಲುವು ಹೊಂದಿರುವುದಾಗಿ ಹಾಗೂ ತನ್ನನ್ನು ಇದೇ ರೀತಿ ಬೆಳೆಸಿದ್ದಾಗಿಯೂ  ಹೇಳಿದ್ದಾರೆ.  

"ನಾನು ತಟಸ್ಥ ವಾತಾವರಣದಲ್ಲಿ ಬೆಳೆದವಳು. ಎಡಪಂಥ ಹಾಗೂ ಬಲಪಂಥದ ಬಗ್ಗೆ ನಾನು ಕೇಳಿದ್ದೇನೆ. ಆದರೆ ಯಾರು ಸರಿ ಯಾರು ತಪ್ಪು ಎಂದು ನನಗೆ ಹೇಳಲು ಸಾಧ್ಯವಿಲ್ಲ. ದಿ ಕಾಶ್ಮೀರ್ ಫೈಲ್ಸ್ ಚಿತ್ರವು  ಕಾಶ್ಮೀರಿ ಪಂಡಿತರನ್ನು ಹೇಗೆ ಹತ್ಯೆಗೈಯ್ಯಲಾಯಿತು ಎಂದು ಹೇಳುತ್ತದೆ. ಇತ್ತೀಚೆಗೆ ದನವನ್ನು ಸಾಗಿಸುತ್ತಿದ್ದಾನೆ ಎಂದು ಒಬ್ಬ ವ್ಯಕ್ತಿಯನ್ನು ಹತ್ಯೆಗೈಯ್ಯಲಾಯಿತು ಆತ ಮುಸ್ಲಿಮನೆಂಬ ಶಂಕೆಯಿಂದ ಹತ್ಯೆ ನಡೆಯಿತು. ನಂತರ ದಾಳಿಕೋರರು ಜೈ ಶ್ರೀ ರಾಮ್ ಘೋಷಣೆ ಕೂಗಿದರು. ಕಾಶ್ಮೀರದಲ್ಲಿ ನಡೆದಿರುವುದಕ್ಕೂ ಇತ್ತೀಚೆಗೆ ನಡೆದಿರುವುದಕ್ಕೂ ವ್ಯತ್ಯಾಸವೇನಿದೆ?" ಎಂದು ಆಕೆ ಪ್ರಶ್ನಿಸಿದರು. ಒಳ್ಳೆಯ ಮನುಷ್ಯಳಾಗಬೇಕೆಂದು ನಮಗೆ ಕುಟುಂಬದಲ್ಲಿ ಕಲಿಸಲಾಗಿದೆ.ದೌರ್ಜನ್ಯಕ್ಕೊಳಗಾದವರನ್ನು ರಕ್ಷಿಸಬೇಕು. ಅವರ  ಸ್ಥಾನಮಾನ ಮುಖ್ಯವಲ್ಲ, ಎಂದಿದ್ದಾರೆ.

ʻಜೈ ಶ್ರೀ ರಾಮ್ ಅನ್ನು ಸಾಯಿ ಪಲ್ಲವಿ ಅವರಂತಹ ಜನರು ಎಳೆದು ತರುವುದೇಕೆ? ಎಂದು ಒಬ್ಬ ಟ್ವಿಟ್ಟರಿಗರು ವಿರೋಧ ವ್ಯಕ್ತಪಡಿಸಿದ್ದು, ಹಲವಾರು ಬಲಪಂಥೀಯರು ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬರು ಆಕೆಯನ್ನು ಬೆಂಬಲಿಸಿ ʻʻಹಿಂಸೆ ಹೇಗಿದ್ದರೂ ಹಿಂಸೆಯೇ, ಯಾರು ಅದನ್ನು ಯಾವುದೇ ವಿಧದಲ್ಲಿ ನಡೆಸಿದರೂ ಅದು ಹಿಂಸೆಯೇ. ನಮಗೆ ಸಾಮಾಜಿಕವಾಗಿ ಜವಾಬ್ದಾರಿಯುತವಾಗಿರುವ ಇಂತಹ ನಟಿಯ ಅವಶ್ಯಕತೆಯಿದೆ" ಎಂದು ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News